ಹೊಸ ದಿಲ್ಲಿ: ಬಹು ನಿರೀಕ್ಷಿತ 2022-23ನೇ ಸಾಲಿನ ಕೇಂದ್ರ ಬಜೆಟ್ ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾಗಲಿದೆ. ಚೇತರಿಸಿಕೊಳ್ಳುತ್ತಿರುವ ದೇಶದ ಆರ್ಥಿಕತೆಗೆ ಬಜೆಟ್‌ನಲ್ಲಿ ಬೂಸ್ಟರ್ ಡೋಸ್ ನಿರೀಕ್ಷಿಸಲಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ತೀವ್ರ ಕುತೂಹಲ ಮೂಡಿಸಿರುವ ಚುನಾವಣೆಯ ಮತದಾನಕ್ಕೆ ಕೇವಲ 9 ದಿನಗಳು ಬಾಕಿಯಿದ್ದು, ಕೇಂದ್ರ ಬಜೆಟ್‌ನಲ್ಲಿ ಜನಪ್ರಿಯ ಕೊಡುಗೆ ಪ್ರಕಟವಾಗಬಹುದು ಎನ್ನಲಾಗುತ್ತಿದೆ. ರೈಲ್ವೆ ಬಜೆಟ್ ಕೂಡ ಜತೆಗೇ ಘೋಷಣೆಯಾಗಲಿದೆ.
ಮುಂದಿನ ಹಂತದ ಆರ್ಥಿಕ ಚೇತರಿಕೆಗೆ ಸರಕಾರ ಧಾರಾಳವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಿಂದ ಮುಗ್ಗರಿಸಿದ್ದ ಆರ್ಥಿಕತೆ ಕೋವಿಡ್ ಪೂರ್ವ ಮಟ್ಟಕ್ಕೆ ಚೇತರಿಸಿದೆ ಎಂದು ಸಂಸತ್ತಿನಲ್ಲಿ ಸೋಮವಾರ ಮಂಡನೆಯಾಗಿರುವ 2021-22ರ ಆರ್ಥಿಕ ಸಮೀಕ್ಷೆ ತಿಳಿಸಿದೆ.
ಜಿಎಸ್‌ಟಿ ಸಂಗ್ರಹದಲ್ಲೂ ಜನವರಿಯಲ್ಲಿ 1.30 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ 2022ರಲ್ಲಿ ಸದೃಢ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಮಾರುಕಟ್ಟೆಯ ಬೇಡಿಕೆಗಳಿಗೆ ಪೂರಕ ಹಾಗೂ ಹೊಸ ಸವಾಲುಗಳನ್ನು ಎದುರಿಸಲು ಮುಂಗಡ ಪತ್ರ ಉತ್ತೇಜನ ನೀಡುವ ಸಾಧ್ಯತೆ ಇದೆ. ಬೆಳವಣಿಗೆ ಮತ್ತು ವಿತ್ತೀಯ ಸಂಯೋಜನೆಗೆ ಬಜೆಟ್ ಒತ್ತು ನೀಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ವರದಿ ಅಭಿಪ್ರಾಯಪಟ್ಟಿದೆ.
ಆರ್ಥಿಕ ಸಮೀಕ್ಷೆಯ ಬೆನ್ನಲ್ಲೇ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 813 ಅಂಕ ಜಿಗಿದಿದ್ದು, 58,014ಕ್ಕೆ ಸ್ಥಿರವಾಯಿತು. ಬಹುತೇಕ ವಲಯಗಳ ಚೇತರಿಕೆಯನ್ನು ದಾಖಲಿಸಿದೆ. ಹಾಗೂ 2021-22 ಮತ್ತು 2022-23ರಲ್ಲಿ ಅನುಕ್ರಮವಾಗಿ ಶೇ. 9.2 ಮತ್ತು ಶೇ. 8-8.5ರ ಜಿಡಿಪಿ ಬೆಳವಣಿಗೆ ಅಂದಾಜಿಸಿರುವುದರಿಂದ ಇದೀಗ ಎಲ್ಲರ ದೃಷ್ಟಿ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ.
ತೆರಿಗೆ ಇಳಿಕೆಯ ನಿರೀಕ್ಷೆ
ತೆರಿಗೆ ಹೊರೆ ಇಳಿಕೆ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದಾಯ ತೆರಿಗೆ ವಿನಾಯಿತಿ ಮಿತಿ ಸದ್ಯಕ್ಕೆ ವಾರ್ಷಿಕ 2.5 ಲಕ್ಷ ರೂ.ಗಳಾಗಿದ್ದು, ಇದನ್ನು ಏರಿಸಬೇಕು ಎಂಬ ಬೇಡಿಕೆ ಇದೆ. ಬ್ಯಾಂಕ್ ಠೇವಣಿಗಳ ಬಡ್ಡಿ ದರ ಇಳಿಕೆಯಾಗಿರುವುದರಿಂದ ಹಿರಿಯ ನಾಗರಿಕರು, ಬಡ್ಡಿಯ ಮೇಲಿನ ತೆರಿಗೆಯ ಹೆಚ್ಚುವರಿ ವಿನಾಯಿತಿ ನಿರೀಕ್ಷಿಸಿದ್ದಾರೆ. ಸದ್ಯಕ್ಕೆ 50 ಸಾವಿರ ರೂ. ತನಕ ಬಡ್ಡಿಗೆ ತೆರಿಗೆ ವಿನಾಯಿತಿ ಇದೆ. ವೇತನ ಆದಾಯದಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಈಗಿನ 50,000 ರೂ.ಗಳಿಂದ ಕನಿಷ್ಠ 75,000 ರೂ.ಗೆ ಏರಿಸಬೇಕೆಂಬ ಒತ್ತಾಯವಿದೆ.
ಗೃಹ ಸಾಲಗಾರರಿಗೆ ತೆರಿಗೆ ಲಾಭ?
ಸಾಲದ ಬಡ್ಡಿ ಪಾವತಿ ಮೇಲಿನ ತೆರಿಗೆ ಕಡಿತದ ಮಿತಿ 2 ಲಕ್ಷ ರೂ.ನಿಂದ ವಿಸ್ತರಿಸಬೇಕು ಎಂಬ ಮನವಿ ಇದೆ. ಡೆವಲಪರ್‌ಗಳೂ ಇದನ್ನು ಬೆಂಬಲಿಸುತ್ತಿದ್ದಾರೆ. ಇದು ಗ್ರಾಮಾಂತರ ಪ್ರದೇಶಗಳಿಂದ ಉದ್ಯೋಗ ಅರಸಿ ಬರುವ ಜನತೆಗೂ ಅನುಕೂಲಕರ ಎಂಬ ಒತ್ತಾಯ ಇದೆ.
ನೆರವಿನ ನಿರೀಕ್ಷೆಯಲ್ಲಿ ಉದ್ದಿಮೆ
ಕೋವಿಡ್ ಬಿಕ್ಕಟ್ಟಿನ ಪರಿಣಾಮ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ತೆರಿಗೆ ವಿನಾಯಿತಿ, ಹೆಚ್ಚಿನ ಸಾಲ ಸೌಲಭ್ಯ, ಸಬ್ಸಿಡಿ, ಮೂಲ ಸೌಕರ್ಯ ವೃದ್ಧಿ, ರಫ್ತಿಗೆ ಉತ್ತೇಜವನ್ನು ನಿರೀಕ್ಷಿಸಿವೆ. ಉತ್ಪಾದನೆ ಆಧಾರಿತ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಹಲವು ಉದ್ದಿಮೆಗಳಿಗೆ ವಿಸ್ತರಿಸಬೇಕು ಎಂದು ಉದ್ಯಮಗಳು ಕೋರಿವೆ. ಈ ಹಿನ್ನೆಲೆಯಲ್ಲಿ ಸರಕಾರ 700 ಜಿಲ್ಲೆಗಳಲ್ಲಿ ವಿಶೇಷ ರಫ್ತು ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ಘೋಷಿಸುವ ನಿರೀಕ್ಷೆ ಇದೆ.
ರೈಲ್ವೆ ಬಜೆಟ್ ಗಾತ್ರ ಹೆಚ್ಚಳ
ಈ ಬಾರಿ ರೈಲ್ವೆ ಬಜೆಟ್ ಗಾತ್ರವನ್ನು ಸರಕಾರ 1.3 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ನಿರೀಕ್ಷೆ ಇದೆ. ರೈಲ್ವೆ ಮಾರ್ಗಗಳ ವಿದ್ಯುದೀಕರಣ, ಹೊಸ ಯೋಜನೆ, ರೈಲ್ವೆ ನಿಲ್ದಾಣಗಳ ನವೀಕರಣ, ಮೆಟ್ರೋ ರೈಲ್ವೆ, ಸರಕು ಸಾಗಣೆ ರೈಲ್ವೆ, ಬುಲೆಟ್ ರೈಲು ಯೋಜನೆಗೆ ಪುಷ್ಟಿ ನಿರೀಕ್ಷಿಸಲಾಗಿದೆ.
ಮೂಲಸೌಕರ್ಯ, ಆರೋಗ್ಯ, ಶಿಕ್ಷಣ
ಆರ್ಥಿಕ ಚೇತರಿಕೆಗೆ ಪುಷ್ಟಿ ನೀಡಲು ಮೂಲಸೌಕರ್ಯ ವಲಯಕ್ಕೆ ಹೆಚ್ಚುವರಿ ಅನುದಾನ ಮಂಜೂರು ನಿರೀಕ್ಷಿಸಲಾಗಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಔಷಧ, ವೈದ್ಯಕೀಯ ವಲಯವೂ ಹೆಚ್ಚುವರಿ ಅನುದಾನದ ನಿರೀಕ್ಷೆಯಲ್ಲಿದೆ.
ಮೊಬೈಲ್ ಆ್ಯಪ್‌ನಲ್ಲಿ ಬಜೆಟ್
ಮೊಬೈಲ್ ಬಳಕೆದಾರರಿಗೆ ‘ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್’ ಸೌಲಭ್ಯ ಕಲ್ಪಿಸಲಾಗಿದೆ. ಬಜೆಟ್ ಮಂಡನೆಯ ನಂತರ ಹಣಕಾಸು ಇಲಾಖೆಯ ವೆಬ್ ಪೋರ್ಟಲ್ ಮೂಲಕ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಲಾಖೆಯ ವೆಬ್‌ಸೈಟ್‌ನಲ್ಲೂ ವಿವರಗಳು ದೊರೆಯಲಿವೆ.
Read more…
[wpas_products keywords=”deal of the day”]