Karnataka news paper

ಪ್ರೇಮಿಗಳ ದಿನಾಚರಣೆಗೆ ಈ ವರ್ಷವೂ ಗುಲಾಬಿ ರಫ್ತಿಗೆ ಹೊಡೆತ! ಸಂಕಷ್ಟದಲ್ಲಿ ಬೆಳೆಗಾರರು


ಬೆಂಗಳೂರು: ಕೋವಿಡ್‌ ಪ್ರಕರಣಗಳು ಕಡಿಮೆಯಾಗಿವೆ. ವಿಮಾನಗಳ ಸಂಚಾರ ಆರಂಭವಾಗಿದೆ. ಸರಕಾರ ಕೂಡ ಕೋವಿಡ್‌ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದೆ. ಹೀಗಿದ್ದರೂ ಈ ಬಾರಿ ಪ್ರೇಮಿಗಳ ದಿನ (ಫೆ.14)ಕ್ಕೆ ಹೊರ ರಾಷ್ಟ್ರಗಳಿಗೆ ಕರುನಾಡ ಗುಲಾಬಿ ಹೆಚ್ಚು ರಫ್ತಾಗುತ್ತಿಲ್ಲ.

ಈ ಬಾರಿ ವಿಮಾನ ದರ ಶೇ.30ರಷ್ಟು ಏರಿಕೆಯಾದ ಪರಿಣಾಮ ಕೆಂಗುಲಾಬಿಗಳ ರಫ್ತು ಪ್ರಮಾಣ ಕುಸಿದಿದೆ. ಈಗಾಗಲೇ ಡಚ್‌ ಗುಲಾಬಿಗಳಿಗೆ ಹೊರ ರಾಷ್ಟ್ರಗಳಿಂದ ಬೇಡಿಕೆ ಬರಬೇಕಿತ್ತು. ಆದರೆ, ಈ ಬಾರಿ ರಫ್ತುದಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಪ್ರತಿ ವರ್ಷ 40-50 ಲಕ್ಷ ಗುಲಾಬಿ ರಫ್ತಾಗುತ್ತಿದ್ದರೆ, ಈ ವರ್ಷ ಸುಮಾರು 15-16 ಲಕ್ಷ ರಫ್ತಾದರೆ ಹೆಚ್ಚು ಎನ್ನುವಂತಾಗಿದೆ.

ಈ ಹಿಂದೆ ಒಂದು ಗುಲಾಬಿ ಹೂವನ್ನು ಹೊರದೇಶಕ್ಕೆ ಕಳುಹಿಸಲು 15 ರೂ. ವೆಚ್ಚ ತಗಲುತ್ತಿತ್ತು. ಅದೇ ಹೂವಿಗೆ ಇಂದು ದುಪ್ಪಟ್ಟು(35-40 ರೂ.) ದರ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯೇ ವಿಮಾನ ದರ ಏರಿಕೆಗೆ ಪ್ರಮುಖ ಕಾರಣ. ಜತೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವಿಮಾನ ಸಂಚಾರವಿಲ್ಲದೆ ನಷ್ಟ ಅನುಭವಿಸಲಾಗಿತ್ತು. ಹೀಗಾಗಿ ದರ ಹೆಚ್ಚಾಗಿದ್ದು ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ. ಜತೆಗೆ ವಿದೇಶಗಳಲ್ಲಿಈ ಹಿಂದಿನಂತೆ ಪ್ರೇಮಿಗಳ ದಿನ ಆಚರಣೆಯಲ್ಲಿ ಸಂಭ್ರಮದ ವಾತಾವರಣ ಇಲ್ಲದಿರುವುದರಿಂದ ಈ ವರ್ಷವೂ ರಫ್ತು ಪ್ರಮಾಣ ಕುಸಿದಿದೆ.
ಬದನೆಕಾಯಿ ಫಸಲು ಸಮೃದ್ಧವಾಗಿದ್ದರೂ ನಿರೀಕ್ಷಿತ ಬೆಂಬಲ ಬೆಲೆ ಇಲ್ಲದೆ ರೈತರು ಕಂಗಾಲು!
ಕಳೆದ ವರ್ಷ ಈ ಅವಧಿಯಲ್ಲಿ ಸುಮಾರು 10-15 ಲಕ್ಷ ಗುಲಾಬಿ ಹೂಗಳು ಹೊರ ರಾಷ್ಟ್ರಗಳಿಗೆ ರಫ್ತಾಗಿದ್ದವು. ಈ ಬಾರಿ ಶೇ.10ರಷ್ಟು ಹೆಚ್ಚು ಹೂ ರಫ್ತಾಗಲಿದೆ ಎನ್ನುತ್ತಾರೆ ಸೌತ್‌ ಇಂಡಿಯಾ ಫ್ಲೋರಿಕಲ್ಚರ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಪಿ.ಜಗನ್ನಾಥ ರಾಜು.

ಸ್ಥಳೀಯ ಮಾರುಕಟ್ಟೆಯಲ್ಲಿ ಗುಲಾಬಿಗೆ ಬೇಡಿಕೆ:
ಈ ಬಾರಿ ಸ್ಥಳೀಯ ಮಾರುಕಟ್ಟೆಯಲ್ಲಿ ಗುಲಾಬಿ ಹೂವುಗಳಿಗೆ ಹೆಚ್ಚು ಬೇಡಿಕೆಯಿದೆ. ಇದು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಅಲ್ಲ. ಬದಲಿಗೆ ಕಳೆದ ಕೆಲವು ತಿಂಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳು ನಡೆದಿಲ್ಲ. ಇದೀಗ ಫೆಬ್ರವರಿಯಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದು, ವೇದಿಕೆಗಳ ಅಲಂಕಾರಕ್ಕಾಗಿ ಹೆಚ್ಚಿನ ಡಚ್‌ ಗುಲಾಬಿ ಹೂಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಟಿ.ಎಂ.ಅರವಿಂದ್‌.

ಎಲ್ಲೆಲ್ಲಿಗೆ ಗುಲಾಬಿ ರಫ್ತು?
ದುಬೈ, ಮಲೇಷಿಯಾ, ಸಿಂಗಾಪುರ, ಆಸ್ಪ್ರೇಲಿಯಾಗಳಿಂದ ಈಗಾಗಲೇ ಬೇಡಿಕೆ ಬಂದಿದೆ. ನ್ಯೂಜಿಲೆಂಡ್‌, ಶ್ರೀಲಂಕಾ, ಈಜಿಪ್ಟ್‌, ಒಮನ್‌, ಫ್ರಾನ್ಸ್‌, ಇಂಡೋನೇಷ್ಯಾ, ನೆದರ್‌ಲ್ಯಾಂಡ್‌, ಜಪಾನ್‌ ಮತ್ತಿತರ ರಾಷ್ಟ್ರಗಳಿಗೂ ಗುಲಾಬಿ ರಫ್ತಾಗಲಿವೆ. ಫೆ.10ರವರೆಗೆ ರಫ್ತು ಪ್ರಕ್ರಿಯೆ ನಡೆಯಲಿದೆ.



Read more

[wpas_products keywords=”deal of the day sale today offer all”]