ಕ್ರಿಪ್ಟೋ ಕರೆನ್ಸಿಗಳನ್ನು ಸ್ವೀಕರಿಸುವುದರ ಮೇಲೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿದೆ. ಇದನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಕ್ರಿಪ್ಟೋ ಕರೆನ್ಸಿಗಳನ್ನು ದೇಶದಲ್ಲಿ ಕಾನೂನುಬದ್ಧಗೊಳಿಸುವ ಯಾವುದೇ ಮಸೂದೆ ಜಾರಿಯಾಗಿಲ್ಲ. ಆದರೆ ಅದರ ಮೇಲೆ ತೆರಿಗೆ ವಿಧಿಸುತ್ತಿರುವುದು ಹೇಗೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.
ಇದೇ ವೇಳೆ ಅವರು, ಸಂಬಳ ಪಡೆಯುವ ವರ್ಗ ಮತ್ತು ಮಧ್ಯಮ ವರ್ಗಗಳು ಸಾಂಕ್ರಾಮಿಕದ ಸಂದರ್ಭದಲ್ಲಿ ಕೆಲವು ವಿನಾಯಿತಿ ಮತ್ತು ಕೊಡುಗೆಗಳನ್ನು ನಿರೀಕ್ಷಿಸಿದ್ದವು. ಆದರೆ ಅದು ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಭಾರತದ ವೇತನ ವರ್ಗ ಮತ್ತು ಮಧ್ಯಮ ವರ್ಗಗಳು ಸಾಂಕ್ರಾಮಿಕದ ಸಮಯದಲ್ಲಿ ನಿರಾಳತೆಯನ್ನು ನಿರೀಕ್ಷಿಸಿದ್ದವು. ವೇತನ ಕಡಿತ ಮತ್ತು ಹಣದುಬ್ಬರದ ಸಮಸ್ಯೆಗಳ ಪರಿಹಾರದ ನಿರೀಕ್ಷೆ ಇತ್ತು. ಹಣಕಾಸು ಸಚಿವೆ ಮತ್ತು ಪ್ರಧಾನಿ ಮತ್ತೊಮ್ಮೆ ಅವರಿಗೆ ನೇರ ತೆರಿಗೆ ಕ್ರಮಗಳಲ್ಲಿ ನಿರಾಶೆ ಉಂಟುಮಾಡಿದ್ದಾರೆ. ಇದು ಭಾರತದ ವೇತನ ವರ್ಗ ಮತ್ತು ಮಧ್ಯಮ ವರ್ಗಕ್ಕೆ ಅವರು ಮಾಡಿರುವ ದ್ರೋಹ’ ಎಂದು ಸುರ್ಜೇವಾಲ ಟೀಕಿಸಿದ್ದಾರೆ.
‘ಹಾಗೆಯೇ ಹಣಕಾಸು ಸಚಿವರೇ, ದಯವಿಟ್ಟು ದೇಶಕ್ಕೆ ವಿವರಿಸಿ- ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಕಾನೂನುಬದ್ಧವೇ? ಕ್ರಿಪ್ಟೋ ಕರೆನ್ಸಿ ಮಸೂದೆಯನ್ನು ಜಾರಿಗೆ ತರದೆಯೇ, ನೀವು ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ ವಿಧಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣದ ಬಗ್ಗೆ ಏನು? ಕ್ರಿಪ್ಟೋ ವಿನಿಮಯಗಳ ನಿಯಂತ್ರಣದ ಕುರಿತು ಏನು? ಹೂಡಿಕೆದಾರರ ಭದ್ರತೆ ಬಗ್ಗೆ ಏನು? ಎಂದು ಸುರ್ಜೇವಾಲ ಸಾಲು ಸಾಲು ಪ್ರಶ್ನೆಗಳನ್ನು ಇರಿಸಿದ್ದಾರೆ.
2022ರ ಬಜೆಟ್‌ನ ಸತ್ಯವೆಂದರೆ ‘ಏನೂ ಇಲ್ಲದ ಬಜೆಟ್’ ಎಂದು ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ. ‘ಬಡವರ ಖಾಲಿ ಜೇಬು, ಉದ್ಯೋಗಿಗಳ ಖಾಲಿ ಜೇಬು, ಮಧ್ಯಮ ವರ್ಗದ ಜೇಬುಗಳು ಖಾಲಿ, ರೈತರ ಜೇಬು ಖಾಲಿ, ಯುವಜನರ ಭರವಸೆಗಳು ಛಿದ್ರಗೊಂಡಿವೆ, ಅನುಭೋಗ ಹೆಚ್ಚಳಕ್ಕೆ ಏನೂ ಇಲ್ಲ, ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಏನೂ ಇಲ್ಲ ಎಂದು ಅವರು ಟೀಕಿಸಿದ್ದಾರೆ.
Read more
[wpas_products keywords=”deal of the day sale today offer all”]