ಶಿಡ್ಲಘಟ್ಟ ತಾಲೂಕು ಅಬ್ಲೂಡು ಗ್ರಾಮ ಪಂಚಾಯಿತಿಯ ಗುಡಿ ಹಳ್ಳಿಯ ಅನಿಲ್ ಕುಮಾರ್ ತನ್ನ ತೋಟದ ಮಿಷನ್ ಶೆಡ್‌ನ ಒಳಗಿನ ಕಿರು ಬಾವಿಯಲ್ಲಿ (ಗರಂಡ ಬಾವಿ) ಬಿದ್ದಿದ್ದ ಮೊಬೈಲ್‌ನ್ನು ತೆಗೆದುಕೊಳ್ಳಲೆಂದು ಒಬ್ಬಂಟಿಯಾಗಿ ಶನಿವಾರ ಬಾವಿಗೆ ಇಳಿದಿದ್ದ.
ಉಸಿರುಗಟ್ಟಿ ಸಾವು: ಕಿರಿದಾದ ಹಾಗೂ ಸುಮಾರು 60 ಅಡಿಗಳಿಗೂ ಆಳದ ಕಿರು ಬಾವಿಗೆ ಹಗ್ಗದ ನೆರವಿನಿಂದ ಇಳಿದಿದ್ದ ಅನಿಲ್ ಕುಮಾರ್, ತನ್ನ ಬೇಸಿಕ್ ಸೆಟ್ ಮೊಬೈಲ್‌ನ್ನು ತೆಗೆದುಕೊಂಡು ಶರ್ಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ಆದರೆ ಅಲ್ಲಿ ಗಾಳಿಯ ಕೊರತೆಯಿಂದ ಉಸಿರುಗಟ್ಟಿ ನಿತ್ರಾಣಗೊಂಡು ಮೇಲೆ ಬರಲಾಗದೆ ಅಲ್ಲೇ ಕುಸಿದು ಬಿದ್ದಿದ್ದಾನೆ.
ತಡರಾತ್ರಿಯವರೆಗೂ ಕಾರ್ಯಾಚರಣೆ: ಶನಿವಾರ ಬೆಳಗ್ಗೆ ಅನಿಲ್ ಕುಮಾರ್ ಬಾವಿಗೆ ಇಳಿದಿದ್ದು ಮಧ್ಯಾಹ್ನದ ವೇಳೆಗೆ ಸ್ಥಳೀಯ ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿಯು ಅನಿಲ್ ಕುಮಾರ್‌ನನ್ನು ಬಾವಿಯಿಂದ ಹೊರಗೆ ಎತ್ತುವ ಕಾರ್ಯಾಚರಣೆ ನಡೆಸಿದರೂ ಸಾಧ್ಯವಾಗಿರಲಿಲ್ಲ. ರಾತ್ರಿ ವೇಳೆಗೆ ಎನ್‌ಡಿಆರ್‌ಎಫ್‌ನ 22 ಮಂದಿ ಸಿಬ್ಬಂದಿ ಹಾಗೂ ದೇವನಹಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿಯು ಆಗಮಿಸಿ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿ ಸೆನ್ಸಾರ್ ತಂತ್ರಜ್ಞಾನದ ಮೂಲಕ ಶೋಲ್ಡರ್ಸ್ ಲಾಕ್ ಮಾಡಿ ಮೇಲಕ್ಕೆತ್ತಲಾಯಿತು. ಆದರೆ ಅಷ್ಟರಲ್ಲಿ ಅನಿಲ್ ಕುಮಾರ್‌ನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಉಪ ವಿಭಾಗಾಧಿಕಾರಿ ರಘುನಂದನ್, ತಹಸೀಲ್ದಾರ್ ಬಿ. ಎಸ್. ರಾಜೀವ್, ಸಿಪಿಐ ಧಮೇಗೌಡ, ಎಸ್‌ಐ ಸತೀಶ್ ಹಾಗೂ ಅಗ್ನಿಶಾಮಕ ಜಿಲ್ಲಾ ಘಟಕದ ನಾಗೇಶ್, ಶಿಡ್ಲಘಟ್ಟದ ರಾಮಕೃಷ್ಣಪ್ಪ ಹಾಗೂ ಸಿಬ್ಬಂದಿಯು ಸ್ಥಳದಲ್ಲೇ ಠಿಕಾಣಿ ಹೂಡಿದ್ದು ಸತತ ಆರೇಳು ಗಂಟೆಗಳ ಕಾಲ ಹರ ಸಾಹಸ ಕಾರ್ಯಾಚರಣೆ ನಡೆಸಿದರಾದರೂ ಅನಿಲ್ ಕುಮಾರ್ ಬದುಕುಳಿಯಲಿಲ್ಲ.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Read more
[wpas_products keywords=”deal of the day sale today offer all”]