ಬೆಳಗಾವಿ (ಸುವರ್ಣ ವಿಧಾನಸೌಧ): ‘ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮಕ್ಕೆ ಸಂಬಂಧಿಸಿದಂತೆ ಎಸ್.ವಿ. ಸಂಕನೂರ ಸಮಿತಿಯ ಶಿಫಾರಸು ಮತ್ತು ಇತ್ತೀಚಿನ ಸುತ್ತೋಲೆಯ ಕುರಿತಂತೆ ಅಧಿವೇಶನ ಮುಗಿಯುವುದರ ಒಳಗೆ ಹೊಸ ಸುತ್ತೋಲೆ ಹೊರಡಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಪ್ರಸ್ತಾಪಿಸಿದ ವಿಷಯದ ಮೇಲೆ ನಡೆದ ಚರ್ಚೆಯ ಬಳಿಕ ಉತ್ತರ ನೀಡಿದ ಸಚಿವರು, ‘ಶಾಲೆಗಳು ನವೀಕರಣ ಆಗಿಲ್ಲ ಎಂಬ ಕಾರಣಕ್ಕೆ ಶಿಕ್ಷಕರ ವೇತನ ತಡೆಹಿಡಿದಿದ್ದರೆ ತಕ್ಷಣ ಬಿಡುಗಡೆ ಮಾಡಲಾಗುವುದು. ಈ ಕಾರಣಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
‘ಕಟ್ಟಡ ಮತ್ತು ಅಗ್ನಿಶಾಮಕ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮಗಳನ್ನು ಖಾಸಗಿ ಶಾಲೆಗಳಿಗೆ ಅನ್ವಯಿಸಲಾಗಿದೆ. ಈ ಕುರಿತು ಎಸ್.ವಿ. ಸಂಕನೂರ ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಪರಿಗಣಿಸದೆ ಸರ್ಕಾರ ಸುತ್ತೋಲೆ ಹೊರಡಿಸಿದೆ’ ಎಂದು ಶ್ರೀಕಂಠೇಗೌಡ ದೂರಿದರು.
ಜೆಡಿಎಸ್‌ನ ಭೋಜೇಗೌಡ, ‘ಖಾಸಗಿ ಶಾಲೆಗಳು ಮಾನ್ಯತೆ ನವೀಕರಿಸದಿದ್ದರೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸುತ್ತೋಲೆಯ ಮೂಲಕ ಬೆದರಿಕೆ ಒಡ್ಡಲಾಗಿದೆ’ ಎಂದರು. ‘ಖಾಸಗಿ ಶಾಲೆಗಳ ಕತ್ತು ಹಿಚುಕಲು ಸರ್ಕಾರ ಸುತ್ತೋಲೆ ಹೊರಡಿಸಿದಂತಿದೆ. ಅದನ್ನು ವಾಪಸು ಪಡೆಯದಿದ್ದರೆ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುವುದು’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಆವೇಶಭರಿತರಾಗಿ ಮಾತನಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಬಿಜೆಪಿಯ ಸದಸ್ಯರು, ಗೌಡರ ಮಾತಿಗೆ ತಿರುಗೇಟು ನೀಡಿದರು. ಆಗ ಮಾತಿನ ಚಕಮಕಿಯೂ ನಡೆಯಿತು.
‘ಖಾಸಗಿ ಶಾಲೆಗಳ ಮೇಲೆ ಗದಾಪ್ರಹಾರ ಸೂಕ್ತವಲ್ಲ. ಪ್ರತಿವರ್ಷ ಮಾನ್ಯತೆ ನವೀಕರಿಸುವ ಅಗತ್ಯವೇನು’ ಎಂದು ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ ಪ್ರಶ್ನಿಸಿದರು. ಬಿಜೆಪಿಯ ಪುಟ್ಟಣ್ಣ, ‘ಸುತ್ತೋಲೆಯನ್ನು ಸದನದಲ್ಲಿಯೇ ಹರಿದು, ಶಿಕ್ಷಣ ಸಚಿವರ ಮುಖದ ಮೇಲೆ ಬಿಸಾಕಬೇಕು ಎಂದುಕೊಂಡಿದ್ದೆ. ಆದರೆ, ಸಚಿವ ಬಿ.ಸಿ. ನಾಗೇಶ್ ಹೊಸಬರು. ಸಜ್ಜನ ರಾಜಕಾರಣಿ. ಈ ಸಮಸ್ಯೆಯನ್ನು ಪರಿಹರಿಸುವ ವಿಶ್ವಾಸವಿದೆ’ ಎಂದರು. ಬಿಜೆಪಿಯ ಅರುಣ್ ಶಹಾಪುರ, ‘ಕಟ್ಟಡ ಮತ್ತು ಅಗ್ನಿ ಸುರಕ್ಷತೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕಾರ್ಯಸಾಧುವಲ್ಲ’ ಎಂದು ಅಭಿಪ್ರಾಯಪಟ್ಟರು. ಬಿಜೆಪಿಯ ತೇಜಶ್ವಿನಿ ಗೌಡ, ಶಶೀಲ್ ನಮೋಶಿ ಕೂಡಾ ಮಾತನಾಡಿದರು.
ಚರ್ಚೆಯ ಬಳಿಕ ಉತ್ತರಿಸಿದ ಸಚಿವರು, ‘2018ಕ್ಕಿಂತ ಪೂರ್ವ ಮತ್ತು ನಂತರ ಆರಂಭವಾದ ಶಾಲೆಗಳು ಕಡ್ಡಾಯವಾಗಿ ಒಂದು ವರ್ಷದ ಒಳಗೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ 2018ರಲ್ಲಿಯೇ ಸುತ್ತೋಲೆ ಹೊರಡಿಸಲಾಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಂತೆ ಎಲ್ಲ ಶಾಲೆಗಳು ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಕ್ರಮಗಳನ್ನು ಪಡೆಯುವುದು ಕಡ್ಡಾಯ’ ಎಂದರು.