Karnataka news paper

ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ಕೆಲಸದಿಂದ ವಜಾಗೊಳಿಸಲಿರುವ ಗೂಗಲ್: ವರದಿ


ನವದೆಹಲಿ: ತನ್ನ ಸಂಸ್ಥೆಯ ಉದ್ಯೋಗಿಗಳು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ ವೇತನ ಕಡಿತದ ಜತೆಗೆ ಕ್ರಮೇಣ ಕೆಲಸದಿಂದ ವಜಾ ಮಾಡುವ ಕ್ರಮಕ್ಕೆ ತಂತ್ರಜ್ಞಾನ ದೈತ್ಯ ಗೂಗಲ್ ಮುಂದಾಗಿದ್ದು, ಈ ಕುರಿತು ಉದ್ಯೋಗಿಗಳಿಗೆ ಸೂಚನೆ ನೀಡಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ ಗೂಗಲ್ ಹೊರಡಿಸಿರುವ ಜ್ಞಾಪನಪತ್ರದಲ್ಲಿ ವ್ಯಾಕ್ಸಿನೇಷನ್ ಸ್ಥಿತಿ ಘೋಷಿಸಲು ಮತ್ತು ಕೋವಿಡ್ ಪ್ರಮಾಣಪತ್ರ ಅಪ್‌ಲೋಡ್ ಮಾಡಲು ಹಾಗೂ ವೈದ್ಯಕೀಯ ಅಥವಾ ಧಾರ್ಮಿಕ ವಿನಾಯಿತಿಗಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್ 3ರ ವರೆಗೆ ಸಮಯಾವಕಾಶ ನೀಡಲಾಗಿತ್ತು ಎಂದು ಹೇಳಿದೆ.

ನಿಗದಿತ ವಾಯಿದೆ ಮುಗಿದರೂ ಕೋವಿಡ್ ಪ್ರಮಾಣಪತ್ರ ಅಪ್‌ಲೋಡ್ ಮಾಡದ ಅಥವಾ ಲಸಿಕೆ ಹಾಕಿಸಿಕೊಳ್ಳದ ಮತ್ತು ವಿನಾಯಿತಿ ವಿನಂತಿಗಳಿಗೆ ಅನುಮೋದನೆ ಲಭಿಸದ ಉದ್ಯೋಗಿಗಳನ್ನು ಗೂಗಲ್ ಸಂರ್ಪಕಿಸಲು ಪ್ರಾರಂಭಿಸಲಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.

ಜನವರಿ 18ರ ಒಳಗೆ ಕೋವಿಡ್ ಲಸಿಕೆ ನಿಯಮಗಳನ್ನು ಪಾಲಿಸದ ಉದ್ಯೋಗಿಗಳನ್ನು 30 ದಿನಗಳವರೆಗೆ ಪಾವತಿ ಸಹಿತ ರಜೆಯಲ್ಲಿ ಇರಿಸಲಾಗುತ್ತದೆ. ಬಳಿಕ ಆರು ತಿಂಗಳವರಗೆ ಪಾವತಿ ರಹಿತ ವೈಯಕ್ತಿಕ ರಜೆ ಮತ್ತು ಅಂತಿಮವಾಗಿ ವಜಾಗೊಳಿಸಲಾಗುತ್ತದೆ ಎಂದು ಹೇಳಿದೆ.

ಈ ಕುರಿತು ಗೂಗಲ್ ಸಂಸ್ಥೆಯನ್ನು ರಾಯಿಟರ್ಸ್ ಸಂಪರ್ಕಿಸಿದಾಗ, ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಉದ್ಯೋಗಿಗಳು ಕಚೇರಿಗೆ ಹಿಂತಿರುಗುವುದನ್ನು ಗೂಗಲ್ ಅಲ್ಪ ವಿಳಂಬಗೊಳಿಸಿತ್ತು. ಅಲ್ಲದೆ ಎಲ್ಲ ಉದ್ಯೋಗಿಗಳಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.



Read more from source