Karnataka news paper

ಸಂಘಟಿತ, ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಬಜೆಟ್ ಪೂರಕ: ಜಗದೀಶ ಶೆಟ್ಟರ್


ಹುಬ್ಬಳ್ಳಿ: ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಸಂಘಟಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ 2022-23ನೇ ಸಾಲಿನ ಕೇಂದ್ರ ಬಜೆಟ್ ಪೂರಕವಾಗಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

‘ಒಂದು ದೇಶ ಒಂದು ತೆರಿಗೆ’ ಜೊತೆಗೆ ‘ಒಂದು ದೇಶ ಒಂದು ಮಾರುಕಟ್ಟೆ’ ಎಂಬ ನೀತಿಗೆ ಬಜೆಟ್ ಮುನ್ನುಡಿ ಬರೆದಿದೆ. ಎಲ್ಲಾ ರಾಜ್ಯಗಳ ಆರ್ಥಿಕ ಬಲವರ್ಧನೆಗೆ ₹1 ಲಕ್ಷ ಕೋಟಿ ದೀರ್ಘಕಾಲದ ಸಾಲ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲೂ ದೇಶದ ಆರ್ಥಿಕತೆ ಹಳಿ ತಪ್ಪದ ಹಾಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಚ್ಚರ ವಹಿಸಿದೆ. ವಿಶ್ವದ ಅತಿದೊಡ್ಡ ಉಚಿತ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ದೇಶದ ಶೇ 70ರಷ್ಟು ಜನ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಆಯುಷ್ಯಮಾನ್ ಭಾರತ ಯೋಜನೆ ಅನುಷ್ಠಾನದ ಜೊತೆಗೆ ವೈದ್ಯಕೀಯ ಕ್ಷೇತ್ರದ ಮೂಲ ಸೌಕರ್ಯ ಹೆಚ್ಚಿಸಲು ಅನುದಾನ ನೀಡಲಾಗಿದೆ ಎಂದಿದ್ದಾರೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿ ಭಾರತ ಆತ್ಮನಿರ್ಭರವಾಗುವ ಕಡೆ ಹೆಜ್ಜೆ ಇರಿಸಿದೆ. ಮುಖ್ಯವಾಗಿ ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಕ್ಷಣಾ ಇಲಾಖೆಗೆ ಮೀಸಲಿರಿಸಿದ ಬಜೆಟ್‌ನಲ್ಲಿ ಶೇ 68ರಷ್ಟು ಬಂಡವಾಳವನ್ನು ದೇಶದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಖಾಸಗಿ ಕಂಪನಿಗಳು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಂ.ಎಸ್.ಎಂ.ಇ ಹಾಗೂ ಸ್ಟಾರ್ಟ್ ಅಪ್ ಗಳ ಸೌಲಭ್ಯಗಳನ್ನು ಪ್ರಸಕ್ತ ವರ್ಷಕ್ಕೂ ಮುಂದುವರಿಸಲಾಗಿದೆ. ಇದು ಸ್ವಾಗತಾರ್ಹ ಎಂದಿದ್ದಾರೆ.

ಡಿಜಿಟಲ್ ಇಂಡಿಯಾ ಯೋಜನೆ ಭಾಗವಾಗಿ ದೇಶದ ಎಲ್ಲಾ ಅಂಚೆ ಕಚೇರಿಗಳನ್ನು ದೇಶದ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜೋಡಿಸಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ಡಿಜಿಟಲ್ ಕರೆನ್ಸಿ ವಹಿವಾಟಿಗೆ ಒತ್ತು ನೀಡಲಾಗಿದೆ. ಆರ್.ಬಿ.ಐ ಡಿಜಿಟಲ್‌ ಲಾಕ್ ಸಿಸ್ಟಂ ಆಧರಿಸಿ ‘ಡಿಜಿಟಲ್ ರುಪಿ’ ಬಿಡುಗಡೆ ಮಾಡಿದೆ. 5ಜಿ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದಲ್ಲಿ 5ಜಿ ಸ್ಪೆಕ್ಟ್ರಮ್‌ಗಳ ಹರಾಜು ನಡೆಸಲಿದೆ. ಇದರಿಂದ ಟೆಲಿಕಾಂ ಕ್ಷೇತ್ರದಲ್ಲಿ ಕಾಂತ್ರಿಕಾರಕ ಬದಲಾವಣೆ ಉಂಟು ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಜನರ ಜೀವನದಲ್ಲಿ ಕಡಿಮೆ ಹಸ್ತಕ್ಷೇಪ ಮಾಡಿ ಉತ್ತಮ ಆಡಳಿತ ನೀಡಲು ಬಯಸುತ್ತಿದೆ. 186 ಅನುಪಯುಕ್ತ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಒಟ್ಟಾರೆ ಕೇಂದ್ರ ಬಜೆಟ್ ಚುನಾವಣೆ ಅಥವಾ ಯಾವುದೇ ರಾಜಕೀಯ ಲಾಭ ಪಡೆಯವ ಉದ್ದೇಶದಿಂದ ಮಂಡಿಸಿಲ್ಲ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಮಂಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



Read more from source

[wpas_products keywords=”deal of the day sale today kitchen”]