ಡಿಸಿಪಿ(ಸಂಚಾರ-ಬೆಂಗಳೂರು ಪಶ್ಚಿಮ) ಕುಲದೀಪ್ ಕುಮಾರ್ ಆರ್. ಜೈನ್ ಅವರು ಹಂಚಿಕೊಂಡಿರುವ ವಿಡಿಯೊ ಕ್ಲಿಪ್‌ನಲ್ಲಿ, ಪೊಲೀಸ್ ಅಕಾರಿಯೊಬ್ಬರು ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ, ಐಎಸ್‌ಐ ಚಿಹ್ನೆ, ಗುಣಮಟ್ಟವಿಲ್ಲದ ಹೆಲ್ಮೆಟ್‌ಗಳನ್ನು ನಾಶಪಡಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಹಲವು ವಾಹನ ಸವಾರರು ವ್ಯಂಗ್ಯವಾಡಿದ್ದಾರೆ. ಇತರೆ ದ್ವಿಚಕ್ರ ವಾಹನ ಸವಾರರ ಪ್ರಾಣದಂತೆ ಪೊಲೀಸರ ಪ್ರಾಣ ಕೂಡ ಅಮೂಲ್ಯವಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ರೀತಿಯ ವಿಮರ್ಶೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಎಲ್ಲ ಸಿಬ್ಬಂದಿಯು ಕಡ್ಡಾಯವಾಗಿ ಐಎಸ್‌ಐ ಗುಣಮಟ್ಟದ ಫುಲ್ ಹೆಲ್ಮೆಟ್‌ಗಳನ್ನು ಧರಿಸುವಂತೆ ಸೂಚಿಸಿದೆ.
‘ಕಾನೂನು ಎಲ್ಲರಿಗೂ ಒಂದೇ. ಹೆಲ್ಮೆಟ್ ನಿಯಮ ಪೊಲೀಸರಿಗೂ ಅನ್ವಯವಾಗುತ್ತದೆ. ಐಎಸ್‌ಐ ಗುಣಮಟ್ಟದ, ಫುಲ್ ಹೆಲ್ಮೆಟ್‌ಗಳನ್ನು ಧರಿಸುವಂತೆ ಈಗಾಗಲೇ ನಾವು ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದೇವೆ. ಇದುವರೆಗೂ ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸಿದ 1,600 ಪೊಲೀಸ್ ಸಿಬ್ಬಂದಿಗೆ ದಂಡ ಕೂಡ ವಿಧಿಸಲಾಗಿದೆ’ ಎಂದು ಪೊಲೀಸ್ ಜಂಟಿ ಆಯುಕ್ತ(ಸಂಚಾರ) ಬಿ.ಆರ್.ರವಿಕಾಂತೇಗೌಡ ತಿಳಿಸಿದರು. ಬಿ.ವಿ.ಕೆ.ಅಯ್ಯಂಗಾರ್ ರಸ್ತೆ, ಶಿವಾಜಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಇತರೆ ಸ್ಥಳಗಳಲ್ಲಿರುವ ಅಧಿಕೃತ ಪೊಲೀಸ್ ಸ್ಟೋರ್‌ಗಳಿಂದ ಪೊಲೀಸರು ಹೆಲ್ಮೆಟ್‌ಗಳನ್ನು ಖರೀದಿಸುತ್ತಾರೆ. ‘ಹೆಲ್ಮೆಟ್ ಅನ್ನು ನಮ್ಮ ಸ್ವಂತ ಖರ್ಚಿನಿಂದ ಖರೀದಿಸಬೇಕಿದೆ. ಪೊಲೀಸ್ ಲಾಂಛನವಿರುವ ಮತ್ತು ಐಎಸ್‌ಐ ಗುರುತು ಹೊಂದಿರುವ ಹಾಫ್ ಹೆಲ್ಮೆಟ್‌ಗೆ 350 ರೂ. ಬೆಲೆ ಇದ್ದು, ಇದೇ ರೀತಿಯ ವೈಶಿಷ್ಟ್ಯ ಹೊಂದಿರುವ ಫುಲ್ ಹೆಲ್ಮೆಟ್‌ಗೆ 800 ರೂ. ಬೆಲೆ ಇದೆ’ ಎಂದು ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಹೇಳಿದರು.
‘ಪೊಲೀಸ್ ಇಲಾಖೆ ಕೇವಲ ಇಂಧನ ಶುಲ್ಕವನ್ನು ಮಾತ್ರ ಪಾವತಿಸುತ್ತದೆ. ದ್ವಿಚಕ್ರ ವಾಹನಗಳಲ್ಲಿ ಗಸ್ತು ತಿರುಗುವ ಪೊಲೀಸ್ ಸಿಬ್ಬಂದಿ ತಮ್ಮ ಖರ್ಚಿನಲ್ಲಿ ಹೆಲ್ಮೆಟ್ ಖರೀದಿಸಬೇಕು’ ಎಂದು ರವಿಕಾಂತೇಗೌಡ ತಿಳಿಸಿದರು. ‘ನಮ್ಮ ಸಿಬ್ಬಂದಿಗೆ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸುವಂತೆ ತಿಳಿಸಲಾಗಿದೆ. ಈ ಕುರಿತು ಸಾರ್ವಜನಿಕ ಅಭಿಯಾನ ಆರಂಭಿಸುವ ಮುನ್ನ ನಮ್ಮ ಇಲಾಖೆಯಲ್ಲಿ ಮೊದಲು ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಡಿಸಿಪಿ(ಸಂಚಾರ-ಬೆಂಗಳೂರು ಪಶ್ಚಿಮ) ಕುಲದೀಪ್ ಕುಮಾರ್ ಜೈನ್ ಹೇಳಿದರು.
ಹೆಲ್ಮೆಟ್ ಧರಿಸಿದವರೇ ಅಪಘಾತಗಳಲ್ಲಿ ಹೆಚ್ಚು ಸಾವು !
ಸಂಚಾರ ಪೊಲೀಸರ ಅಂಕಿ-ಅಂಶದ ಪ್ರಕಾರ, ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದವರು ಮೃತಪಟ್ಟಿರುವುದಕ್ಕಿಂತ ಮೂರು ಪಟ್ಟು ಅಧಿಕ ಸಂಖ್ಯೆಯಲ್ಲಿ ಹೆಲ್ಮೆಟ್ ಧರಿಸಿರುವ ಬೈಕ್ ಚಾಲಕರು ಮತ್ತು ಹಿಂಬದಿ ಸವಾರರು ಮೃತಪಟ್ಟಿದ್ದಾರೆ. ಈ ಸಂಖ್ಯೆ ಹೆಚ್ಚಲು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಮತ್ತು ಹೆಲ್ಮೆಟ್ ಸರಿಯಾಗಿ ಧರಿಸದಿರುವುದೇ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ವರದಿಯ ಪ್ರಕಾರ 2019ರಿಂದ 2021ರವರೆಗೆ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 1,300 ಬೈಕ್ ಚಾಲಕರು ಮತ್ತು ಹಿಂಬದಿ ಸವಾರರು ಮೃತಪಟ್ಟಿದ್ದಾರೆ. ಈ ಪೈಕಿ 947 ಮಂದಿ ಹೆಲ್ಮೆಟ್ ಧರಿಸಿದ್ದರೆ, 353 ಮಂದಿ ಹೆಲ್ಮೆಟ್ ಧರಿಸಿರಲಿಲ್ಲ.
‘ಕಳಪೆ ಹೆಲ್ಮೆಟ್ ಸವಾರರ ಜೀವಕ್ಕೆ ಕುತ್ತು ತರುತ್ತಿರುವ ಹಿನ್ನೆಲೆಯಲ್ಲಿ ನಾವು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳ ವಿರುದ್ಧ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದೇವೆ. ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಬದಲು ಫುಲ್ ಹೆಲ್ಮೆಟ್ ಧರಿಸಬೇಕು. ಸದ್ಯ ಈ ಬಗ್ಗೆ ಬೈಕ್ ಸವಾರರಿಗೆ ಕೇವಲ ಅರಿವು ಮೂಡಿಸಿ, ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವುದನ್ನು ಅರಂಭಿಸುತ್ತೇವೆ. ಕೇವಲ ನಿಯಮ ಪಾಲಿಸುವ ಉದ್ದೇಶದಿಂದ ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸುವುದರಿಂದ ಅಪಘಾತಗಳ ಸಮಯದಲ್ಲಿ ಪ್ರಾಣ ಉಳಿಯುವುದಿಲ್ಲ’ ಎಂದು ರವಿಕಾಂತೇಗೌಡ ವಿವರಿಸಿದರು.
Read more
[wpas_products keywords=”deal of the day sale today offer all”]