Karnataka news paper

ಡೇಟಾ ಸೆಂಟರ್‌ಗಳಿಗೆ ಸಿಗಲಿದೆ ಕಡಿಮೆ ಬಡ್ಡಿಯ ಸಾಲ, ಅಂಬಾನಿ, ಅದಾನಿ, ಮಿತ್ತಲ್‌ಗೆ ಭಾರೀ ಲಾಭ!


ಡೇಟಾ ಸೆಂಟರ್‌ಗಳು (ದತ್ತಾಂಶ ಕೇಂದ್ರಗಳು) ಮತ್ತು ಇಂಧನ ಸಂಗ್ರಹಣೆ (ಬ್ಯಾಟರಿ, ಚಾರ್ಜಿಂಗ್‌ ಸ್ಟೇಷನ್‌)ಯನ್ನು ಮೂಲಸೌಕರ್ಯ ಆಸ್ತಿಗಳಾಗಿ ವರ್ಗೀಕರಿಸುವ ಸರಕಾರದ ಯೋಜನೆಗಳಿಂದ ಸಂಸ್ಥೆಗಳಿಗೆ ಅಗ್ಗದ ದರದಲ್ಲಿ ದೀರ್ಘಾವಧಿಯ ಸಾಲವನ್ನು ಪಡೆಯಲು ಅವಕಾಶ ಸಿಗಲಿದೆ. ಇದರಿಂದ ಬಿಲಿಯನೇರ್‌ಗಳಾದ ಗೌತಮ್ ಅದಾನಿ, ಮುಕೇಶ್ ಅಂಬಾನಿ ಮತ್ತು ಸುನಿಲ್ ಮಿತ್ತಲ್‌ಗೆ ಈ ವಿಭಾಗಗಳಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗಲು ಭಾರೀ ಉತ್ತೇಜನ ಸಿಗಲಿದೆ.

“ಚಾರ್ಜಿಂಗ್ ಮೂಲಸೌಕರ್ಯ ಮತ್ತು ಗ್ರಿಡ್-ಪ್ರಮಾಣದ ಬ್ಯಾಟರಿ ವ್ಯವಸ್ಥೆಗಳನ್ನು ಒಳಗೊಂಡ ಇಂಧನ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಡೇಟಾ ಕೇಂದ್ರಗಳು ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಸೇರಿಸಲ್ಪಡುತ್ತವೆ,” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ವಾರ್ಷಿಕ ಬಜೆಟ್ ಭಾಷಣದ ಭಾಗವಾಗಿ ಮಂಗಳವಾರ ಹೇಳಿದ್ದಾರೆ. “ಇದು ಡಿಜಿಟಲ್ ಮೂಲಸೌಕರ್ಯ ಮತ್ತು ಶುದ್ಧ ಇಂಧನ ಸಂಗ್ರಹಣೆಗಾಗಿ ಕ್ರೆಡಿಟ್ ಲಭ್ಯತೆಯನ್ನು ಸುಗಮಗೊಳಿಸುತ್ತದೆ,” ಎಂದು ಅವರು ವಿವರಿಸಿದ್ದಾರೆ.

ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಭಾರತವು ತನ್ನ ಡೇಟಾಗಳನ್ನು ತನ್ನದೇ ಗಡಿಯೊಳಗೆ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಜತೆಗೆ ಆನ್‌ಲೈನ್ ಪಾವತಿಗಳು, ಇ-ಕಾಮರ್ಸ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ ಕೂಡ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದ್ದು, ಹೊಸ ನೀತಿಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಅಲ್ಟ್ರಾ ಸ್ಪೀಡ್‌ನ 5ಜಿ ಟೆಲಿಕಾಂ ಸೇವೆಗಳು ಜಾರಿಗೆ ಬರುತ್ತಿದ್ದಂತೆ ಡೇಟಾ ಸೆಂಟರ್ ಸೇವೆಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಲಿದ್ದು, ಅದಾನಿ ಮತ್ತು ಮಿತ್ತಲ್ ನೇತೃತ್ವದ ಸಂಘಟಿತ ಸಂಸ್ಥೆಗಳಿಗೆ ಈ ಕ್ಷೇತ್ರದಲ್ಲಿ ತ್ವರಿತ ಹೂಡಿಕೆ ಮಾಡಲು ಉತ್ತೇಜಿಸಲಿವೆ. 76 ಬಿಲಿಯನ್‌ ಹೂಡಿಕೆ ಯೋಜನೆಯ ಭಾಗವಾಗಿ ಇಂಧನ ಸಂಗ್ರಹಕ್ಕೂ ಗಿಗಾಫ್ಯಾಕ್ಟರಿಯನ್ನು ಅಭಿವೃದ್ಧಿಪಡಿಸುತ್ತಿರುವ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೂಡ ಈ ಮರುವರ್ಗೀಕರಣದಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ.

ರಕ್ಷಣೆಯಲ್ಲೂ ‘ಆತ್ಮನಿರ್ಭರ’, ಕಳೆದ ಬಾರಿಗಿಂತ 10% ಹೆಚ್ಚು ಹಣ, ₹5.25 ಲಕ್ಷ ಕೋಟಿ ಮೀಸಲು
ಮೂಲಸೌಕರ್ಯ ಪಟ್ಟಿಗೆ ಸೇರ್ಪಡೆಯಿಂದ ‘ಅಗ್ಗದ ಮತ್ತು ದೀರ್ಘಾವಧಿಯ ಸಾಂಸ್ಥಿಕ ನಿಧಿಗಳಿಗೆ ಪ್ರವೇಶವನ್ನು ಒದಗಿಸುವ ನಿರೀಕ್ಷೆಯಿದೆ. ಇದು ಹೂಡಿಕೆಗಳನ್ನು ಉತ್ತೇಜಿಸುತ್ತದೆ,’ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಜೆಎಲ್‌ಎಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಭಾರತದ ಮುಖ್ಯಸ್ಥೆ ರಾಧಾ ಧೀರ್ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಭಾರತದ ಡೇಟಾ ಸೆಂಟರ್ ಸಾಮರ್ಥ್ಯವು 2021ರ ಮೊದಲಾರ್ಧದಲ್ಲಿ ಇದ್ದ 499 ಮೆಗಾವ್ಯಾಟ್‌ಗಳಿಂದ ಮುಂದಿನ ವರ್ಷದ ವೇಳೆಗೆ ದುಪ್ಪಟ್ಟು ಏರಿಕೆಯಾಗಲಿದ್ದು 1,008 ಮೆಗಾವ್ಯಾಟ್‌ಗಳಿಗೆ ಏರಿಕೆಯಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Budget 2022: ಸೆಂಟ್ರಲ್ ವಿಸ್ಟಾ ಯೋಜನೆಯ ವಸತಿಯೇತರ ಕಟ್ಟಡಗಳಿಗೆ 2,600 ಕೋಟಿ ರೂ ಹಂಚಿಕೆ
ನವೆಂಬರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್‌ ಅದಾನಿ, ತಮ್ಮ ಸಮೂಹ ಗ್ರೀನ್‌ ಡೇಟಾ ಸ್ಟೋರೇಜ್‌ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿ ಇರಬೇಕು ಎಂದು ಬಯಸಿರುವುದಾಗಿ ಹೇಳಿದ್ದರು. ಈ ಮೂಲಕ ಶುದ್ಧ ಇಂಧನದಿಂದಲೇ ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸುವ ಬಯಕೆ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ನವದೆಹಲಿಯ ಸುತ್ತ ಮುತ್ತ ಡೇಟಾ ಕೇಂದ್ರಗಳನ್ನು ನಿರ್ಮಿಸಲು ಅದಾನಿ ಗ್ರೂಪ್‌ ಯೋಜನೆ ರೂಪಿಸಿದೆ.

ಬರಲಿವೆ 400 ವಂದೇ ಭಾರತ್‌ ಟ್ರೇನ್‌, ಇಲ್ಲಿದೆ ₹ 1.4 ಲಕ್ಷ ಕೋಟಿ ರೈಲ್ವೆ ಬಜೆಟ್‌ನ ಕಂಪ್ಲೀಟ್‌ ಡಿಟೇಲ್ಸ್‌
ಸುನಿಲ್‌ ಮಿತ್ತಲ್‌ ನೇತೃತ್ವದ ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್‌ ಕೂಡ ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು 2025ರ ವೇಳೆಗೆ 400 ಮೆಗಾವ್ಯಾಟ್‌ಗಳಿಗೆ ಹೆಚ್ಚಿಸುವ ಗುರಿ ಹೊಂದಿದ್ದು 5000 ಕೋಟಿ ರೂ. (671 ಮಿಲಿಯನ್ ಡಾಲರ್‌) ಹೂಡಿಕೆ ಮಾಡುವುದಾಗಿ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಿತ್ತು. ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ರಿಲಯನ್ಸ್‌ನ ಡಿಜಿಟಲ್ ಘಟಕ ಕೂಡ ಡೇಟಾ ಸೆಂಟರ್ ಸ್ಥಾಪನೆಗೆ ಯೋಚಿಸುತ್ತಿದೆ.

ಬಜೆಟ್‌ನಲ್ಲಿ ಘೋಷಿಸಲಾದ ಪಾಲಿಸಿ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಅದಾನಿ ಗ್ರೂಪ್, ರಿಲಯನ್ಸ್ ಮತ್ತು ಭಾರ್ತಿ ಏರ್‌ಟೆಲ್‌ನ ಪ್ರತಿನಿಧಿಗಳಿಗೆ ಕಳುಹಿಸಿದ್ದ ಇ-ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more…

[wpas_products keywords=”deal of the day”]