Karnataka news paper

ಬಿಜೆಪಿ ಗೆಲುವಿನ ಓಟಕ್ಕೆ ಕಾಂಗ್ರೆಸ್‌ ಕಡಿವಾಣ; ಆಡಳಿತ ಪಕ್ಷಕ್ಕೆ ಬಹುಮತ ಸಾಧಿಸಿದ ಸಮಾಧಾನ


ಶಶಿಧರ ಹೆಗಡೆ
ಬೆಂಗಳೂರು: ಕೆಲವೇ ದಿನಗಳ ಹಿಂದೆ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಿಶ್ರಫಲ ಅನುಭವಿಸಿ ಆಘಾತಕ್ಕೆ ಗುರಿಯಾಗಿದ್ದ ಬಿಜೆಪಿಗೆ ವಿಧಾನ ಪರಿಷತ್‌ ಎಲೆಕ್ಷನ್‌ ಫಲಿತಾಂಶ ತುಸು ನೆಮ್ಮದಿ ತಂದಿದೆ. ಆದರೆ, ಬಿಜೆಪಿಗೆ ಸರಿಸಮವಾದ ಫಲಿತಾಂಶವನ್ನು ಕಾಂಗ್ರೆಸ್‌ ಕೂಡ ದಾಖಲಿಸಿದೆ. ಹಾಗಾಗಿ ಆಡಳಿತ ಪಕ್ಷದ ಭರ್ಜರಿ ಗೆಲುವಿನ ಓಟಕ್ಕೆ ಕಡಿವಾಣ ಬಿದ್ದಿದೆ.

ಬಹುಮತದ ಸನಿಹಕ್ಕೆ ಬಿಜೆಪಿ ಬಂದಿದ್ದರೂ ಬೀಗುವುದಕ್ಕೆ ಬಿಜೆಪಿಗೆ ಅವಕಾಶ ಇಲ್ಲದಂತಾಗಿದೆ. ಪರಿಷತ್‌ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿ ಇತ್ತು. ಆದರೆ ಕಾಂಗ್ರೆಸ್‌ ಸಂಘಟಿತ ಯತ್ನದ ಮೂಲಕ ಆಡಳಿತ ಪಕ್ಷಕ್ಕೆ ಠಕ್ಕರ್‌ ಕೊಟ್ಟಿದೆ. ಈ ನಡುವೆಯೂ ಪರಿಷತ್‌ನಲ್ಲಿ ಬಹುದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿರುವುದು ಗಮನಾರ್ಹ ಸಂಗತಿಯಾಗಿದೆ. ಬೆಳಗಾವಿಯಲ್ಲಿ ಆಘಾತ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು ನಗರದಲ್ಲಿ ಬಿಜೆಪಿಗೆ ಗೆಲುವಾಗಿದೆ. ಇದು ಪಕ್ಷದ ಸೀಮಾವಲಯ ವಿಸ್ತರಣೆಯ ಸೂಚನೆ. ಅದೇ ಕಾಲಕ್ಕೆ ಬೆಳಗಾವಿಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಸೋಲು ಅನಿರೀಕ್ಷಿತವಲ್ಲದಿದ್ದರೂ ಈ ಭಾಗದಲ್ಲಿ ಪಕ್ಷದ ಸಂಘಟನೆಗೆ ಹಿನ್ನಡೆಯಾಗುವುದರ ಮುನ್ಸೂಚನೆ ಇದಾಗಿದೆ.
Karnataka MLC Election Results:ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ ಜಯ, ಲಖನ್‌ಗೆ 2ನೇ ಸ್ಥಾನ; ಬಿಜೆಪಿಗೆ 3ನೇ ಸ್ಥಾನ
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲೂ ಬಿಜೆಪಿಗೆ ಪ್ರಯಾಸದ ಗೆಲುವಾಗಿತ್ತು. ಈಗ ಪರಿಷತ್‌ ಚುನಾವಣೆಯಲ್ಲಿ ಸೋಲಾಗಿದೆ. ಅಂದರೆ, ಬೆಂಗಳೂರು ನಗರದ ಬಳಿಕ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಸಂಘಟನೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಆಪತ್ಬಾಂಧವರಾದ ಯಡಿಯೂರಪ್ಪ ಈ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್‌.ಯಡಿಯೂರಪ್ಪ ಅವರೇ ಹೆಚ್ಚು ಕ್ರಿಯಾಶೀಲರಾಗಿ ಓಡಾಡಿದ್ದಾರೆ ಎಂಬ ಮಾತಿದೆ. ಇಲ್ಲದಿದ್ದರೆ ಬಿಜೆಪಿ ಇಷ್ಟು ಸ್ಥಾನ ಗಳಿಸುವುದೂ ಕಷ್ಟವಾಗುತ್ತಿತ್ತು. ಬಿಎಸ್‌ವೈ ಮುಂಚೂಣಿಯಲ್ಲಿ ನಿಂತಾಗಲೆಲ್ಲಅಪಾಯದಿಂದ ಬಿಜೆಪಿ ಪಾರಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ನಾಯಕತ್ವ ಬದಲಾವಣೆ ಬಳಿಕವೂ ಬಿಜೆಪಿಗೆ ಮತ ತಂದುಕೊಡುವ ಮಾಸ್‌ ಲೀಡರ್‌ ಬಿಎಸ್‌ವೈ ಮಾತ್ರ. ಅವರನ್ನು ಬದಿಗೆ ಸರಿಸಿ ಯುದ್ಧಕ್ಕೆ ಹೊರಡುವಷ್ಟು ಸಾಮರ್ಥ್ಯವನ್ನು ರಾಜ್ಯ ಬಿಜೆಪಿ ಇನ್ನೂ ಹೊಂದಿಸಿಕೊಂಡಿಲ್ಲ ಎಂಬ ವಾಸ್ತವಾಂಶ ಇದರಿಂದ ಸ್ಪಷ್ಟವಾಗುತ್ತದೆ. ಸೊರಗುತ್ತಿರುವ ಜೆಡಿಎಸ್‌ ಚುನಾವಣೆಯಿಂದ ಚುನಾವಣೆಗೆ ಸೊರಗುತ್ತಿರುವ ಜೆಡಿಎಸ್‌ಗೆ ಪರಿಷತ್‌ ಚುನಾವಣೆಯಲ್ಲೂ ಕಹಿಯಾಗಿದೆ. ಮಂಡ್ಯ ಸೇರಿದಂತೆ ತನ್ನ ಭದ್ರಕೋಟೆಯಾಗಿರುವ ಜಿಲ್ಲೆಗಳಲ್ಲಿ ಸೋತಿರುವುದನ್ನು ಜೀರ್ಣಿಸಿಕೊಳ್ಳುವುದೇ ಜೆಡಿಎಸ್‌ಗೆ ಕಷ್ಟವಾಗಲಿದೆ.



Read more