Source : Online Desk
ಅಸ್ಸಾಂ: ದಿವಂಗತ ಅರ್ಜೆಂಟೀನಾದ ದಿಗ್ಗಜ ಡಿಯಾಗೋ ಮರಡೋನಾ ಅವರ ಗಡಿಯಾರವನ್ನು ಅಸ್ಸಾಂನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಫುಟ್ಬಾಲ್ ದಂತಕಥೆ ಮರಡೋನಾರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ: ಮಹಿಳೆಯಿಂದ ಆರೋಪ
ಫುಟ್ಬಾಲ್ ಮಾಂತ್ರಿಕ ಮರಡೋನಾ ಅವರು, ನವೆಂಬರ್ 2020ರಲ್ಲಿ ನಿಧನರಾಗಿದ್ದರು. ಆದರೆ, ಅವರ ವಾಚ್ ಕಳೆದುಹೋಗಿತ್ತು. ಅಸ್ಸಾಂ ಹಾಗೂ ದುಬೈ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ಅಸ್ಸಾಂನ ಚರೈಡಿಯೊ ಜಿಲ್ಲೆಯಿಂದ ಮರಡೋನಾ ಕದ್ದ ಗಡಿಯಾರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ವಾಜಿದ್ ಹುಸೇನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಹಾಗಾದರೆ ಮರಡೋನಾ ವಾಚ್ ಭಾರತಕ್ಕೆ ಬಂದಿದ್ದು ಹೇಗೆ?
ಅಸ್ಸಾಂ ಪೊಲೀಸರ ಡಿಜಿಪಿ ನೀಡಿರುವ ಹೇಳಿಕೆ ಪ್ರಕಾರ, ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ಅವರ ಹ್ಯೂಬ್ಲೋಟ್ ಕಂಪನಿಯ ವಾಚ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದುಬೈ ಪೊಲೀಸರು ಫೆಡರಲ್ ಕಾನೂನು ಜಾರಿ ಸಂಸ್ಥೆಗಳ ಮೂಲಕ ಸಂಪರ್ಕ ಸಾಧಿಸಿದ್ದರು. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಶಿವಸಾಗರ ಜಿಲ್ಲೆಯ ವ್ಯಕ್ತಿ, ಆಗಸ್ಟ್ 2021ರಲ್ಲಿ ಭಾರತಕ್ಕೆ ಹಿಂದಿರುಗಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಬಳಿಕ, ಗುಪ್ತಚರ ಮಾಹಿತಿಯ ಮೇರೆಗೆ ಅಸ್ಸಾಂ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಆರೋಪಿ ವಾಜಿದ್ ಹುಸೇನ್ ನ್ನು ಮೊರನ್ಹತ್-ಏರಿಯಾದಲ್ಲಿರುವ ಸಂಬಂಧಿಕರ ಮನೆಯಲ್ಲಿ ಆತನನ್ನು ಬಂಧಿಸಿದ್ದಾರೆ. ಫಿಫಾ ಶತಮಾನದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವ ಮರೋಡನಾ ಅವರ ವಾಚು ದುಬೈ ಮೂಲಕ ಭಾರತದಲ್ಲಿ ಕೊನೆಗೂ ಪತ್ತೆಯಾಗಿದೆ. ಅಲ್ಲದೆ ಬಂಧಿತ ಆರೋಪಿಯನ್ನು ಪೊಲೀಸರು ತೀವ್ರ ತನಿಖೆಗೆ ಗುರಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.