Karnataka news paper

ದುಬಾರಿ ಐಫೋನ್‌ ಮೇಲೂ ಕಸ್ಟಮ್ಸ್‌ ಕಣ್ಣು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿರುಸಿನ ತಪಾಸಣೆ


ಹೈಲೈಟ್ಸ್‌:

  • ದುಬಾರಿ ಐಫೋನ್‌ ಮೇಲೂ ಕಸ್ಟಮ್ಸ್‌ ಅಧಿಕಾರಿಗಳ ಕಣ್ಣು
  • ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಂದ ಬಿರುಸಿನ ತಪಾಸಣೆ
  • ನಿಯಮ ಮೀರಿದರೆ ಗ್ರಾಹಕರು ಸುಂಕ ಕಟ್ಟಬೇಕು

ವಿಜಯ್‌ ಕೋಟ್ಯಾನ್‌ ಮಂಗಳೂರು
ತೆರಿಗೆ ವಂಚಿಸಿ ಅಕ್ರಮವಾಗಿ ವಿದೇಶದಿಂದ ಚಿನ್ನಾಭರಣ ಸಾಗಾಟ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕಸ್ಟಮ್ಸ್‌ ಅಧಿಕಾರಿಗಳು ನಿಗಾಯಿಟ್ಟು ತಪಾಸಣೆ ನಡೆಸುತ್ತಿರುವುದು ಸರ್ವೇ ಸಾಮಾನ್ಯ. ಆದರೆ ಈಗ ದುಬಾರಿ ಐಫೋನ್‌ ಸಾಗಾಟದ ಮೇಲೂ ಕಸ್ಟಮ್ಸ್‌ ಅಧಿಕಾರಿಗಳ ಕಣ್ಣು ಬಿದ್ದಿದ್ದು, ತಪಾಸಣೆ ಬಿಗುಗೊಳಿಸಿದ್ದಾರೆ.

ಕಸ್ಟಮ್ಸ್‌ ನಿಯಮ ಪ್ರಕಾರ ಯಾವನೇ ಪ್ರಯಾಣಿಕ 50ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಿದೇಶದಿಂದ ತರಬಹುದು. ಅದೇ ರೀತಿ ವಿದೇಶದಿಂದ ಬರುವಾಗ ಗಂಡಸರಾದರೆ 20ಗ್ರಾಂ ಚಿನ್ನ, ಮಹಿಳೆಯರಾದರೆ 40ಗ್ರಾಂ ಚಿನ್ನವನ್ನು ಸಾಗಾಟ ಮಾಡಲು ಅವಕಾಶವಿದೆ. ಇದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಸಾಗಾಟ ಮಾಡಿದರೆ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ. ಇದೇ ರೀತಿ ಇತ್ತೀಚಿನ ದಿನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮೌಲ್ಯದ ದುಬಾರಿ ಐಫೋನ್‌ಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆಯೂ ಕಸ್ಟಮ್ಸ್‌ ಅಧಿಕಾರಿಗಳು ನಿಗಾಯಿಟ್ಟಿದ್ದು, ಬಿಗು ತಪಾಸಣೆ ನಡೆಸುತ್ತಿದ್ದಾರೆ. ಇದು ಪ್ರಯಾಣಿಕರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಇತ್ತೀಚೆಗೆ ಮಂಗಳೂರಿನಲ್ಲೇ ದುಬಾರಿ ಐಫೋನ್‌ ಖರೀದಿಸಿ ದುಬಾಯಿಗೆ ತೆರಳಿ ಮಂಗಳೂರಿಗೆ ವಾಪಾಸಾದ ವೇಳೆ ಐಫೋನ್‌ ಕಾರಣಕ್ಕೆ ಕಸ್ಟಮ್ಸ್‌ ಅಧಿಕಾರಿಗಳ ವಿಚಾರಣೆ ಎದುರಿಸಿದ ಘಟನೆ ನಡೆದಿದೆ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಯಿತ್ತಾದರೂ, ಅಧಿಕಾರಿಗಳು ಕಸ್ಟಮ್ಸ್‌ ನಿಯಮ ಪ್ರಕಾರ 50ಸಾವಿರಕ್ಕೂ ಅಧಿಕ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ತಪಾಸಣೆ ನಡೆಸಿದ್ದಾರೆ.

10 ಸಾವಿರ ಖಾಲಿ ನಿವೇಶನಗಳನ್ನು ಗುರುತಿಸಿದ ಬಿಡಿಎ; ಮಾರಾಟವಾಗದೆ ಉಳಿದಿವೆ ಬಹುಕೋಟಿ ಮೌಲ್ಯದ ಆಸ್ತಿಗಳು!

ಸುಂಕ ಕಟ್ಟದಿದ್ದರೆ ಸರೆಂಡರ್‌!
ದುಬಾರಿ ಐಫೋನ್‌ ಸಾಗಾಟ ನಡೆಸಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ತಪಾಸಣೆ ವೇಳೆ ಪತ್ತೆಯಾದರೆ ಅವರು ನಿಯಮ ಪ್ರಕಾರ ಶೇ.35ರಷ್ಟು ಸುಂಕ ಕಟ್ಟಿ ಫೋನ್‌ ಬಿಡಿಸಿಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ನಿಯಮಿತ ದಿನಕ್ಕೆ ಮೊಬೈಲ್‌ ಸರೆಂಡರ್‌ ಮಾಡಿ ಮರಳಿ ತಾನು ಖರೀದಿಸಿ ದೇಶಕ್ಕೆ ಕೊಂಡೊಯ್ಯಬಹುದಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.



Read more