ಬ್ಲಾಕ್‌ಚೈನ್‌ನಲ್ಲಿ ವ್ಯವಹಾರದ ದಾಖಲೆಗಳನ್ನು ಬದಲಿಸಲು ಸಾಧ್ಯವೇ ಇಲ್ಲ. ಇದರ ಲೆಡ್ಜರ್ ಪಾರದರ್ಶಕ ಹಾಗೂ ಅಧಿಕೃತವಾಗಿರುತ್ತದೆ. ಇದರಿಂದಾಗಿಯೇ ಇದನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಕೂಡ ಬಳಸಲಾಗುತ್ತದೆ. ಈಗ ಕೇಂದ್ರ ಸರ್ಕಾರದಿಂದಲೇ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಹೊಸ ಡಿಜಿಟಲ್ ರೂಪಾಯಿ ವಿತರಿಸಲು ನಿರ್ಧರಿಸಲಾಗಿದೆ.
ಡಿಜಿಟಲ್ ಸ್ವತ್ತುಗಳ ಮೇಲೆ ತೆರಿಗೆ
ಇದರ ಜತೆಗೆ ಡಿಜಿಟಲ್ ಅಸೆಟ್‌ಗಳ ವರ್ಗಾವಣೆಯಿಂದ ಯಾರಾದರೂ ಆದಾಯ ಪಡೆದರೆ ಅದರ ಮೇಲೆ ಶೇ 30ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವ್ಯಾಪಕ ಬೆಳವಣಿಗೆ ಕಾಣುತ್ತಿರುವ ಕ್ರಿಪ್ಟೋ ಕರೆನ್ಸಿ ಮತ್ತು ಎನ್‌ಎಫ್‌ಟಿಗಳಿಂದ ಬರುವ ಆದಾಯದ ಮೇಲೆ ಕೂಡ ಪರಿಣಾಮ ಬೀರಲಿದೆ.
‘ಅಂತಹ ಆದಾಯವನ್ನು ಲೆಕ್ಕ ಹಾಕುವಾಗ ಖರೀದಿ ವೆಚ್ಚವನ್ನು ಹೊರತುಪಡಿಸಿ ಯಾವುದೇ ವೆಚ್ಚದ ಅಥವಾ ಭತ್ಯೆಯ ಮೇಲೆ ಯಾವುದೇ ಕಡಿತ ಮಾಡುವುದಿಲ್ಲ. ಹಾಗೆಯೇ, ಬೇರೆ ಯಾವುದೇ ಆದಾಯದ ವಿರುದ್ಧ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಲ್ಲಿನ ನಷ್ಟವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ’ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವ್ಯವಹಾರದ ವಿವರಗಳನ್ನು ದಾಖಲಿಸಲು ಸರ್ಕಾರವು ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಲಾಗುವ ಪಾವತಿಗೆ ಶೇ 1ರಷ್ಟು ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವುದಾಗಿ ತಿಳಿಸಲಾಗಿದೆ. ವರ್ಚುವಲ್ ಡಿಜಿಟಲ್ ಅಸೆಟ್ ಅನ್ನು ಉಡುಗೊರೆಯಾಗಿ ನೀಡುವುದು ಕೂಡ ಸ್ವೀಕೃತಿದಾರರ ಕಡೆಯಿಂದ ತೆರಿಗೆ ಕಡಿತಗೊಳಿಸುವ ಪ್ರಸ್ತಾಪ ಮಾಡಲಾಗಿದೆ.
ಕ್ರಿಪ್ಟೋ ಕರೆನ್ಸಿಗಳ ಬಳಕೆ ವ್ಯಾಪಕವಾಗುತ್ತಿರುವುದರ ನಡುವೆ, ತನ್ನದೇ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಪರಿಚಯಿಸಲು ಕೇಂದ್ರ ಬ್ಯಾಂಕ್ ಹಲವು ಹಂತಗಳ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿಳಿಸಿತ್ತು. ಈ ಸಂಬಂಧ ಆರ್‌ಬಿಐ ಕಾಯ್ದೆ, 1934ಕ್ಕೆ ತಿದ್ದುಪಡಿ ತರಲು ಅಕ್ಟೋಬರ್‌ನಲ್ಲಿ ಆರ್‌ಬಿಐ ಪ್ರಸ್ತಾಪ ಮಾಡಿತ್ತು.
ಡಿಜಿಟಲ್ ಕರೆನ್ಸಿ ಕೂಡ ಹೆಚ್ಚು ದಕ್ಷ ಮತ್ತು ಅಗ್ಗದ ಕರೆನ್ಸಿ ನಿರ್ವಹಣೆ ವ್ಯವಸ್ಥೆಗೆ ಕೊಂಡೊಯ್ಯಬಲ್ಲದು. ಹೀಗಾಗಿ ಬ್ಲಾಕ್‌ಚೈನ್ ಮತ್ತು ಇತರೆ ತಂತ್ರಜ್ಞಾನಗಳನ್ನು ಬಳಸಿ ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ 2022 ಮತ್ತು 2023ರಲ್ಲಿ ವಿತರಿಸುವ ಪರಿಚಯಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಏನಿದು ಸಿಬಿಡಿಸಿ?
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಫಿಯಟ್ ಕರೆನ್ಸಿಯ (ಸರ್ಕಾರ ವಿತರಿಸುವ ಕರೆನ್ಸಿ) ಡಿಜಿಟಲ್ ಮಾದರಿಯಾಗಿದೆ. ಇದನ್ನು ಬ್ಲಾಕ್‌ಚೈನ್ ಬೆಂಬಲಿತ ವ್ಯಾಲೆಟ್‌ಗಳನ್ನು ಬಳಸಿ ಮತ್ತು ಕೇಂದ್ರ ಬ್ಯಾಂಕ್ ನಿಯಂತ್ರಣದಡಿ ವ್ಯವಹಾರ ಮಾಡಬಹುದಾಗಿದೆ. ಸಿಬಿಡಿಸಿ, ವಿಕೇಂದ್ರೀಕೃತ ವರ್ಚುವಲ್ ಕರೆನ್ಸಿಗಳು ಹಾಗೂ ಕ್ರಿಪ್ಟೋ ಸ್ವತ್ತುಗಳಿಗಿಂತ ವಿಭಿನ್ನವಾಗಿದೆ. ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಗಳು ಸರ್ಕಾರದಿಂದ ವಿತರಣೆ ಆಗಿರುವುದಿಲ್ಲ ಮತ್ತು ಕಾನೂನಾತ್ಮಕ ಮಾನ್ಯತೆ ಪಡೆದುಕೊಂಡಿರುವುದಿಲ್ಲ. ಇದು ಬಳಕೆದಾರರು ಆಂತರಿಕ ಹಾಗೂ ವಿದೇಶಿ ವ್ಯವಹಾರಗಳನ್ನು ನಡೆಸಲು ಅವಕಾಶ ನೀಡುತ್ತದೆ. ಇದಕ್ಕೆ ಮೂರನೇ ವ್ಯಕ್ತಿ ಅಥವಾ ಬ್ಯಾಂಕ್ ಅಗತ್ಯ ಇರುವುದಿಲ್ಲ.
ಬೇರೆ ದೇಶಗಳಲ್ಲಿ ಕ್ರಿಪ್ಟೋ
ಭಾರತದಲ್ಲಿ ಕೆಲವು ನಿರ್ದಿಷ್ಟ ವಿನಾಯಿತಿಗಳ ಹೊರತಾಗಿ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಕ್ರಿಪ್ಟೋಕರೆನ್ಸಿಗಳ ಮೇಲಿನ ಮಸೂದೆಯನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿರುವ ನಡುವೆಯೇ ಈ ಹೊಸ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರವೊಂದು ತನ್ನದೇ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡುತ್ತಿರುವುದು ಭಾರತದಲ್ಲಿ ಮಾತ್ರ ಅಲ್ಲ. 2021ರ ಅಕ್ಟೋಬರ್‌ನಲ್ಲಿ ನೈಜೀರಿಯಾ ದೇಶವು ಇನೈರಾ ಎಂಬ ಸಿಬಿಡಿಸಿ ಪರಿಚಯಿಸಿತ್ತು. ಬಹಾಮಸ್ ಹಾಗೂ ಪೂರ್ವ ಕೆರೆಬಿಯನ್‌ನ ಐದು ಇತರೆ ದ್ವೀಪಗಳು ಕೂಡ ಸಿಬಿಡಿಸಿ ಪರಿಚಯಿಸಿವೆ.
Read more
[wpas_products keywords=”deal of the day sale today offer all”]