ಉಪಚುನಾವಣೆ ಗೆಲ್ಲಲು ನಾನು 30 ಕೋಟಿ ರೂಪಾಯಿ ಖರ್ಚು ಮಾಡಿದ್ದೆ ಎಂಬ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗಿದ್ದು, ವೈರಲ್ ಆದ ಆಡಿಯೋದಲ್ಲಿ ಮಹಿಳೆಯ ಧ್ವನಿ ಕೇಳಿದ್ದು, ಇದು ಜೆಡಿಎಸ್ ಕಾರ್ಯಕರ್ತೆ ಎನ್ನಲಾಗಿದೆ. ಅಲ್ಲದೇ ಈ ಆಡಿಯೋದಲ್ಲಿ ‘ಎಂಎಲ್‌ಸಿ ಚುನಾವಣೆಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೆ. ಐದು ತಿಂಗಳಿಗೆ ಎಂಪಿ ಚುನಾವಣೆಗಾಗಿ 30 ಕೋಟಿ ಖರ್ಚು ಮಾಡಿದ್ದೆ. ಮುಂದಿನ ನಾಗಮಂಗಲ ವಿಧಾನಸಬೆ ಚುನಾವಣೆಗೆ 30 ಕೋಟಿ ಖರ್ಚು ಮಾಡುತ್ತೇನೆ’ ಎಂದು ಆಡಿಯೋದಲ್ಲಿ ಹೇಳಿದ್ದಾರೆ. ಈ ಆಡಿಯೋದಲ್ಲಿ ಸುಮಾರು 37 ನಿಮಿಷ 54 ಸೆಂಕೆಡ್ ಸಂಭಾಷಣೆ ಇದೆ.
ಈ ಆಡಿಯೋದಲ್ಲಿ ‘ನನ್ನದು 8 ಸ್ಕೂಲ್ ಇದೆ. ತಿಂಗಳಿಗೆ 3 ಕೋಟಿ ಸಂಬಳ ಕೊಡುತ್ತೇನೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟೆ ಹಣಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ. ತಮಗೆ ಬೆಂಬಲ ನೀಡಬೇಕು’ ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ನಾಗಮಂಗಲ ಕ್ಷೇತ್ರದ ಕೊಪ್ಪಗೆ ಭೇಟಿ ನೀಡಿದ್ದ ಎಲ್ಆರ್ ಶಿವರಾಮೇಗೌಡ, ಅಲ್ಲಿನ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ಈ ಆಡಿಯೋದ ಮೂಲಕ ಸದ್ಯ ಎಲ್ ಆರ್ ಶಿವರಾಮೇಗೌಡ ಅವರು ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಾಗಮಂಗಲದ ಜೆಡಿಎಸ್ ಶಾಸಕರ ವಿರುದ್ಧವೂ ಆಡಿಯೋದಲ್ಲಿ ಚರ್ಚೆ ಮಾಡಿದ್ದಾರೆ. ‘ನಾನು ಎರಡು ಸಲ ಎಂಎಲ್ಎ ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ತಾತನಂತ ಕೆಲಸ ಮಾಡಬಹುದು. ಸುರೇಶ್ ಗೌಡ ನನಗೆ ಕಳೆದ ಲೋಕಸಭೆ ಟಿಕೆಟ್ ತಪ್ಪಿಸಿದ್ದ. ನಿಖಿಲ್ ಕುಮಾರ್ ಸ್ವಾಮಿ ಚುನಾವಣೆಗೆ ನಿಲ್ಲಿಸಿ ಅವರ ಮನೆಗೂ ಕಂಟಕ ತಂದರು, ನನಗೂ ಕಂಟಕ ತಂದರು. ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ. ನನಗೆ ಬೆಂಬಲಕೊಡಿ’ ಎಂದು ಮಾತನಾಡಿರುವುದು ರೆಕಾರ್ಡ್ ಆಗಿದೆ.
ಇದಿಷ್ಟೇ ಅಲ್ಲದೇ, ಮಾಜಿ ಸಂಸದ ಜಿ ಮಾದೇಗೌಡರ ಬಗ್ಗೆಯೂ ಚರ್ಚೆ ನಡೆದಿದೆ. ‘ಐದು ಬಾರಿ ಕಾಂಗ್ರೆಸ್‌ನಿಂದ ನಿಂತು ಸೋತಿದ್ದೇನೆ. ಎಲ್ಲವೂ ಕಡಿಮೆ ಅಂತರದಿಂದ ಸೋತಿದ್ದು. ಜಿ ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ. ಜಿ. ಮಾದೇಗೌಡರು ಆಗ ಸಂಸದರಾಗಿದ್ದರು. ಅದರಿಂದಲೆ ಜಿ ಮಾದೇಗೌಡರ ವಿರೋಧದಿಂದ ಸೋತೆ’ ಎಂದು ಮಾತನಾಡಿದ್ದಾರೆ. ವಿಶೇಷ ಅಂದ್ರೆ ಈ ಆಡಿಯೋದಲ್ಲಿ ಜೆಡಿಎಸ್ ಕಾರ್ಯಕರ್ತೆ ಎನ್ನಲಾದ ಮಹಿಳೆ ನಾಗಮಂಗಲ ಎಂಎಲ್ಎ ಸುರೇಶ್ ಗೌಡ ಪರವಾಗಿ ಮಾತನಾಡಿದ್ದಾರೆ.
Read more
[wpas_products keywords=”deal of the day sale today offer all”]