Karnataka news paper

ಐಸಿಸಿ U-19 ವಿಶ್ವಕಪ್: ಬಾಂಗ್ಲಾ ಮಣಿಸಿ ಸೆಮಿಫೈನಲ್ ಗೆ ಜಿಗಿದ ಟೀಮ್ ಇಂಡಿಯಾ! ಫೈನಲ್ ಪ್ರವೇಶಕ್ಕಾಗಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಸೆಣಸು


Online Desk

ಆಂಟಿಗುವಾ: ಬಾಂಗ್ಲಾದೇಶವನ್ನು 5 ವಿಕೆಟ್ ಗಳ ಅಂತರಗಲ್ಲಿ ಮಣಿಸುವ ಮೂಲಕ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ 2022ರ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. 

ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಭಾರತದ ಬೌಲರ್ ಗಳ ಅಮೋಘ ಬೌಲಿಂಗ್ ಬಲದಿಂದ ಬಾಂಗ್ಲಾ ಟೈಗರ್ಸ್ ಅನ್ನು ಬೇಗನೆ ಕಟ್ಟಿ ಹಾಕಿದರು. ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯವು ಆಂಟಿಗುವಾದ ಕೂಲೀಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಬಲಿಷ್ಠ ಪಾಕಿಸ್ತಾನದ ಸವಾಲನ್ನು ಎದುರಿಸಿ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಗೆ ಏರಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಮಿಫೈನಲ್ ಪಂದ್ಯ ರೋಚಕವಾಗಿರಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.

ರಘುವಂಶಿ ಉಪಯುಕ್ತ ಇನ್ನಿಂಗ್ಸ್ 
ಬಾಂಗ್ಲಾ ನೀಡಿದ್ದ 112 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕಳಪೆ ಆರಂಭ ಕಂಡಿತು. ಶೂನ್ಯ ರನ್‌ಗಳಿಗೆ ಹರ್ನೂರ್ ಸಿಂಗ್ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಅಂಗ್‌ಕ್ರಿಶ್ ರಘುವಂಶಿ ಹಾಗೂ ಉಪನಾಯಕ ಶೇಖ್ ರಶೀದ್ 70 ರನ್ ಜೊತೆಯಾಟ ನಡೆಸಿ ಭಾರತವನ್ನು ಗೆಲುವಿನತ್ತ ಒಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ರಘುವಂಶಿ 65 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 44 ರನ್ ಮತ್ತು ಶೇಖ್ ರಶೀದ್ 26 ರನ್ ಗಳಿಸಿದರು.

ಒಂದು ಹಂತದಲ್ಲಿ ಈ ಜೊತೆಯಾಟವನ್ನು ಬೇರ್ಪಡಿಸಿದ ಬಾಂಗ್ಲಾ ಬೌಲರ್ ಗಳು, ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಆದರೆ, ಬಾಂಗ್ಲಾ ಹೋರಾಟ ವ್ಯರ್ಥವಾಯಿತು. ಅಂತಿಮವಾಗಿ ಭಾರತ 30.5 ಓವರ್‌ಗಳಲ್ಲಿ ಐದು ವಿಕೆಟ್‌ಗೆ 117 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಕೌಶಲ್ ತಾಂಬೆ ಅದ್ಭುತ ಸಿಕ್ಸರ್ ಬಾರಿಸಿ ಭಾರತವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು. ಬಾಂಗ್ಲಾದೇಶ ಪರ ರಿಪಾನ್ ಮೊಂಡಲ್ ನಾಲ್ಕು ವಿಕೆಟ್ ಪಡೆದರು.

ಬಾಂಗ್ಲಾದೇಶ 111 ರನ್‌ಗಳಿಗೆ ಆಲೌಟ್ 
ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕ ಯಶ್ ಧುಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ನಾಯಕನ ನಿರ್ಧಾರ ಸರಿ ಎಂಬಂತೆ ಭಾರತೀಯ ಬೌಲರ್ ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಇದರಿಂದಾಗಿ ಬಾಂಗ್ಲಾದೇಶದ ಇನಿಂಗ್ಸ್ 37.1 ಓವರ್ ಗಳಲ್ಲಿ 111 ರನ್ ಗಳಿಗೆ ಕುಸಿಯಿತು. ಮೂರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಹ್ಫಿಜುಲ್ ಇಸ್ಲಾಂ (2), ಇಫ್ತಾಖರ್ ಹುಸೇನ್ (1) ಮತ್ತು ಪಿ. ನವ್ರೋಜ್ ನಬಿಲ್ (7) ಅವರನ್ನು ಎಂಟು ಓವರ್‌ಗಳಲ್ಲಿ ರವಿ ಕುಮಾರ್ ಔಟ್ ಮಾಡಿದರು. ಬಾಂಗ್ಲಾದೇಶದ ವಿಕೆಟ್ ಪತನ ಕಂಟ್ರೋಲ್ ಗೆ ಸಿಗಲೇ ಇಲ್ಲ. 56 ರನ್ ಗಳಿಸುವ ವೇಳೆಗೆ ಬಾಂಗ್ಲಾದ 7 ಬ್ಯಾಟ್ಸಮನ್ ಗಳು ತಮ್ಮ ವಿಕೆಟ್ ಒಪ್ಪಿಸಿದರು.

ಇದಾದ ನಂತರ ಎಸ್‌ಎಂ ಮಹ್ರೋಬ್ ಮತ್ತು ಆಶಿಕುರ್ ಜಮಾನ್ 50 ರನ್‌ಗಳ ಜೊತೆಯಾಟದ ನೆರವಿನಿಂದ ತಂಡದ ಸ್ಕೋರ್ ಅನ್ನು ನೂರು ರನ್‌ಗಳ ಗಡಿ ದಾಟಿಸಿದರು. ಮಹ್ರೋಬ್ 30 ರನ್‌ಗಳ ಅತ್ಯಧಿಕ ರನ್ ಕಲೆ ಹಾಕಿದರು. ಇದೇ ಸಮಯದಲ್ಲಿ ಐಚ್ ಮೊಲ್ಲಾ 17 ಮತ್ತು ಆಶಿಕುರ್ 16 ರನ್ ಕೊಡುಗೆ ನೀಡಿದರು. ಭಾರತದಿಂದ ರವಿಕುಮಾರ್ ಗರಿಷ್ಠ ಮೂರು ಮತ್ತು ವಿಕ್ಕಿ ಓಸ್ಟಾಲ್ ಇಬ್ಬರು ಆಟಗಾರರನ್ನು ಔಟ್ ಮಾಡಿದರು.
 





Read more…

[wpas_products keywords=”deal of the day sports items”]