Karnataka news paper

ಮಳವಳ್ಳಿಯ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದ ಆಡಳಿತ ವಿವಾದ ಸುಖಾಂತ್ಯ


ಹೈಲೈಟ್ಸ್‌:

  • ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದ ಆಡಳಿತ ವಿವಾದ ಸುಖಾಂತ್ಯ
  • ಮೈಸೂರು ರಾಜವಂಶಸ್ಥರು ಎಂಎಲ್‌ ವರ್ಚಸ್ವಿ ಸಿದ್ಧಲಿಂಗರಾಜೇ ಅರಸು ಮಧ್ಯಪ್ರವೇಶ
  • ದಿ. ಪ್ರಭುದೇವರಾಜೇ ಅರಸು ಅವರ ಮಕ್ಕಳಿಗೆ ಆಡಳಿತದ ಅಧಿಕಾರ

ಮಳವಳ್ಳಿ (ಮಂಡ್ಯ): ಕುಟುಂಬದವರ ಹಕ್ಕು ಬಾಧ್ಯತೆಗಳ ಕಿತ್ತಾಟದಿಂದ ವಿವಾದದ ಸ್ವರೂಪ ಪಡೆದಿದ್ದ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದ ಆಡಳಿತ ವಿಚಾರ ಕೊನೆಗೂ ಮೈಸೂರು ರಾಜವಂಶಸ್ಥರು ಎಂ.ಎಲ್‌. ವರ್ಚಸ್ವಿ ಸಿದ್ಧಲಿಂಗರಾಜೇ ಅರಸು ಅವರ ಮಧ್ಯಪ್ರವೇಶದಿಂದ ಬಗೆಹರಿದಿದೆ.

ತಾಲೂಕಿನ ರಾಜ ಬೊಪ್ಪೇಗೌಡನಪುರ(ಬಿಜಿಪುರ) ಮಠದಲ್ಲಿ ಪವಾಡ ಪುರುಷ ಧರಗೆ ದೊಡ್ಡವರು ಮಂಟೇಸ್ವಾಮಿ ಅವರು ಐಕ್ಯವಾದ ಸ್ಥಳಕ್ಕೆ ಪೂಜೆ ಸಲ್ಲಿಸಲು ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಹಿಂದಿನ ಆಡಳಿತಾಧಿಕಾರಿ ಪ್ರಭುದೇವರಾಜೇ ಅರಸು ನಿಧನದ ನಂತರ ಅವಿಭಾಜ್ಯ ಕುಟುಂಬದಲ್ಲಿ ಕಳೆದ ಒಂದು ವರ್ಷದಿಂದ ಮಠದ ನಿರ್ವಹಣೆ ಹಾಗೂ ಅಧಿಕಾರಕ್ಕಾಗಿ ಇಬ್ಬರು ಸಹೋದರ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಆರಂಭವಾಗಿತ್ತು.

ಇದರಿಂದ ಗ್ರಾಮಸ್ಥರಲ್ಲಿ ವೈಮನಸ್ಸು ಮೂಡಿ ಅಸಮಾಧಾನ ತರಿಸಿತ್ತು. ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿತ್ತು. ಕೆಲವು ದಿನಗಳ ಹಿಂದೆ ಮೈಸೂರಿನ ಇತಿಹಾಸ ತಜ್ಞ ಪ್ರೊ ನಂಜರಾಜೇ ಅರಸು ಅವರು ಮಠಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜತೆ ಚರ್ಚೆ ನಡೆಸಿ ಮಾಹಿತಿ ಪಡೆದರು. ಮಂಟೇಸ್ವಾಮಿ ಮಠದ ಇತಿಹಾಸ ಮತ್ತು ಪರಂಪರೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಕೂಡಲೇ ವರ್ಚಸ್ವಿ ಸಿದ್ಧಲಿಂಗರಾಜೇ ಅರಸು ಅವರು ಮಧ್ಯೆಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಮಂಗಳವಾರ ಕುಟುಂಬದ ಸದಸ್ಯರಾದ ಪ್ರಿಯದರ್ಶನ ಅರಸು, ಭರತ್‌ ಅರಸು, ಸಂಜಯ್‌ ಅರಸು, ವರುಣ್‌ರಾಜೇ ಅರಸು, ಚೇತನ್‌ ರಾಜೇ ಅರಸು, ತಾಲೂಕಿನ ವಿವಿಧ ಮುಖಂಡರು ಹಾಗೂ ಬಿಜಿಪುರ ಗ್ರಾಮದ 13 ಕೋಮಿನ ಮುಖಂಡರ ಜತೆ ಸಭೆ ನಡೆಸಿದ್ದ ವರ್ಚಸ್ವಿ ಸಿದ್ಧಲಿಂಗರಾಜೇ ಅರಸು ದಿ. ಪ್ರಭುದೇವರಾಜೇ ಅರಸು ಅವರು ನಿರ್ವಹಿಸಿಕೊಂಡು ಹೋಗುತ್ತಿದ್ದ ಜವಾಬ್ದಾರಿಗಳನ್ನು ಅವರ ಮಕ್ಕಳಿಗೆ ಹಿಂದಿನ ಸಂಪ್ರದಾಯದಂತೆ ಯಥಾಪ್ರಕಾರ ಮಠದ ಆಡಳಿತ ಕಾರ್ಯಕ್ರಮಗಳು ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಿದ್ದರಿಂದ ಸಮಸ್ಯೆ ಬಗೆಹರಿದಿದೆ.
ಹಿಂದೂ ಧರ್ಮದ ಅಸ್ಮಿತೆಗೆ ಅಗೌರವ ಸೂಚಿಸಲು ಸುದೀರ್ಘ ಪ್ರಯತ್ನ: ಚಕ್ರವರ್ತಿ ಸೂಲಿಬೆಲೆ
ಸತತ ಐದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಾತನಾಡಿದ ದಿ.ಪ್ರಭುದೇವರಾಜೇ ಅರಸು ಪುತ್ರ ಭರತ್‌ರಾಜ್‌ ಅರಸು ಮಠದ ಆಡಳಿತದ ವಿಚಾರದಲ್ಲಿ ಸಾಕಷ್ಟು ನೋವಾಗಿದೆ. ತಮಗೆ ಮತ್ತು ಕುಟುಂಬದ ಸದಸ್ಯರಿಗೆ ಇಲ್ಲಿಯವರೆಗೆ ನಮಗೆ ಯಾವುದೇ ಜವಾಬ್ದಾರಿಯನ್ನು ನೀಡದೆ ನಮ್ಮ ತಾಯಿಯವರಿಗೆ ತೊಂದರೆ ಕೊಡುವ ಪ್ರಯತ್ನ ನಡೆದಿತ್ತು ಎಂದು ಕಣ್ಣೀರು ಹಾಕಿದರು.

ಚಿತ್ರದುರ್ಗದಲ್ಲಿ ಮುರುಘಾ ಶ್ರೀಗಳ ಸಾರಥ್ಯದಲ್ಲಿ ವಿರಕ್ತ ಮಠಾಧೀಶರ ಒಕ್ಕೂಟ ರಚನೆ
ಮಠದ ಹಾಲಿ ಪೀಠಾಧ್ಯಕ್ಷ ಹಾಗೂ ಟ್ರಸ್ಟ್‌ ಅಧ್ಯಕ್ಷ ಜ್ಞಾನನಂದ ಚೆನ್ನರಾಜೇ ಅರಸು ಮಾತನಾಡಿ, ಹಿರಿಯರು ಹಾಗೂ ಸಮಪೀಠವಾದ ಮಳವಳ್ಳಿ ಮಠದ ವರ್ಚಸ್ಸಿ ಸಿದ್ಧಲಿಂಗರಾಜೇ ಅರಸು ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಹಾಗೂ ಪ್ರಕರಣ ಕೋರ್ಟ್‌ನಲ್ಲಿಇದೆ ಎಂದರು. ವಿವಿಧ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಂತಿಮವಾಗಿ ಕುಟುಂಬದ ಆರು ಮಂದಿ ಸದಸ್ಯರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ ಎಂಎಲ್‌ ವರ್ಚಸ್ವಿ ಸಿದ್ದಲಿಂಗರಾಜೇ ಅರಸು ಅವರು ಎಲ್ಲವೂ ಹಿಂದಿನ ಸಂಪ್ರದಾಯದಂತೆ ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಮೈಸೂರಿನ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸು, ಮಳವಳ್ಳಿ ಪಟ್ಟಣದ ನಾಡಗೌಡ ಎಂವಿ ವೆಂಕಟಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎನ್‌.ನಂಜುಂಡಯ್ಯ, ತಾಪಂ ಮಾಜಿ ಸದಸ್ಯ ಪುಟ್ಟಣ್ಣ, ಮುಖಂಡರಾದ ಚಿಂದರಹಳ್ಳಿ ನಾಗೇಂದ್ರ, ಸಾಹಿತಿ ಶಂಕನಪುರ ಮಹದೇವು, ಕನ್ನಡ ಸೇನೆಯ ಮಂಜುನಾಥ್‌, ಜಗದೀಶ್‌, ನಟರಾಜ್‌ ಮಾಳಿಗೆ ಹಾಗೂ ಗ್ರಾಮದ 13 ಕೋಮಿನ ಮುಖಂಡರು ಇದ್ದರು.



Read more