‘ಅವರ ಸ್ಪರ್ಧೆ ಸಾಮಾಜಿಕ ನ್ಯಾಯದ ಕುರಿತಾಗಿ ಇಲ್ಲ. ಯೋಗಿ ಅಥವಾ ಅಖಿಲೇಶ್ ನಡುವೆ ಮಹಾನ್ ಹಿಂದೂ ಯಾರು ಎಂಬುದರ ಕುರಿತು ಇಬ್ಬರೂ ಹಣಾಹಣಿ ನಡೆಸುತ್ತಿದ್ದಾರೆ. ಇಬ್ಬರೂ ಮೋದಿಗಿಂತಲೂ ಅತಿ ದೊಡ್ಡ ಹಿಂದೂ ಆಗಲು ಪೈಪೋಟಿ ನಡೆಸುತ್ತಿದ್ದಾರೆ. ಒಬ್ಬರು ದೇವಸ್ಥಾನದ ಬಗ್ಗೆ ಮಾತನಾಡಿದರೆ, ಇನ್ನೊಬ್ಬರು ಮತ್ತೊಂದು ದೇವಸ್ಥಾನದ ಬಗ್ಗೆ ಮಾತನಾಡುತ್ತಾರೆ’ ಎಂದು ಓವೈಸಿ ಶನಿವಾರ ವಾಗ್ದಾಳಿ ನಡೆಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಅವರು ಟೀಕಾಪ್ರಹಾರ ನಡೆಸಿದರು. ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್‌ಗೆ ಮುಸ್ಲಿಮರ ಮತಗಳು ಮಾತ್ರ ಬೇಕು. ಆದರೆ ಅವರಿಗೆ ಚುನಾವಣಾ ಟಿಕೆಟ್ ನೀಡಲು ಹಿಂಜರಿಯುತ್ತಾರೆ ಎಂದು ಟೀಕಿಸಿದರು. ಅಲ್ಪಸಂಖ್ಯಾತರ ಮತಗಳನ್ನು ಒಡೆಯುವ ಮೂಲಕ ಬಿಜೆಪಿಗೆ ಸಹಾಯ ಮಾಡಲು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಯತ್ನಿಸುತ್ತಿರುವ ಆರೋಪವನ್ನು ಅವರು ನಿರಾಕರಿಸಿದರು.
‘ಜಾತ್ಯತೀತ ಎಂದು ಹೇಳಿಕೊಳ್ಳುವ ಜನರು ಮುಸ್ಲಿಮರು ರತ್ನಗಂಬಳಿ ಹಾಸುವುದನ್ನು ಮತ್ತು ಜಿಂದಾಬಾದ್ ಘೋಷಣೆಗಳನ್ನು ಕೂಗುವುದನ್ನಷ್ಟೇ ಬಯಸಿದ್ದಾರೆ. ನಿಮಗೆ ಟಿಕೆಟ್ ಬೇಕಿದ್ದರೆ, ನೀವು ಅಂಗಲಾಚಬೇಕು. ಇದು ಅವರ ಬೂಟಾಟಿಕೆ ಮತ್ತು ದ್ವಿಮುಖ ನೀತಿ’ ಎಂದು ಆರೋಪಿಸಿದರು.
ಎಐಎಂಐಎಂ ಉತ್ತರ ಪ್ರದೇಶ ಚುನಾವಣೆಗೆ ಮಾಜಿ ಸಚಿವ ಬಾಬು ಸಿಂಗ್ ಕುಶ್ವಾಹ ಅವರ ಜನ್ ಅಧಿಕಾರ್ ಪಾರ್ಟಿ ಮತ್ತು ಅಖಿಲ ಭಾರತ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಂಸ್ಥೆಗಳ ಜತೆಗೆ ಮೈತ್ರಿ ಮಾಡಿಕೊಂಡು ಭಾಗಿದಾರಿ ಪರಿವರ್ತನ್ ಮೋರ್ಚಾ ಸ್ಥಾಪಿಸಿದೆ. ಈ ಮೈತ್ರಿಕೂಟ ಸುಮಾರು 100 ಸೀಟುಗಳಲ್ಲಿ ಸ್ಪರ್ಧಿಸಲಿದೆ ಎಂದು ಓವೈಸಿ ತಿಳಿಸಿದರು.
‘ಮೌಲಾನಾ ಒಬ್ಬರು ಕಾಂಗ್ರೆಸ್ ಸೇರ್ಪಡೆಯಾದರು. ಆದರೆ ಕಾಂಗ್ರೆಸ್‌ನ ಹಿರಿಯ ನಾಯಕಿಯೊಬ್ಬರು ನನಗೆ ಅವರೊಂದಿಗೆ ಮಾಡುವುದೇನೂ ಇಲ್ಲ ಎಂದರು’ ಎಂದು ವಿವಾದಾತ್ಮಕ ನಾಯಕ ಟಿಆರ್ ಖಾನ್ ಅವರಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅಂತರ ಕಾಪಾಡಿಕೊಂಡಿದ್ದನ್ನು ಟೀಕಿಸಿದರು.
‘ಬದೌನ್ ಸಂಸದೆ ಸಂಘಮಿತ್ರ ಮೌರ್ಯ ಈಗಲೂ ಬಿಜೆಪಿಯಲ್ಲಿ ಇದ್ದಾರೆ. ಆದರೆ ಆಕೆಯ ತಂದೆ ಸ್ವಾಮಿ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷದಲ್ಲಿದ್ದಾರೆ. ಇದೆಲ್ಲವನ್ನೂ ನೀವು ನೋಡುತ್ತೀರಾ? ಉತ್ತರ ಪ್ರದೇಶದ ಜನರು ಕುರುಡರಲ್ಲ. ನಿನ್ನೆ ಅಖಿಲೇಶ್ ಯಾದವ್ ಅವರು ಮುಸ್ಲಿಂ ಅಭ್ಯರ್ಥಿಗಳನ್ನು ಕೈಬಿಡುವ ಬಗ್ಗೆ ಮಾತನಾಡಿದರು. ಅವರು ಗಂಗಾ ಜಮುನಿ ತೆಹ್ಜೀಬ್ ಉಲ್ಲೇಖಿಸಿದ್ದರು. ಅಂದರೆ ನೀವು ನಿಮ್ಮ ಪಕ್ಷದ ಅಭ್ಯರ್ಥಿಯನ್ನು ಕೈಬಿಡುತ್ತೀರಿ ಮತ್ತು ಮುಜಫ್ಫರನಗರ ಜಿಲ್ಲೆಯಲ್ಲಿ ಮುಸ್ಲಿಮರಿಗೆ ಒಂದೂ ಸೀಟು ನೀಡುವುದಿಲ್ಲವೇ? ಇದು ದೊಡ್ಡ ಜುಮ್ಲಾ’ ಎಂದು ವಾಗ್ದಾಳಿ ನಡೆಸಿದರು.
Read more
[wpas_products keywords=”deal of the day sale today offer all”]