‘2017ರಲ್ಲಿ ಭಾರತ-ಇಸ್ರೇಲ್ ನಡುವೆ ಬೃಹತ್ 200 ಕೋಟಿ ಡಾಲರ್ ಮೊತ್ತದ ಒಪ್ಪಂದ ಕುದುರಿದ್ದು, ಅದರ ಕೇಂದ್ರ ಬಿಂದು ಪೆಗಾಸಸ್ ಸ್ಪೈವೇರ್ ಮತ್ತು ಕ್ಷಿಪಣಿ ವ್ಯವಸ್ಥೆ ಖರೀದಿ ಒಡಂಬಡಿಕೆ’ ಎಂದು ಅಮೆರಿಕದ ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿರುವುದೇ ವಿವಾದ ಮತ್ತೊಮ್ಮೆ ಜೀವ ಪಡೆಯಲು ಕಾರಣವಾಗಿದೆ. ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ತಯಾರಿಸಿ ಮಾರಾಟ ಮಾಡಿರುವ ‘ಪೆಗಾಸಸ್’ ಬೇಹುಗಾರಿಕೆ ಸಾಫ್ಟ್‌ವೇರ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಪತ್ರಕರ್ತರು, ಮಾನವಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರ ವಿರುದ್ಧ ಇಸ್ರೇಲ್‌ನ ಈ ಸ್ಪೈವೇರ್ ಅನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಪ್ರಕರಣವು ಕಳೆದ ವರ್ಷ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಸತ್ಯಾಸತ್ಯತೆಯ ತನಿಖೆಗೆ ಸಮಿತಿ ರಚನೆ ಮಾಡಿದೆ. ಈ ಸ್ಪೈವೇರ್ ಅನ್ನು ಕೇಂದ್ರ ಸರಕಾರ ಖರೀದಿಸಿ ದುರ್ಬಳಕೆ ಮಾಡಿರುವುದರ ಸತ್ಯ ಶೋಧ ನಡೆಯುತ್ತಿರುವಾಗಲೇ, ಅಮೆರಿಕದ ಪತ್ರಿಕೆ ವರದಿ ಪ್ರಕಟಿಸಿದ್ದು, ‘ಭಾರತ ಮತ್ತು ಇಸ್ರೇಲ್ ನಡುವೆ ಪೆಗಾಸಸ್ ಖರೀದಿ ಒಪ್ಪಂದ ನಡೆದಿರುವುದು ನಿಜ’ ಎಂದು ತಿಳಿಸಿದೆ. ‘ದಿ ಬೆಟಲ್ ಫಾರ್ ದ ವರ್ಲ್ಡ್ಸ್ ಮೋಸ್ಟ್ ಪವರ್‌ಫುಲ್ ಸೈಬರ್‌ವೆಪನ್’ (ವಿಶ್ವದ ಅತ್ಯಂತ ಶಕ್ತಿಶಾಲಿ ಸೈಬರ್ ಅಸ್ತ್ರಕ್ಕಾಗಿ ಸಮರ) ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿದೆ. ಎನ್‌ಎಸ್‌ಒ ಸುಮಾರು ಒಂದು ದಶಕದಿಂದ ತನ್ನ ಬೇಹುಗಾರಿಕೆ ಸಾಫ್ಟ್‌ವೇರ್ ಅನ್ನು ವಿವಿಧ ದೇಶಗಳಿಗೆ ಮಾರಾಟ ಮಾಡುತ್ತ ಬಂದಿದೆ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ತನ್ನ ಸ್ಪೈವೇರ್ ಮಾಡುತ್ತದೆ ಎಂದು ಪುಸಲಾಯಿಸಿ ಸರಕಾರಗಳ ಬೇಹುಗಾರಿಕಾ ಸೇವಾ ಸಂಸ್ಥೆಗಳಿಗೂ ಅದನ್ನು ಮಾರಾಟ ಮಾಡಲಾಗುತ್ತಿದೆ. ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಯಾವುದಿದ್ದರೂ ಸರಿ, ಸಮರ್ಥವಾಗಿ ಬೇಧಿಸಿ ಮಾಹಿತಿ ಹೆಕ್ಕಿ ತೆಗೆಯುತ್ತದೆ ಎಂದು ಎನ್‌ಎಸ್‌ಒ ತನ್ನ ಸ್ಪೈವೇರ್ ಬಗ್ಗೆ ಹೇಳಿಕೊಂಡಿದೆ ಎಂದು ವರದಿ ವಿವರಿಸಿದೆ.
ಪ್ಯಾಲೆಸ್ತೀನ್ ವಿಚಾರದಲ್ಲಿ ಇಸ್ರೇಲ್ ಪರ ಒಲವು ಹೊಂದಿರುವ ಭಾರತ, ಸದಾ ಸಮತೋಲನ ಕಾಯ್ದುಕೊಳ್ಳುವ ಸರ್ಕಸ್ ಮಾಡುತ್ತ ಬಂದಿದೆ. 2017ರಲ್ಲಿ ಇದೇ ವಿಷಯವನ್ನು ಮುನ್ನೆಲೆಯಲ್ಲಿ ತೋರಿಸಿ ಪ್ರಧಾನಿ ಮೋದಿ ಇಸ್ರೇಲಿಗೆ ಭೇಟಿ ನೀಡಿದ್ದರು. ಅಂದಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಮೋದಿ ಬೀಚ್‌ನಲ್ಲಿ ಬರಿಗಾಲಿನಿಂದ ನಡೆದ್ದು ಸುದ್ದಿಯಾಗಿತ್ತು. ‘ಅದೆಲ್ಲವೂ ಒಪ್ಪಂದದ ಮುಸುಕಿನಲ್ಲಿ ನಡೆದ ವ್ಯವಸ್ಥಿತ ತಂತ್ರಗಾರಿಕೆಯಾಗಿತ್ತು’ ಎಂದು ವರದಿ ತಿಳಿಸಿದೆ. ‘200 ಕೋಟಿ ಡಾಲರ್ ಮೊತ್ತದ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದವೇ ಅಂದು ಇಬ್ಬರು ಗಣ್ಯರ ಭೇಟಿಯ ಒಳಮರ್ಮವಾಗಿತ್ತು. ಈ ಒಪ್ಪಂದದ ನಂತರ 2019ರಲ್ಲಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದ್ದರು. ಇವರ ಕೊಡುಕೊಳ್ಳುವ ವ್ಯವಹಾರದ ಭಾಗವಾಗಿಯೇ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ ಪ್ಯಾಲೆಸ್ತೇನ್ ವಿಷಯ ಪ್ರಸ್ತಾಪವಾದಾಗ ಭಾರತವು ಇಸ್ರೇಲ್ ಪರ ಮತ ಹಾಕಿತ್ತು ಎಂದು ವರದಿ ಉಲ್ಲೇಖ ಮಾಡಿದೆ.
Read more
[wpas_products keywords=”deal of the day sale today offer all”]