ಹೈಲೈಟ್ಸ್:
- ಪಾಲಿಕೆಗೆ ಪ್ರಯಾಣಿಕರು, ನಾಗರಿಕರ ಹಿಡಿಶಾಪ
- ರಸ್ತೆಗಳ ಗುಂಡಿಗೆ ಮಣ್ಣು ತಂದ ಅವಾಂತರ
- ಮೈಸೂರು ಸೌಂದರ್ಯಕ್ಕೆ ಮಸಿ ಬಳಿ ರಸ್ತೆಗುಂಡಿಗಳು
ಮೈಸೂರು: ‘ಇದು ಸುಂದರ ಮೈಸೂರೇ ಎನ್ನುವ ಸಂಶಯ ಮೂಡುವಂತೆ ನಮ್ಮ ರಸ್ತೆಗಳಿವೆ.. ಇಲ್ಲಿ ರಸ್ತೆಯಲ್ಲಿ ಗುಂಡಿಗಳಿಲ್ಲ, ಆದರೆ, ಗುಂಡಿಗಳ ನಡುವೆ ರಸ್ತೆ ಇದೆ ಎನ್ನುವಂತಾಗಿದೆ. ಇಲ್ಲಿಯವರೆಗೆ ಅರಮನೆ ನಗರಿ ಇಂತಹ ಸ್ಥಿತಿಗೆ ಬಂದಿರಲಿಲ್ಲ. ಪಾಲಿಕೆಗಂತೂ ನಾಚಿಕೆಯಾಗಬೇಕು…’
ಇದು ಮೈಸೂರಿನ ನಾಗರಿಕರು, ಪ್ರಯಾಣಿಕರು, ಚಾಲಕರು, ಸವಾರರ ಅಭಿಪ್ರಾಯ. ‘ಮೈಸೂರಿನ ಯಾವ ರಸ್ತೆಗೇ ಹೋಗಿ ನೋಡಿ. ಅದು ಗುಂಡಿಗಳ ಸಾಮ್ರಾಜ್ಯವಾಗಿದೆ. ಕಳೆದ ಒಂದು ವರ್ಷದಿಂದ ಗುಂಡಿ ಮುಚ್ಚುವ ಕಾರ್ಯ ಕೂಡ ನಡೆದಿಲ್ಲ. ಮಳೆ ಬರುತ್ತಿತ್ತು ನಿಜ. ಈ ಅವಧಿಯಲ್ಲಿ ಎಲ್ಲಾ ರಸ್ತೆಗಳನ್ನು ಒಮ್ಮೆಗೆ ಡಾಂಬರೀಕರಣ ಮಾಡಿ ಎಂದು ಹೇಳುತ್ತಿಲ್ಲ. ಆದರೆ, ಕನಿಷ್ಠ ಪಕ್ಷ ಡಾಂಬರಿನಿಂದ ಗುಂಡಿಮುಚ್ಚಿದ್ದರೂ ಸಾಕಿತ್ತು’ ಎನ್ನುತ್ತಿದ್ದಾರೆ.
ಮಣ್ಣು ಹಾಕಿ ಅವಾಂತರ: ಮೈಸೂರಿನ ರಸ್ತೆಗಳ ಗುಂಡಿಯನ್ನು ಮಣ್ಣಿನಿಂದ ಮುಚ್ಚುವ ಮೂಲಕ ಪಾಲಿಕೆ ಕಾರ್ಯ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಾರಕೊಮ್ಮೆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲು ಭಾರಿ ವೆಚ್ಚ ಮಾಡಲಾಗುತ್ತಿದೆ. ಟ್ರ್ಯಾಕ್ಟರ್, ಜೆಸಿಬಿಗಳ ಮೂಲಕ ರಾಶಿ ರಾಶಿ ಮಣ್ಣನ್ನು ಕೊರೆದು ರಸ್ತೆಗೆ ತಂದು ಸುರಿಯಲಾಗುತ್ತಿದೆ. ಇದರಿಂದ ಕೇವಲ ಮಣ್ಣು ಮಾತ್ರವಲ್ಲದೆ ಅದರೊಂದಿಗೆ ಕಲ್ಲುಗಳು ಸೇರಿ ದ್ವಿಚಕ್ರ ವಾಹನ ಸವಾರರು ಬೀಳುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಬಸ್, ಕಾರು, ಲಾರಿಗಳು ತೆರಳಿದರಂತೂ ಸಾರ್ವಜನಿಕರಿಗೆ ಧೂಳಿನ ಸ್ನಾನವಾಗುತ್ತಿದೆ.
ಕಳೆದ ಹಲವು ತಿಂಗಳಿನಿಂದ ಹೀಗೆ ರಸ್ತೆಗೆ ಮಣ್ಣು ಹಾಕುತ್ತಿದ್ದು, ಕೇವಲ ನಾಲ್ಕೈದು ದಿನದಲ್ಲಿ ಮತ್ತೆ ಗುಂಡಿಗಳ ದರ್ಶನವಾಗುತ್ತದೆ. ಒಂದು ಮಳೆ ಬಿದ್ದರಂತೂ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಮಣ್ಣು ತಾತ್ಕಾಲಿಕ ಹಾಗೂ ಅಪಾಯಕಾರಿ ಎಂದು ತಿಳಿದಿದ್ದರೂ ಪಾಲಿಕೆ ಇದನ್ನೇ ಮುಂದುವರಿಸಿಕೊಂಡು ಬರುತ್ತಿದೆ. ವೈಜ್ಞಾನಿಕ ಕಾಮಗಾರಿ ಹಮ್ಮಿಕೊಳ್ಳದ ಪಾಲಿಕೆಯಲ್ಲಿ ಎಂಜಿನಿಯರ್‌ಗಳಿಲ್ಲವೇ? ಉಸ್ತುವಾರಿ ನೋಡಿಕೊಳ್ಳುವವರಿಲ್ಲವೇ ಎಂದು ಜನರು ಪ್ರಶ್ನಿಸುವಂತಾಗಿದೆ. ಪಾಲಿಕೆ ಮೇಯರ್, ಉಪಮೇಯರ್ ಸೇರಿದಂತೆ ಸದಸ್ಯರು ಇತ್ತ ಗಮನ ಹರಿಸದಿರುವುದು ಕೂಡ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರಿಗೇ ಅವಮಾನ
ಕೋವಿಡ್ ಲಾಕ್‌ಡೌನ್ ಬಳಿಕ ಮೈಸೂರಿಗೆ ಸಾಕಷ್ಟು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ ಹಾಗೂ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರೆ ಅವರಿಗೆ ರಸ್ತೆಗಳು ನರಕಯಾತನೆ ನೀಡುತ್ತಿವೆ. ಮೈಸೂರು ಸುಂದರವಾಗಿದ್ದರೂ ರಸ್ತೆಗಳು ಶೋಚನೀಯವಾಗಿವೆ. ದೂರದ ಪ್ರದೇಶದಿಂದ ಆಗಮಿಸುವಾಗ ಆಗದ ಬಳಲಿಕೆ ನಗರದ ರಸ್ತೆಗಳಲ್ಲಿ ತೆರಳುವಾಗ ಆಗುತ್ತದೆ. ಇಲ್ಲಿನ ರಸ್ತೆಗಳಲ್ಲಿ ಪ್ರಯಾಣಿಸುವುದೇ ಹಿಂಸೆ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ರಸ್ತೆಗಳು ಮೈಸೂರಿಗೇ ಅವಮಾನ ಮಾಡುವಂತಿವೆ.
ದಿನವೂ ಅಗೆತ.. ಶಾಪದ ಮೊರೆತ!
ಒಂದೆಡೆ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಬೀಳುತ್ತಿದ್ದರೆ ಮತ್ತೊಂದೆಡೆ ರಸ್ತೆಗಳನ್ನು ಅಗೆಯುತ್ತಲೇ ಇದ್ದಾರೆ. ರಸ್ತೆ ಉತ್ತಮ ಸ್ಥಿತಿಯಲ್ಲಿದ್ದರೂ ಕೇಬಲ್, ವಿದ್ಯುತ್ ತಂತಿ, ಯುಜಿಡಿ, ನೀರಿನ ಸಂಪರ್ಕಕ್ಕೆ ಅಗೆಯುತ್ತಿದ್ದಾರೆ. ಇದಕ್ಕೆ ದಂಡ ಕಟ್ಟಿಸಿಕೊಳ್ಳುತ್ತಿರುವ ಪಾಲಿಕೆ ತಿರುಗಿ ನೋಡುತ್ತಿಲ್ಲ. ಇದರಿಂದಾಗಿ ರಸ್ತೆ ಮಧ್ಯೆಯೇ ಗುಂಡಿ ಅನ್ನುವುದಕ್ಕಿಂತ ಚರಂಡಿ ತೆಗೆದಂತೆ ಕಂಡು ಬರುತ್ತಿದೆ. ವಾಹನ ಸವಾರರಿಗೆ ಇಲ್ಲಿ ಬೆನ್ನು ನೋವು ‘ಉಚಿತ’ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಕೆಯ ನಿರ್ಲಕ್ಷ್ಯಕ್ಕೆ ಶಾಪ ಹಾಕುತ್ತಲೇ ಇದ್ದಾರೆ.
ನಗರ ಪಾಲಿಕೆಯವರಿಗೆ ನಾಚಿಕೆಯಾಗಬೇಕು. ಪಾಲಿಕೆ ಸತ್ತೇ ಹೋಗಿದೆ. ಮೈಸೂರಿನ ರಸ್ತೆಯನ್ನು ಸರಿಪಡಿಸಿ ಎಂದರೆ ಹೀಗೆ ಮಣ್ಣು ಹಾಕುತ್ತಿದ್ದಾರಲ್ಲ, ಇವರಿಗೆ ಬುದ್ಧಿ ಇದೆಯೇ? ಒಂದು ಮಳೆ ಬಂದರೂ ಮಣ್ಣು ಕೊಚ್ಚಿ ಹೋಗುತ್ತದೆ. ಇವರಿಗೆ ಯಾವ ರೀತಿ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಆಟೋ ಚಾಲಕ ನಾಗರಾಜ್ ಗೌಡ