Karnataka news paper

‘ಅತಿಯಾದ ಆತ್ಮ ವಿಶ್ವಾಸ’, ಆ ಸ್ಕೂಪ್‌ ಶಾಟ್‌ಗೆ ಕಾರಣ ತಿಳಿಸಿದ ಮಿಸ್ಬಾ!


ಹೊಸದಿಲ್ಲಿ: ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ 2007ರಲ್ಲಿ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದಿತ್ತು. ಅಭಿಮಾನಿಗಳಿಗೆ ಟಿ20 ಕ್ರಿಕೆಟ್‌ನ ರಸದೌತಣ ಉಣಬಡಿಸಿದ ಟಿ20 ವಿಶ್ವಕಪ್‌ ಕದನದಲ್ಲಿ ಹಲವು ಅವಿಸ್ಮರಣೀಯ ಪ್ರದರ್ಶನಗಳು ಮೂಡಿಬಂದವು.

ವಿಂಡೀಸ್‌ ದೈತ್ಯ ಕ್ರಿಸ್‌ ಗೇಲ್‌ ಸಿಡಿಸಿದ ಸಿಡಿಲಬ್ಬರದ ಶತಕ, ಇಂಗ್ಲೆಂಡ್‌ ಎದುರು ಯುವರಾಜ್‌ ಸಿಂಗ್‌ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಚೆಚ್ಚಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಬೌಲ್‌ ಔಟ್‌ ಸ್ಪರ್ಧೆ ಹೀಗೆ ಹಲವು ಐತಿಹಾಸಿಕ ಘಟನೆಗಳಿಗೆ ಟೂರ್ನಿ ಸಾಕ್ಷಿಯಾಗಿತ್ತು.

ಎಲ್ಲದಕ್ಕೂ ಮಿಗಿಲಾಗಿ ಇಂಡೊ-ಪಾಕ್‌ ನಡುವಣ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಮಿಸ್ಬಾ ಉಲ್‌ ಹಕ್‌ ಅವರ ಆ ಒಂದು ಸ್ಕೂಪ್‌ ಶಾಟ್‌ ಮಾತ್ರ ಈಗಲೂ ಕ್ರಿಕೆಟ್‌ ಪ್ರಿಯರ ನೆನಪಿನಾಳದಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ.

ಭಾರತ ವಿರುದ್ಧದ ಟಿ20 ಸರಣಿಗೆ ವೆಸ್ಟ್‌ ಇಂಡೀಸ್‌ ತಂಡ ಪ್ರಕಟ!

ಆ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಮಿಸ್ಬಾ ಉಲ್‌ ಹಕ್‌, ಫೋರ್‌-ಸಿಕ್ಸರ್‌ಗಳ ಸುರಿಮಳೆಗೈದು ಇನ್ನೇನು ಪಾಕ್‌ ತಂಡಕ್ಕೆ ಚಾಂಪಿಯನ್ಸ್‌ ಕಿರೀಟ ತೊಡಿಸುವುದರಲ್ಲಿದ್ದರು. ಆದರೆ, 4 ಎಸೆತಗಳಲ್ಲಿ ಕೇವಲ 6 ರನ್‌ಗಳ ಅಗತ್ಯವಿದ್ದಾಗ ಅನನುಭವಿ ವೇಗಿ ಜೋಗಿಂದರ್‌ ಶರ್ಮಾ ಎದುರು ಸ್ಕೂಪ್‌ ಶಾಟ್‌ ಮೂಲಕ ಬೌಂಡರಿ ಕದಿಯುವ ಪ್ರಯತ್ನ ಮಾಡಿದ ಮಿಸ್ಬಾ, ಶಾರ್ಟ್‌ ಫೈನ್‌ ಲೆಗ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಎಸ್‌ ಶ್ರೀಶಾಂತ್‌ಗೆ ಕ್ಯಾಚ್‌ ನೀಡಿಬಿಟ್ಟರು. ಎಂಎಸ್‌ ಧೋನಿ ಸಾರಥ್ಯದ ಭಾರತ ತಂಡ 5 ರನ್‌ಗಳ ರೋಚಕ ಜಯದೊಂದಿಗೆ ಟಿ20 ಕ್ರಿಕೆಟ್‌ನ ಮೊತ್ತ ಮೊದಲ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತ್ತು.

ಇದಾದ 14 ವರ್ಷಗಳ ನಂತರ ಆ ಒಂದು ಸ್ಕೂಪ್‌ ಶಾಟ್‌ ಬಗ್ಗೆ ಮೌನ ಮುರಿದಿರುವ ಪಾಕಿಸ್ತಾನ ತಂಡದ ಮಾಜಿ ಕಪ್ತಾನ ಮಿಸ್ಬಾ ಉಲ್‌ ಹಕ್‌, ಅತಿಯಾದ ಆತ್ಮವಿಶ್ವಾಸದ ಕಾರಣ ಆ ಹೊಡೆತವನ್ನಾಡಿದ್ದಾಗಿ ಹೇಳಿಕೊಂಡಿದ್ದಾರೆ. ಒಮಾನ್‌ ಆತಿಥ್ಯದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ಏಷ್ಯನ್‌ ಲಯನ್ಸ್‌ ತಂಡವನ್ನು ಮುನ್ನಡೆಸಿದ್ದ ಮಿಸ್ಬಾ, ಈ ಸಂದರ್ಭದಲ್ಲಿ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ‘ಸ್ಕೂಪ್‌ ಶಾಟ್‌’ ಎಡವಟ್ಟಿನ ಬಗ್ಗೆ ಹೇಳಿಕೊಂಡಿದ್ದಾರೆ.

“ನಾಉ ಹಲವು ಪಂದ್ಯಗಳಲ್ಲಿ ಆ ಹೊಡೆತದ ಮೂಲಕ ಫೋರ್‌ಗಳನ್ನು ಬಾರಿಸಿದ್ದೇನೆ. 2007ರಲ್ಲಿ ಫೈನ್‌ ಲೆಗ್‌ ಇದ್ದರೂ ಕೂಡ ಆಸ್ಟ್ರೇಲಿಯಾ ಎದುರು ಸ್ಕೂಪ್‌ ಶಾಟ್‌ಗಳ ಮೂಲಕ ರನ್‌ ಗಳಸಿದ್ದೆ. ಸ್ಪಿನ್ನರ್‌ಗಳ ಎದುರು ಆ ಹೊಡೆತದಿಂದ ಹೆಚ್ಚು ಯಶಸ್ಸು ಕಂಡಿದ್ದೆ. ಇದರಿಂದ ಸಿಕ್ಕಿದ್ದ ಅತಿಯಾದ ಆತ್ಮವಿಶ್ವಾಸವೇ ಭಾರತ ವಿರುದ್ಧದ ಫೈನಲ್‌ನ ಕೊನೇ ಓವರ್‌ನಲ್ಲಿ ಆ ಸ್ಕೂಪ್‌ ಶಾಟ್‌ ಆಡಲು ಕಾರಣವಾಯಿತು,” ಎಂದು ಶೊಯೇಬ್‌ ಅಖ್ತರ್‌ ಅವರ ಯೂಟ್ಯೂಬ್‌ ಚಾನಲ್‌ನಲ್ಲಿ ಮಿಸ್ಬಾ ಮಾತನಾಡಿದ್ದಾರೆ.

ವಿಂಡೀಸ್‌ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ!

2007ರ ಟಿ20 ವಿಶ್ವಕಪ್‌ ಫೈನಲ್‌ ಸೋಲಿನ ಕಹಿ ನೆನಪನ್ನು ತೆರೆದಿಟ್ಟ ಮಿಸ್ಬಾ ಉಲ್‌ ಹಕ್‌, 2011ರಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಎದುರು ಅನುಭವಿಸಿದ ಹೀನಾಯ ಸೋಲಿನ ಬಗ್ಗೆಯೂ ಮಾತನಾಡಿದ್ದಾರೆ.

“2011ರಲ್ಲಿ ಮೊಹಾಲಿ ಆ ಪಿಚ್‌ನಲ್ಲಿ ಭಾರತ ತಂಡ ಮೊದಲ 4 ಓವರ್‌ಗಳಲ್ಲೇ 44 (39/0) ರನ್‌ ಗಳಿಸಿತ್ತು. ಚೆಂಡು ಹಳೆಯದ್ದಾಗುತ್ತಿದ್ದಂತೆ ರಿವರ್ಸ್‌ ಸ್ವಿಂಗ್‌ ಲಭ್ಯವಾಯಿತು. ಹೀಗಾಗಿ ರನ್‌ ಗಳಿಸುವುದು ಬಹಳಾ ಕಷ್ಟವಾಯಿತು. ಸಚಿನ್‌ ತೆಂಡೂಲ್ಕರ್‌ 80 ರನ್‌ ಗಳಿಸಿ (85) ಆ ಪಂದ್ಯದ ಶ್ರೇಷ್ಠ ಆಟಗಾರನೆನಿಸಿದರು. ಅಷ್ಟು ಉತ್ತಮ ಆರಂಭ ಕಂಡರೂ ಭಾರತ ತಂಡ ರನ್‌ ಗಳಿಸಲು ಬಹಳಾ ಕಷ್ಟ ಪಟ್ಟಿತ್ತು,” ಎಂದು ಮಿಸ್ಬಾ ಹೇಳಿದ್ದಾರೆ.

ಟೀಮ್ ಇಂಡಿಯಾದಿಂದ ಅಶ್ವಿನ್‌ ಹೊರ ಬೀಳಲು ಇದೇ ಕಾರಣ!

“ಗುರಿ ಬೆನ್ನತ್ತಿದ್ದ ಸಂದರ್ಭದಲ್ಲಿ ನಮ್ಮ ತಂಡ ಮೊದಲ 15 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿದ್ದರೂ ನಂತರ ಒಂದೊಂದು ರನ್‌ ಹೆಕ್ಕುವುದು ಕೂಡ ಬಹಳಾ ಕಷ್ಟ ಎಂಬಂತ್ತಾಯಿತು. ನಂತರದ ಕೆಲ ಓವರ್‌ಗಳಲ್ಲಿ ರನ್‌ ಬರದ ಜೊತೆಗೆ 3 ವಿಕೆಟ್‌ಗಳನ್ನೂ ಕಳೆದುಕೊಂಡೆವು. ನಾವು ವಿಕೆಟ್‌ಗಳನ್ನು ಉಳಿಸಿಕೊಂಡಿದ್ದರೆ, ಖಂಡಿತಾ ಗುರಿ ಮೆಟ್ಟಿನಿಲ್ಲಲು ಸಾಧ್ಯವಾಗುತ್ತಿತ್ತು. ಕೊನೇ 5 ಓವರ್‌ಗಳಲ್ಲಿ ಪವರ್‌ ಪ್ಲೇ ಇದ್ದರೂ ನನಗೆ ಬ್ಯಾಟ್‌ ಮಾಡಲು ಸಿಕ್ಕಿದ್ದು ಕೇವಲ 2 ಓವರ್‌ಗಳು ಮಾತ್ರ. ಕ್ರೀಸ್‌ನಲ್ಲಿ ಏಕಾಂಗಿಯಾಗಿ ನಿಂತಿದ್ದೆ. ಮತ್ತೊಂದು ತುದಿಯಲ್ಲಿ ಯಾವ ಬ್ಯಾಟ್ಸ್‌ಮನ್‌ಗಳು ನನಗೆ ಬೆಂಬಲಿಸಲಿಲ್ಲ,” ಎಂದು ಸ್ಮರಿಸಿದ್ದಾರೆ.

ಆ ಪಂದ್ಯದಲ್ಲಿ 76 ಎಸೆತಗಳಲ್ಲಿ 5 ಫೋರ್‌ ಮತ್ತೊಂದು ಸಿಕ್ಸರ್‌ನೊಂದಿಗೆ 56 ರನ್‌ ಸಿಡಿಸಿದ್ದ ಮಿಸ್ಬಾ ಉಲ್‌ ಹಕ್‌ ಕೊನೇ ಓವರ್‌ನ 5ನೇ ಎಸೆತದಲ್ಲಿ ಜಹೀರ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿ, ಪಾಕ್‌ ಪರ ಔಟಾದ ಕೊನೇ ಬ್ಯಾಟ್ಸ್‌ಮನ್‌ ಎನಿಸಿದರು. ಪಂದ್ಯದಲ್ಲಿ 29 ರನ್‌ಗಳ ಜಯ ದಾಖಲಿಸಿದ್ದ ಟೀಮ್ ಇಂಡಿಯಾ ಫೈನಲ್‌ಗೆ ದಾಪುಗಾಲಿಟ್ಟು, ಶ್ರೀಲಂಕಾ ಕದನ ಗೆಲ್ಲುವ ಮೂಲಕ ಒಡಿಐ ಎರಡನೇ ಬಾರಿ ವಿಶ್ವಕಪ್‌ ಮುಡಿಗೇರಿಸಿಕೊಂಡಿತು.



Read more

[wpas_products keywords=”deal of the day gym”]