ಬೆಂಗಳೂರು: ‘ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಜನರ ಹಿತಕ್ಕಾಗಿ ನಾವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘2018ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳ ಪೈಕಿ ಒಂದನ್ನೂ ಈಡೇರಿಸಿಲ್ಲ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪದ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿಲ್ಲ. ಜನರ ಹಿತದ ದೃಷ್ಟಿಯಿಂದ ಏನಾಗಿದೆ ಎಂಬುದಷ್ಟೇ ಮುಖ್ಯ. ಕಾರ್ಯಕ್ರಮ ಘೋಷಿಸುವುದು ಮುಖ್ಯವಲ್ಲ, ಅನುಷ್ಠಾನವೂ ಆಗಬೇಕು. ನಮಗೆ ಜವಾಬ್ಧಾರಿಯ ಅರಿವಿದೆ. ಎಲ್ಲರಿಗೂ ಒಳಿತಾಗುವ ಕೆಲಸ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ’ ಎಂದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇಕಡ 96 ರಷ್ಟನ್ನು ಈಡೇರಿಸಿರುವುದಾಗಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದರು. ಆದರೂ, ಅವರನ್ನು ಜನರು ತಿರಸ್ಕಾರ ಮಾಡಿದರು ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಒಳಜಗಳ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಇರುವ ಒಳಜಗಳ ವಿಡಿಯೊ ಮೂಲಕ ಬಹಿರಂಗವಾಗಿದೆ. ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೂ, ಇಬ್ಬರ ನಡುವೆ ಜಗಳ ಇರುವುದು ಎಲ್ಲರಿಗೂ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಯಾರೇ ವಹಿಸಿದರೂ ಅವರು ಸ್ವಾರ್ಥ ಬಿಟ್ಟು ಯೋಚಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರ ನಡುವಿನ ಸಂಘರ್ಷದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅದು ಜಗಳ ಅಲ್ಲ. ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದ ವಿಭಿನ್ನ ದೃಷ್ಟಿಕೋನವಷ್ಟೆ. ಸಂಸದರು ಮತ್ತು ಶಾಸಕರನ್ನು ಕರೆದು ಮಾತನಾಡುತ್ತೇನೆ’ ಎಂದರು.
ನೆರವಿಗೆ ಕ್ರಮ: ಬೆನ್ನು ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವ ಜನೀಶ್ ಎಂಬ ಮಗುವಿನ ಚಿಕಿತ್ಸೆಗೆ ₹ 18 ಕೋಟಿ ಅಗತ್ಯವಿರುವ ಕುರಿತು ಕೇಳಿದಾಗ, ‘ಇಂತಹ ಪ್ರಕರಣಗಳಲ್ಲಿ ಸರ್ಕಾರ ಹೇಗೆ ನೆರವು ನೀಡಬಹುದು ಎನ್ನುವುದರ ಕುರಿತು ಚರ್ಚಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ನೆರವಿನ ಸಾಧ್ಯತೆ ಕುರಿತು ತಜ್ಞರ ಜತೆಗೆ ಚರ್ಚಿಸಿ, ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.
Read more from source
[wpas_products keywords=”deal of the day sale today kitchen”]