Karnataka news paper

ಸಂತೆಯಲ್ಲಿ ಬೆಲೆ ಏರಿಕೆಯದ್ದೇ ಚಿಂತೆ; ಚೌಕಾಸಿ ವ್ಯಾಪಾರ ನಡೆಸುತ್ತಿರುವ ಗ್ರಾಹಕರು ಮತ್ತು ವ್ಯಾಪಾರಿಗಳು!


ಹೈಲೈಟ್ಸ್‌:

  • ಕಳೆದ ತಿಂಗಳಿನಿಂದ ಸುರಿದ ಅಕಾಲಿಕ ಮಳೆ ಹಾಗೂ ಈವರೆಗೆ ಮುಂದುವರಿದ ಮೋಡ ಮುಸುಕಿದ ವಾತಾವರಣದಿಂದಾಗಿ ರೈತರು ಬೆಳೆದ ತರಕಾರಿ, ಹಣ್ಣುಗಳು ಕೊಳೆತು ಹೋಗಿವೆ
  • ಸಂಡೂರು ತಾಲೂಕಿನಲ್ಲಿ 90 ಸಾವಿರ ಹೆಕ್ಟೇರ್‌ ಭೌಗೋಳಿಕ ಪ್ರದೇಶವಿದ್ದರೂ ಕೃಷಿ ಯೋಗ್ಯ ಭೂಮಿಯಿರುವುದು ಕೇವಲ 29 ಸಾವಿರ ಹೆಕ್ಟೇರ್‌ ಮಾತ್ರ
  • ನಾವು ಖರೀದಿಸಿರುವುದೆ ದುಬಾರಿ ಬೆಲೆಗೆ, ಹಣ ಕೊಟ್ಟರೂ ಹಣ್ಣು, ತರಕಾರಿ ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ಗೊಣಗುತ್ತಿದ್ದಾರೆ

ಪಿ.ವೀರೇಂದ್ರಗೌಡ, ಸಂಡೂರು
ಸಂಡೂರು: ಗಗನಕ್ಕೇರಿದ ಹಣ್ಣು, ತರಕಾರಿ ಬೆಲೆ, ಹಸಿರು ಸೊಪ್ಪಿಗೂ ಬರ, ಇವು ಕಳೆದ ತಿಂಗಳಿನಿಂದ ಸುರಿದ ಅಕಾಲಿಕ ಮಳೆಯ ಅವಾಂತರದಿಂದಾಗಿ ಮಾರುಕಟ್ಟೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳು ಎದುರಿಸುತ್ತಿರುವ ಸಧ್ಯದ ಸಂಕಟದ ಸಾಲುಗಳು.

ಪಟ್ಟಣದ ಸರಕಾರಿ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಯ ಚಿತ್ರಣಗಳಿವು. ಕಳೆದ ತಿಂಗಳಿನಿಂದ ಸುರಿದ ಅಕಾಲಿಕ ಮಳೆ ಹಾಗೂ ಈವರೆಗೆ ಮುಂದುವರಿದ ಮೋಡ ಮುಸುಕಿದ ವಾತಾವರಣದಿಂದಾಗಿ ರೈತರು ಬೆಳೆದ ತರಕಾರಿ, ಹಣ್ಣುಗಳು ಕೊಳೆತು ಹೋಗಿವೆ. ಪರಿಣಾಮ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿಯ ಕೊರತೆಯುಂಟಾಗಿದೆ.

ಸಂಡೂರು ತಾಲೂಕಿನಲ್ಲಿ 90 ಸಾವಿರ ಹೆಕ್ಟೇರ್‌ ಭೌಗೋಳಿಕ ಪ್ರದೇಶವಿದ್ದರೂ ಕೃಷಿ ಯೋಗ್ಯ ಭೂಮಿಯಿರುವುದು ಕೇವಲ 29 ಸಾವಿರ ಹೆಕ್ಟೇರ್‌ ಮಾತ್ರ. ಉಳುಮೆ ಭೂಮಿಯ ಶೇ.50 ರಷ್ಟು ಭೂಮಿ ಚೋರನೂರು ಹೋಬಳಿಯ ಭಾಗದಲ್ಲಿದೆ. ಆದ್ದರಿಂದ ಈ ಭಾಗದಲ್ಲಿ ಹಣ್ಣು, ತರಕಾರಿ ಬೆಳೆಯುವುದು ತೀರಾ ಕಡಿಮೆ. ಪರಿಣಾಮ ದೂರದ ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಕಾನಾಹೊಸಳ್ಳಿ ಸೇರಿ ನಾನಾ ಕಡೆಯಿಂದ ಇಲ್ಲಿನ ವಾರದ ಸಂತೆಗೆ ತರಕಾರಿ, ಹಣ್ಣುಗಳನ್ನು ತಂದು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ.

ನಾವು ಖರೀದಿಸಿರುವುದೆ ದುಬಾರಿ ಬೆಲೆಗೆ, ಹಣ ಕೊಟ್ಟರೂ ಹಣ್ಣು, ತರಕಾರಿ ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ಗೊಣಗುತ್ತಿದ್ದಾರೆ. ದುಬಾರಿ ಬೆಲೆ ತೆತ್ತು ಖರೀದಿಸಿದ ಗ್ರಾಹಕರು ಹಣ ಕಳೆದುಕೊಂಡು ಕೈ ಸುಟ್ಟುಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಟೊಮೇಟೊ, ತರಕಾರಿ ದರ ತುಸು ಇಳಿಕೆ: ಆದ್ರೆ ಎಲೆಕೋಸು, ಬೀಟ್ ರೂಟ್ ದರ ಏರಿಕೆ
ತರಕಾರಿಗಳ ಬೆಲೆ ಹೀಗಿದೆ
ಕೆಲ ತಿಂಗಳ ಹಿಂದೆ ತೀವ್ರ ಬೆಲೆ ಕುಸಿತ ಕಂಡಿದ್ದ ಟೊಮೇಟೊ, ಈರುಳ್ಳಿ ಬೆಲೆ ಅತಿಯಾದ ಬೆಲೆ ಏರಿಕೆ ಕಂಡಿವೆ. ಟೊಮೇಟೊ 60-80 ರೂ.ಗೆ ಕೆ.ಜಿ. ಈರುಳ್ಳಿ 50-60 ರೂ.ಗೆ ಕೆ.ಜಿ. ಬೆಂಡೆಕಾಯಿ, ಜವಳೆಕಾಯಿ, ಹೀರೆಕಾಯಿ, ಬದನೆಕಾಯಿ ಈ ಹಿಂದೆ ತಲಾ 40 ರೂ.ಗೆ ಕೆ.ಜಿ.ಯಂತೆ ಮಾರಾಟವಾಗುತ್ತಿತ್ತು ಇದೀಗ ಬರೊಬ್ಬರಿ 80 ರೂ.ಗೆ ಕೆ.ಜಿ.ಮಾರಾಟವಾಗುತ್ತಿದೆ. ಕೊತ್ತಂಬರಿ, ಪುದೀನಾ, ಪಾಲಕ್‌, ಮೆಂತೆ ಸೊಪ್ಪು ಪ್ರತಿ ಸಣ್ಣ ಸಿವುಡಿಗೆ 10 ರೂ.ಗೆ ಮಾರಾಟವಾಗುತ್ತಿದ್ದರೂ ಗುಣಮಟ್ಟವಿಲ್ಲ. ಅರ್ಧದಷ್ಟು ಕೊಳೆತ, ದುರ್ವಾಸನೆ ಬೀರುವ ಸೊಪ್ಪನ್ನು ಮಾರಾಟ ಮಾಡಲಾಗುತ್ತಿದೆ.

ಹಣ್ಣುಗಳ ಬೆಲೆ ಗಗನಮುಖಿ
ಹಣ್ಣುಗಳ ಬೆಲೆಯಲ್ಲೂ ಸಾಕಷ್ಟು ಏರಿಕೆಯಾಗಿದೆ. ಸಪೋಟ, ಪೇರಲ, ಏಲಕ್ಕಿ ಬಾಳೆ ತಲಾ ಕೆ.ಜಿ.ಗೆ 60 ರೂ. ದಾಳಿಂಬೆ, ಸೇಬು ಕೆ.ಜಿ.ಗೆ 150 ರೂ. 3 ಕಿವಿಹಣ್ಣುಗಳನ್ನು ತುಂಬಿದ ಬಾಕ್ಸ್‌ 120 ರೂ.ಗೆ ಮಾರಾಟವಾಗುತ್ತಿವೆ.
ತರಕಾರಿ ಬಲು ದುಬಾರಿ: ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ; ಗ್ರಾಹಕರು ಕಂಗಾಲು, ಇಲ್ಲಿದೆ ದರಪಟ್ಟಿ!
ವಾರದ ಸಂತೆ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ಬೆಲೆ ತೀವ್ರ ಏರಿಕೆಯಾಗಿದೆ. ಬಹುತೇಕ ತರಕಾರಿಗಳಲ್ಲಿ ಹುಳ ಬಿದ್ದಿವೆ. ಜೀವನ ನಡೆಸಲು ಅನಿವಾರ್ಯವಾಗಿ ಖರೀದಿ ಮಾಡುತ್ತಿದ್ದೇವೆ.
ವಿಶ್ವನಾಥ ಆಚಾರಿ, ಗ್ರಾಹಕ, ಸಂಡೂರು



Read more