Karnataka news paper

ದಂಡದಿಂದ ತಪ್ಪಿಸಿಕೊಳ್ಳಲು ನಂಬರ್‌ ಪ್ಲೇಟ್‌ ಬದಲು..! ಬೆಳಗಾವಿಯಲ್ಲಿ ವಾಹನ ಚಾಲಕರ ಚಾಲಾಕಿತನ..!


ಮಹೇಶ್‌ ವಿಜಾಪುರ
ಬೆಳಗಾವಿ:
ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅತ್ಯಾಧುನಿಕ ಮಾದರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೆ, ಸವಾರರು ವಾಹನಗಳ ನಂಬರ್‌ ಪ್ಲೇಟ್‌ಗಳನ್ನೇ ತಿದ್ದಿ ಕ್ಯಾಮೆರಾ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡುತ್ತಿದ್ದಾರೆ..!

ಹೌದು.. ಇಂಥದ್ದೊಂದು ಆಘಾತಕಾರಿ ಬೆಳವಣಿಗೆ ಇತ್ತೀಚೆಗೆ ಕಂಡು ಬರುತ್ತಿದ್ದು, ನಗರದಲ್ಲಿ ಪ್ರತಿ ದಿನ ಪೊಲೀಸರು ವಿಧಿಸುವ ದಂಡ ಪ್ರಕರಣಗಳಲ್ಲಿ ನಂಬರ್‌ ಪ್ಲೇಟ್‌ ನಿಯಮ ಉಲ್ಲಂಘಿಸಿದವೇ ಹೆಚ್ಚು ದಾಖಲಾಗುತ್ತಿವೆ. ವಾಹನ ಸವಾರರ ಈ ಕಳ್ಳ ಮಾರ್ಗ ಪೊಲೀಸರಿಗೂ ತಲೆನೋವಾಗಿದೆ.

ಮೋಸ ಹೇಗೆ?: ಹೆಲ್ಮೆಟ್‌ ರಹಿತ ಚಾಲನೆ, ತ್ರಿಬಲ್‌ ರೈಡಿಂಗ್‌, ಅತಿ ವೇಗ, ಸಿಗ್ನಲ್‌ ಜಂಪ್‌, ಚಾಲನೆ ವೇಳೆ ಮೊಬೈಲ್‌ ಬಳಕೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದಾಗ ನಗರದಲ್ಲಿ ಸ್ಥಾಪಿಸಿರುವ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಟಿಎಂಸಿ) ಸಿಸಿ ಕ್ಯಾಮೆರಾಗಳ ಸಹಾಯದಿಂದ ಸ್ವಯಂ ಚಾಲಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತದೆ.

ಹಾಫ್ ಹೆಲ್ಮೆಟ್ಟು, ಪೊಲೀಸರಿಗೆ ಇಕ್ಕಟ್ಟು; ನಾಗರಿಕರ ಟೀಕೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ
ವಾರ್ಷಿಕ 2 ಕೋಟಿ ರೂ.ನಷ್ಟಿದ್ದ ಬೆಳಗಾವಿ ಕಮಿಷನರೇಟ್‌ ವ್ಯಾಪ್ತಿಯ ದಂಡದ ಮೊತ್ತ ಟಿಎಂಸಿ ವ್ಯವಸ್ಥೆಯಿಂದ 2019ರಲ್ಲಿ ದುಪ್ಪಟ್ಟಾಗಿ 4 ಕೋಟಿ ರೂ. ಮೀರಿತ್ತು. ನಿಯಮ ಉಲ್ಲಂಘಿಸಿದ ಪ್ರತಿ ಸಂದರ್ಭದಲ್ಲೂ ಟಿಎಂಸಿ ಪ್ರಕರಣ ದಾಖಲಿಸಿಕೊಳ್ಳುತ್ತಿರುವುದರಿಂದ ದಂಡದ ನೋಟಿಸ್‌ ನೇರವಾಗಿ ವಾಹನ ಮಾಲೀಕರ ಮನೆಗೆ ಹೋಗಲಾರಂಭಿಸಿದ್ದವು. ಇದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ವಾಹನ ಸವಾರರು ನಂಬರ್‌ ಪ್ಲೇಟ್‌ನಲ್ಲಿನ ನಂಬರ್‌ಗಳನ್ನೇ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ನಂಬರ್‌ಗಳ ಮೇಲೆ ಸ್ಟಿಕರ್‌ ಅಂಟಿಸುವುದು, ಅಂಕಿ ಕಾಣದಂತೆ ದಾರ ಕಟ್ಟುವುದು, ಅರ್ಧ ಭಾಗ ಮುರಿದ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳುವ ನಾನಾ ತಂತ್ರಗಾರಿಕೆಯನ್ನೂ ಮಾಡುತ್ತಿದ್ದಾರೆ.

ನಷ್ಟ ಮತ್ತು ಅಪಾಯಕಾರಿ: ಇದೊಂದು ಅಪಾಯಕಾರಿ ಬೆಳವಣಿಗೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು. ದಂಡದಿಂದ ಪಾರಾಗುವ ಉದ್ದೇಶಕ್ಕೆ ನಂಬರ್‌ ಪ್ಲೇಟ್‌ ತಿರುಚಿದರೆ ಅಪಘಾತ ಸಂಭವಿಸಿದಾಗ ಅಥವಾ ವಾಹನ ಕಳ್ಳತನವಾದರೆ ಪತ್ತೆ ಹಚ್ಚಲು ಕಷ್ಟವಾಗುತ್ತದೆ. ಅಲ್ಲದೆ, ವಿಮೆ ಪಾವತಿಗೂ ತಾಂತ್ರಿಕ ತೊಂದರೆ ಎದುರಾಗಬಹುದು. ಸೆಕೆಂಡ್‌ ಹ್ಯಾಂಡ್‌ ಆಗಿ ವಾಹನ ಮಾರಾಟ ಮಾಡಿದಾಗ ವಾಹನ ಖರೀದಿಸಿದ ವ್ಯಕ್ತಿ ಹೆಸರಿಗೆ ದಾಖಲಾತಿ ವರ್ಗಾವಣೆ ಆಗದಿದ್ದರೆ ಮುಂದಾಗುವ ಎಲ್ಲ ಅಪರಾಧಗಳಿಗೆ ಮೂಲ ದಾಖಲಾತಿ ಹೊಂದಿರುವ ಮಾಲೀಕರೇ ಹೊಣೆಯಾಗಬಹುದು.

ಬೆಂಗಳೂರಲ್ಲಿ ಹಾಫ್‌ ಹೆಲ್ಮೆಟ್‌ ಧರಿಸಿದರೆ ಬೀಳುತ್ತೆ ದಂಡ: ಬೈಕ್‌ ಸವಾರರೇ ಎಚ್ಚರ
ಚುರುಕಾಗಲಿ ತಪಾಸಣೆ

ನಗರದಲ್ಲಿ ದರೋಡೆ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುವುದರಿಂದ ಡಿಫೆಕ್ಟ್ ನಂಬರ್‌ ಪ್ಲೇಟ್‌ ಇರುವ ವಾಹನಗಳು ಕಳ್ಳರಿಗೆ ಇನ್ನಷ್ಟು ಅನುಕೂಲತೆ ಸೃಷ್ಟಿಸುವ ಸಾಧ್ಯತೆಗಳಿವೆ. ಈ ಪದ್ಧತಿಗೆ ಕಡಿವಾಣ ಹಾಕದಿದ್ದರೆ ಮಹಾರಾಷ್ಟ್ರ – ಗೋವಾ ರಾಜ್ಯಗಳ ಗಡಿ ಹಂಚಿಕೊಂಡಿರುವ ಬೆಳಗಾವಿಯಲ್ಲಿ ಹೊರ ರಾಜ್ಯಗಳಿಂದ ಬರುವ ವಾಹನಗಳಿಂದಲೂ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಪೊಲೀಸರ ಕಾರ್ಯಾಚರಣೆ ಇನ್ನಷ್ಟು ಚುರುಕಾಗಬೇಕಿದೆ. ಉದ್ದೇಶ ಪೂರ್ವಕ ನಂಬರ್‌ ಪ್ಲೇಟ್‌ ಬದಲಿಸಿದ ವಾಹನಗಳನ್ನು ಜಪ್ತಿ ಮಾಡಬೇಕು. ಕೇವಲ ಲೈಸೆನ್ಸ್‌ ಒಂದನ್ನೇ ಪರಿಗಣಿಸಿ ದಂಡ ಸಂಗ್ರಹಿಸದೆ ಆರ್‌ಸಿ ಬುಕ್‌ ಕಡ್ಡಾಯ ಪರಿಶೀಲಿಸಿದರೆ ಕಳ್ಳ ದಾರಿ ಹುಡುಕುವವರಿಗೆ ಪೆಟ್ಟು ಬೀಳುತ್ತದೆ ಎನ್ನುವುದು ಪ್ರಜ್ಞಾವಂತರ ಸಲಹೆ.

‘ದಂಡ ತಪ್ಪಿಸುವ ಉದ್ದೇಶದಿಂದಲೇ ಬಹುತೇಕರು ನಂಬರ್‌ ಪ್ಲೇಟ್‌ ತಿದ್ದುತ್ತಿದ್ದಾರೆ. ನಂಬರ್‌ ಪ್ಲೇಟ್‌ನಲ್ಲಿನ ನಂಬರ್‌ ಬದಲಿಸುವುದೇ ದೊಡ್ಡ ಅಪರಾಧ. ಸಣ್ಣ ತಪ್ಪು ದೊಡ್ಡ ಶಿಕ್ಷೆಗೆ ದಾರಿಯಾಗಬಹುದು. ಈ ಕುರಿತ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸುತ್ತೇವೆ’ ಎನ್ನುತ್ತಾರೆ, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಸ್ನೇಹಾ ಪಿ.ವಿ.

ಸಂಚಾರ ನಿಯಮ ಉಲ್ಲಂಘಿಸಿದ ‘ಖಾಕಿ’ಗೂ ದಂಡ : ಶಿವಮೊಗ್ಗ ಪೊಲೀಸ್ ಇಲಾಖೆಯ ಹೊಸ ಆದೇಶ



Read more

[wpas_products keywords=”deal of the day sale today offer all”]