ಕಾರವಾರ (ಉತ್ತರ ಕನ್ನಡ): ದಶಕಗಳ ಹಿಂದೆ ಕಾರವಾರ, ಬೇಲೇಕೇರಿ ಬಂದರಿನಲ್ಲಿ ಒಂದು ಹಿಡಿ ಸಿಕ್ಕರೂ ಬಾಚಿ ತುಂಬಿಕೊಳ್ಳುತ್ತಿದ್ದ ಕಬ್ಬಿಣದ ಅದಿರನ್ನು ಈಗ ಕೇಳುವವರೇ ಗತಿಯಿಲ್ಲ. ಜಪ್ತಾಗಿ ಕಾರವಾರ ಬಂದರಿನಲ್ಲಿ ಇರುವ ಅದಿರು ಮಾರಾಟವೇ ಈಗ ಸವಾಲಾಗಿದೆ.
ಬಳ್ಳಾರಿಯಿಂದ ತಂದ ಅದಿರನ್ನು ಬೇಲೇಕೇರಿ, ಕಾರವಾರ ಬಂದರು ಮೂಲಕ ರಫ್ತು ಮಾಡುವಾಗ ಕಳ್ಳತನವಾಗುತ್ತಿದ್ದ ಅದಿರನ್ನು ಅರಣ್ಯ ಇಲಾಖೆ ಅಧಿಕಾರಿಗಳು 2010ರಲ್ಲಿ ಜಪ್ತಿ ಮಾಡಿದ್ದರು. ಅದರಲ್ಲಿ 1.15 ಲಕ್ಷ ಟನ್ ಅದಿರು ಕಾರವಾರ ಬಂದರಿನಲ್ಲಿ ಮತ್ತು 8 ಲಕ್ಷ ಟನ್ ಅದಿರು ಬೇಲೇಕೇರಿಯಲ್ಲಿ ಜಪ್ತಿ ಮಾಡಿ ಇಡಲಾಗಿತ್ತು. ಕಾರವಾರ ಬಂದರಿನಲ್ಲಿರುವ ಅದಿರು ಹರಾಜಿಗೆ ಮಾತ್ರ ಕೋರ್ಟ್ ಅನುಮತಿ ಸಿಕ್ಕಿದೆ.
ಅದರಂತೆ ಅದಿರು ಹರಾಜಿಗೆ ಇದೇ ತಿಂಗಳು ಇ – ಟೆಂಡರ್ ಕರೆಯಲಾಗಿತ್ತು. ಆದರೆ, ಅದರಲ್ಲಿ ಗೋವಾ ಮೂಲದ ಒಂದು ಕಂಪನಿ ಮಾತ್ರ ಭಾಗವಹಿಸಿತ್ತು. ಹರಾಜಿನಲ್ಲಿ ಸ್ಪರ್ಧೆಯೇ ಇಲ್ಲದಿರುವುದರಿಂದ ಮೊದಲ ಬಾರಿ ಕರೆದ ಟೆಂಡರ್ ಅನ್ನು ರದ್ದು ಮಾಡಿ ಮತ್ತೊಮ್ಮೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಜನವರಿ 31ರಂದು ಟೆಂಡರ್ ಪ್ರಕಟಣೆ ಹೊರಡಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಫ್ತಿಗೆ ಅವಕಾಶ ಇಲ್ಲ
ದೇಶದಲ್ಲಿ ಅದಿರು ಹಗರಣ ಬಯಲಾದ ಬಳಿಕ ವಿದೇಶಕ್ಕೆ ಅದಿರು ರಫ್ತು ಮಾಡುವುದನ್ನು ನಿರ್ಬಂಧಿಸಲಾಗಿದೆ. ಕಾರವಾರದಲ್ಲಿ ಜಪ್ತಾದ ಅದಿರು ಖರೀದಿಸಿದರೂ ಅದನ್ನು ವಿದೇಶಕ್ಕೆ ರಫ್ತು ಮಾಡುವಂತಿಲ್ಲ. ಸ್ಥಳೀಯವಾಗಿಯೇ ಬಳಸಬೇಕು. ಇನ್ನೊಂದೆಡೆ ಗೋವಾ ಬಿಟ್ಟರೆ ಮತ್ತೆಲ್ಲಿಯೂ ಕಾರವಾರ ಸಮೀಪದಲ್ಲಿ ಅದಿರು ಕಾರ್ಖಾನೆಗಳು ಇಲ್ಲ. ಎಲ್ಲವೂ ಬಳ್ಳಾರಿ ಆಸುಪಾಸಿನ ಜಿಲ್ಲೆಗಳಲ್ಲಿವೆ. ಹಾಗಾಗಿ ಅದಿರು ಖರೀದಿಗೆ ನಿರಾಸಕ್ತಿ ಕಾಣುತ್ತಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಇನ್ನು ಕಾರವಾರದಲ್ಲಿ ಜಪ್ತಾಗಿರುವ ಅದಿರು 12 ವರ್ಷಗಳಿಂದ ಮಳೆ, ಗಾಳಿಗೆ ಸಿಲುಕಿದೆ. 1.15 ಲಕ್ಷ ಟನ್ ಪೈಕಿ ಸುಮಾರು 50 ಸಾವಿರ ಟನ್ ಹಿಂದೆಯೇ ಕಳುವಾಗಿದೆ. ಈಗ ಕೇವಲ 32 ಸಾವಿರ ಟನ್ ಮಾತ್ರ ಉಳಿದಿದೆ ಎಂದು ಗಣಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಹಾಗಿದ್ದರೂ ಅದಿರು ಗುಣಮಟ್ಟಕ್ಕೆ (ಗ್ರೇಡ್) ಅನುಗುಣವಾಗಿ ಇಂಡಿಯನ್ ಬ್ಯೂರೊ ಆಫ್ ಮೈನ್ಸ್ (ಐಬಿಎಂ) ದರ ನಿಗದಿ ಮಾಡಿದೆ. ಅದರಂತೆಯೇ ಹರಾಜು ಮಾಡಬೇಕಿರುವುದು ಇನ್ನೊಂದು ಸವಾಲು.
ಬೇಲೇಕೇರಿ ಅದಿರಿಗೂ ಆತಂಕ
ಬಳ್ಳಾರಿಯಿಂದ ಸಾಗಾಟವಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಿಲುಕಿರುವ ಅದಿರನ್ನು ಮತ್ತೆ ಬಳಸಬೇಕಾದರೆ ಮರಳಿ ಸಾವಿರಾರು ಕಿ. ಮೀ. ದೂರ ಸಾಗಿಸಬೇಕಿದೆ. ಜತೆಗೆ ಹರಾಜಿನಲ್ಲಿ ಖರೀದಿಸಿದ ಅದಿರಿಗೆ ರಾಜಧನ ಕೂಡ ಕಟ್ಟಬೇಕು. ಅದೆಲ್ಲ ಲೆಕ್ಕ ಹಾಕಿದರೆ ಇಲ್ಲಿನ ಅದಿರು ದೂರದ ಕಾರ್ಖಾನೆಯವರಿಗೆ ದುಬಾರಿ ಎನ್ನಲಾಗುತ್ತಿದೆ. ಆ ಕಾರಣಕ್ಕೆ ಗೋವಾ ಮೂಲದ ಕಂಪನಿ ಬಿಟ್ಟು ಬೇರೆಯವರು ಹರಾಜಿನಲ್ಲಿ ಪಾಲ್ಗೊಂಡಿಲ್ಲ.
ಇದು ಕಾರವಾರದಲ್ಲಿರುವ ಅದಿರಿನ ಪರಿಸ್ಥಿತಿಯಾದರೆ, ಬೇಲೇಕೇರಿ ಬಂದರಿನಲ್ಲಿ ಬರೋಬ್ಬರಿ ಎಂಟು ಲಕ್ಷ ಟನ್ ಅದಿರು ಜಪ್ತಿ ಮಾಡಿ ಇಡಲಾಗಿದೆ. ಅದರ ಹರಾಜಿಗೆ ನ್ಯಾಯಾಲಯ ಇನ್ನೂ ಅನುಮತಿ ಕೊಟ್ಟಿಲ್ಲ. ಅಲ್ಲದೆ, ಬೇಲೇಕೇರಿಯಲ್ಲಿ ಈಗ ಎಷ್ಟು ಅದಿರು ಉಳಿದುಕೊಂಡಿದೆ ಎನ್ನುವ ಲೆಕ್ಕವೂ ಆಗಿಲ್ಲ. ಅದನ್ನು ಹರಾಜು ಮಾಡುವ ಪರಿಸ್ಥಿತಿ ಎದುರಾದರೆ ಮತ್ತೆ ಇದೇ ರೀತಿಯ ಸವಾಲು ಸೃಷ್ಟಿಯಾಗುವ ಆತಂಕ ಎದುರಾಗಿದೆ.
‘ಟೆಂಡರ್ ಕರೆದಾಗ ಗೋವಾದ ಒಂದೇ ಕಂಪನಿ ಭಾಗವಹಿಸಿತ್ತು. ಸ್ಪರ್ಧೆ ಇಲ್ಲದೇ ಇದ್ದರಿಂದ ಮತ್ತೊಮ್ಮೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಜನವರಿ 31ರಂದು ಟೆಂಡರ್ ಪ್ರಕಟಣೆ ಹೊರಡಿಸಲಾಗುವುದು. ವಿದೇಶಕ್ಕೆ ಅದಿರು ರಫ್ತು ಸ್ಥಗಿತವಾಗಿರುವುದರಿಂದ ಮತ್ತು ಸಮೀಪದಲ್ಲಿ ಅದಿರಿಗೆ ಸಂಬಂಧಿಸಿದ ಕಂಪನಿ, ಕಾರ್ಖಾನೆಗಳು ಇಲ್ಲದಿರುವ ಕಾರಣ ಹರಾಜಿನಲ್ಲಿ ನಿರಾಸಕ್ತಿ ಕಾಣುತ್ತಿದೆ. ಬೇಲೇಕೇರಿ ಅದಿರು ಹರಾಜಿಗೂ ಕೋರ್ಟ್ ಅನುಮತಿ ಕೇಳಲಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ. ಸೋಮಶೇಖರ ಹೇಳಿದ್ದಾರೆ.
Read more
[wpas_products keywords=”deal of the day sale today offer all”]