ದಕ್ಷಿಣ ಕನ್ನಡ: ಕಳೆದ ಎರಡು ವರ್ಷಗಳಿಂದ ಕೊರೊನಾ ದಾಳಿಯ ಪರಿಣಾಮ ಯುವ ಜನತೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಕರಾವಳಿ ಭಾಗದಲ್ಲಿ ಅಡಿಕೆ ಧಾರಣೆಯಲ್ಲಿ ಬಂಪರ್ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಯುವಕರು ಅಡಿಕೆ ಕೃಷಿಗೆ ಒತ್ತು ನೀಡಿ ಆ ದಿಕ್ಕಿನತ್ತ ದಾಪುಗಾಲು ಇಡುತ್ತಿದ್ದಾರೆ. ಈ ಪೈಕಿ ರಾಮಕುಂಜ ಯುವಕನೋರ್ವ ವಿಶಿಷ್ಠ ಪ್ರಯೋಗದೊಂದಿಗೆ ಗುಡ್ಡದ ಮೇಲೆ ಅಡಿಕೆ ತೋಟ ಅರಳಿಸಲು ಹೊರಟಿದ್ದಾರೆ.
ರಾಮಕುಂಜ ಸಮೀಪದ ಹಳೆ ನೇರೆಂಕಿ ಗ್ರಾಮದ ಇಜ್ಜಾವು ಶಿವ ಪ್ರಸಾದ್ ಆಚಾರ್ಯ ಎಂಬ ಯುವಕ ತನ್ನ ಮನೆಯ ಹಿಂದಿನ ಗುಡ್ಡದ ಮೇಲೆ ಸುಮಾರು ಹದಿಮೂರು ಎಕರೆ ಜಾಗದಲ್ಲಿ ಅದ್ಭುತ ರೀತಿಯಲ್ಲಿ ಗುಂಡಿ ತೋಡಿ ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಗುಡ್ಡವನ್ನು ಇಳಿಜಾರು ರೀತಿಯಲ್ಲಿ ತಟ್ಟು ಮಾಡಿ ಮಧ್ಯೆ ಮಧ್ಯೆ ರಸ್ತೆ, ಎತ್ತರ ಪ್ರದೇಶದಲ್ಲಿ ಭಾರೀ ಗಾತ್ರದ ಟ್ಯಾಂಕ್ ನಿರ್ಮಾಣ ಮಾಡಿ ಹನಿ ನೀರಾವರಿ ಯೋಜನೆಯ ವ್ಯವಸ್ಥೆಯಲ್ಲಿ ಮಾದರಿ ರೀತಿಯಲ್ಲಿ ಕೃಷಿ ಕೈಂಕರ್ಯವನ್ನು ಮಾಡಿದ್ದಾರೆ.

ಇಜ್ಯಾವು ಮನೆತನ ನಿವೃತ್ತ ಉಪನ್ಯಾಸಕ, ಖ್ಯಾತ ಜ್ಯೋತಿಷಿ ಮಾಧವ ಆಚಾರ್ಯ ಇಜ್ಜಾವು ಇವರ ಪುತ್ರರಾಗಿರುವ ಮೆಕ್ಯಾನಿಕಲ್ ಇಂಜಿನಿಯರ್ ಶಿವಪ್ರಸಾದ್ ಆಚಾರ್ಯ ಕಟ್ಟಡ ನಿರ್ಮಾಣ ಕಾರ್ಯ ಮಾಡುವ ವೃತ್ತಿಯನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಹಿರಿಯರಿಂದ ಬಂದ ಭೂಮಿಯಲ್ಲಿರುವ ಕೃಷಿಯ ಅಭಿವೃದ್ಧಿಯೊಂದಿಗೆ ಖಾಲಿ ಇರುವ ಗುಡ್ಡದ ಜಾಗದಲ್ಲಿ ಅಡಿಕೆ ಕೃಷಿ ಮಾಡಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಹದಿಮೂರು ಎಕರೆ ಭೂಮಿಯನ್ನು ಹದ ಮಾಡಿ ಗುಡ್ಡದ ಮೇಲೆ ಹಸಿರು ತೋಟ ನಳನಳಿಸಬೇಕು ಎನ್ನುವ ಸಂಕಲ್ಪ ಮಾಡಿದ್ದಾರೆ.
ಇವರು ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿರುವುದರಿಂದ ಹಿಟಾಚಿ ಜೆಸಿಬಿ ಇವರಲ್ಲೇ ಇದೆ. ಕೊರೊನಾ ಸಂದರ್ಭದಲ್ಲಿ ಇವರ ವೃತ್ತಿಗೆ ಸ್ವಲ್ಪ ಸಂಕಷ್ಟ ಬಂದಿತ್ತು. ಆಗ ಹಿಟಾಚಿ ಕೆಲಸವಿಲ್ಲದೆ ಖಾಲಿ ಹೊಡೆಯುತ್ತಿತ್ತು. ಹೇಗೂ ಹಿಟಾಚಿ ಚಾಲಕರಿಗೆ ಪುಕ್ಕಟೆ ಸಂಬಳ ನೀಡಬೇಕಲ್ಲ ಎಂದು ಆಲೋಚಿಸಿದಾಗ ಕೃಷಿ ಕಾರ್ಯಕ್ಕೆ ಹಿಟಾಚಿ ಬಳಸಿಕೊಳ್ಳಲು ನಿರ್ಧಾರ ಮಾಡಿ ಗುಡ್ಡ ಅಗೆಯುವ ಕೆಲಸ ಶುರು ಮಾಡಿದರು. ಸುಮಾರು ಆರು ತಿಂಗಳು ಗುಡ್ಡ ಅಗೆಯುವ ಕಾರ್ಯ ಮಾಡಿ ಸುಂದರ ತೋಟ ನಿರ್ಮಾಣಕ್ಕೆ ಅಣಿ ಮಾಡಲಾಯಿತು.
ಸುಮಾರು 2.5 ಅಡಿ ಅಗಲ, ಎರಡು ಅಡಿ ಆಳದ ಗುಂಡಿ ತೋಡಿ ಆರು ಗಿಡಗಳ ಮಧ್ಯೆ ಒಂದು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈ ರಸ್ತೆ ಈಗ ಅಷ್ಟೊಂದು ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ಭವಿಷ್ಯದಲ್ಲಿ ಅಡಿಕೆ ತೋಟಕ್ಕೆ ಮದ್ದು ಸಿಂಪಡನೆ ಮಾಡಲು, ಅಡಿಕೆ ಫಸಲು ಕೊಯ್ಯಲು ಹಾಗೂ ಸಾಗಾಟ ಮಾಡಲು ಈ ರಸ್ತೆ ತುಂಬಾ ಉಪಯುಕ್ತವಾಗಿದೆ.
ವ್ಯವಸ್ಥಿತವಾಗಿ ಮಾಡಲಾದ ತೋಟದಲ್ಲಿ ಅರ್ಧದಷ್ಟು ಮಂಗಳ ಹಾಗೂ ಇನ್ನರ್ಧದಷ್ಟು ರತ್ನಗಿರಿ ತಳಿಯ ಸುಮಾರು ನಾಲ್ಕು ಸಾವಿರ ಅಡಿಕೆ ಸಸಿಗಳನ್ನು ನಾಟಿ ಮಾಡಲಾಗಿದೆ. ಇದಕ್ಕೆ ಹನಿ ನೀರಾವರಿ ಯೋಜನೆಯನ್ನು ಬಳಸಲಾಗಿದೆ. ಗುಡ್ಡದಲ್ಲಿನ ಎತ್ತರದ ಭಾಗದಲ್ಲಿ ಭಾರೀ ಗಾತ್ರದ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. 30 ಅಡಿ ಸುತ್ತಳತೆ ಹಾಗೂ 25 ಅಡಿ ಆಳದ ಟ್ಯಾಂಟ್ ನಿರ್ಮಾಣ ಮಾಡಿ ಟ್ಯಾಂಕ್‌ನ ಸುತ್ತ 14 ಅಡಿಯಷ್ಟು ಮಣ್ಣು ಹಾಕಲಾಗಿದೆ.
ಎರಡು ಕೊಳವೆ ಬಾವಿಯಿಂದ ಟ್ಯಾಂಕ್‌ಗೆ ನೀರು ತುಂಬುವ ಕಾರ್ಯ ಮಾಡಲಾಗುತ್ತಿದೆ. ಪಿವಿಸಿ ಪೈಪಿನಲ್ಲಿ ಟ್ಯಾಂಕ್‌ನಿಂದ ಕೆಳಗೆ ಬರುವ ನೀರಿನ ಫಿಲ್ಟರ್‌ಗಾಗಿ ಎರಡು ಫಿಲ್ಟರ್ ಇಟ್ಟು ಶುದ್ಧ ನೀರನ್ನು ಅಡಿಕೆ ಗಿಡಗಳಿಗೆ ಉಣಬಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಗಿಡಕ್ಕೆ ಎರಡು ಡ್ರಿಪ್ ಅಳವಡಿಸಲಾಗಿದ್ದು, ಒಂದು ಗಂಟೆಯಲ್ಲಿ ಎಂಟು ಲೀಟರ್ ನೀರು ಗಿಡಕ್ಕೆ ಬೀಳುತ್ತದೆ. ಅಷ್ಟೂ ನಾಲ್ಕು ಸಾವಿರ ಗಿಡಕ್ಕೆ ಕೇವಲ ಒಂದು ಗಂಟೆಯಲ್ಲಿ ನೀರು ಉಣಿಸಲಾಗುತ್ತದೆ. ವಿಶೇಷವೆಂದರೆ ಇದೇ ಹನಿ ನೀರಿನ ವ್ಯವಸ್ಥೆಯಲ್ಲಿ 20 ಸಾವಿರ ಗಿಡಕ್ಕೆ ಏಕ ಕಾಲದಲ್ಲಿ ನೀರುಣಿಸಬಹುದು. ಮಾತ್ರವಲ್ಲ ಈ ಹನಿ ನೀರಾವರಿ ಯೋಜನೆಯಲ್ಲಿ ವೆಂಚರ್ ಅಳವಡಿಸಲಾಗಿದ್ದು. ಅದರಲ್ಲಿ ಗಿಡಗಳಿಗೆ ರಸಗೊಬ್ಬರವನ್ನು ಲಿಕ್ವಿಡ್ ರೂಪದಲ್ಲಿ ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಈಗಿನ ನಿರ್ವಹಣೆ ದಿನದಲ್ಲಿ ಕೇವಲ ಒಂದು ಗಂಟೆ ಅಷ್ಟೆ..!
ಇಷ್ಟೆಲ್ಲಾ ಅಡಿಕೆ ತೋಟದ ನಿರ್ಮಾಣಕ್ಕೆ ಏನಿಲ್ಲವೆಂದರೂ ಸುಮಾರು 20 ಲಕ್ಷ ರೂ ಖರ್ಚು ಮಾಡಲಾಗಿದೆ. ಆದರೆ ಒಮ್ಮೆ ಖರ್ಚು ಮಾಡಿದರೂ ಭವಿಷ್ಯದಲ್ಲಿ ಖರ್ಚು ವೆಚ್ಚಗಳು ಕಡಿಮೆ ಎಂದು ಅಂದಾಜಿಸಲಾಗಿದೆ. ಹನಿ ನೀರಾವರಿ ಯೋಜನೆಯನ್ನು ಜೈನ್ ಇರಿಗೇಷನ್ ಸಂಸ್ಥೆ ಅಚ್ಚುಕಟ್ಟಾಗಿ ಮಾಡಿದೆ. ಈ ವ್ಯವಸ್ಥಿತ ತೋಟದ ಬಳಿಕ ಇನ್ನಷ್ಟು ಅಡಿಕೆ ತೋಟ ಮಾಡುವ ಯೋಜನೆ ಕೂಡಾ ಈ ಯುವಕನಲ್ಲಿದೆ. ಶಿವ ಪ್ರಸಾದ್ ಕಾರ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಪ್ರಸಾದ್ ಆಚಾರ್ಯ ಇಜ್ಜಾವು, ಕೊರೊನಾ ಮಹಾಮಾರಿ ವಕ್ಕರಿಸಿ ಲಾಕ್ ಡೌನ್ ಆದಾಗ ಗುಡ್ಡದಲ್ಲಿ ಅಡಿಕೆ ಕೃಷಿ ಮಾಡಿ ಸಾಧನೆ ಮಾಡಬೇಕೆನ್ನುವ ಕಾಯಕಕ್ಕೆ ಇಳಿದಿದ್ದೇನೆ. ಎಲ್ಲಾ ಕಡೆ ಅಡಿಕೆ ಕೃಷಿ ತೋಟಗಳು ನಿರ್ಮಾಣವಾಗುತ್ತಿರುವಾಗ ವಿಶೇಷ ಯೋಜನೆಯೊಂದಿಗೆ ಭವಿಷ್ಯದಲ್ಲಿ ನಾಲ್ಕೇ ವರ್ಷದಲ್ಲಿ ಉತ್ತಮ ಫಸಲು ಪಡೆಯುವ ಉದ್ದೇಶದಿಂದ ಗುಡ್ಡದಲ್ಲಿ ತೋಟ ಮಾಡುವ ಸಂಕಲ್ಪವನ್ನು ಅನುಷ್ಠಾನ ಮಾಡಲಾಗಿದೆ. ಈ ತೋಟಕ್ಕೆ ಮಾಡಿರುವ ಯೋಜನೆಗಳು ಮುಂದಕ್ಕೆ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ಯುವ ಜನತೆ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಸ್ವಾವಲಂಬಿ ಬದುಕಿನೊಂದಿಗೆ ಸದೃಢ ಭಾರತ ನಿರ್ಮಾಣಕ್ಕೆ ಕೊಡುಗೆಯಾಗುತ್ತದೆ.
Read more
[wpas_products keywords=”deal of the day sale today offer all”]