ಹುಬ್ಬಳ್ಳಿ: ಕಾಂಗ್ರೆಸ್ ಅನ್ನೋದು ಕಿರಿಕ್ ಪಾರ್ಟಿ ಇದ್ದಂತೆ. ಮೇಲಿಂದ ಮೇಲೆ ಸುಳ್ಳುಗಳನ್ನು ಹೇಳಿ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದರು.
ಇಲ್ಲಿನ ಆರ್‌ಎಸ್‌ಎಸ್ ಕಚೇರಿ ಕೇಶವಕುಂಜದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ಕಾಂಗ್ರೆಸ್ ನಾಯಕರು ಯಾವಾಗಲೂ ಕಿರಿಕ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಅವರು ಸುಳ್ಳು ಹೇಳುವುದನ್ನೂ ಚೆನ್ನಾಗಿ ಕಲಿತಿದ್ದಾರೆ. ಬಿಜೆಪಿಯ ಹಲವು ನಾಯಕರು ತಮ್ಮ ಪಕ್ಷ ಸೇರುತ್ತಾರೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಅವರು ಎಷ್ಟೊಂದು ಚೆನ್ನಾಗಿ ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು’ ಎಂದು ಪ್ರಶ್ನಿಸಿದರು.
‘ಸೋಲಿನ ಹತಾಶೆಯಿಂದಾಗಿ ಕಾಂಗ್ರೆಸ್ ನಾಯಕರು ಸುಳ್ಳಿನ ಕತೆ ಕಟ್ಟುತ್ತಿದ್ದಾರೆ. ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಗೋವಾದಲ್ಲಿಯೂ ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರಬೇಕು ಎನ್ನುವ ಹಪಾಹಪಿಯಿಂದಾಗಿ ಹೀಗೆ ಮಾಡುತ್ತಿದ್ದಾರೆ’ ಎಂದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗದ ಕಾರಣಕ್ಕೆ ಆಕ್ರೋಶಗೊಂಡಿರುವ ಸಿ.ಎಂ. ಇಬ್ರಾಹಿಂ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಇಬ್ರಾಹಿಂ ಕಾಂಗ್ರೆಸ್‌ನ ಹಿರಿಯ ನಾಯಕರು . ಅವರಿಗೆ ಪಕ್ಷದಲ್ಲಿ ಎಲ್ಲ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯವಿತ್ತು. ಮುಸ್ಲಿಮರ ಮತಗಳನ್ನು ಪಡೆಯುವ ಕಾಂಗ್ರೆಸ್ ಈಗ ಅವರ ಬೆನ್ನಿಗೇ ಚೂರಿ ಹಾಕಿದೆ. ರಾಜ್ಯದಲ್ಲಿರುವ ಶೇ 18ರಷ್ಟು ಮುಸ್ಲಿಮರ ಮತಗಳನ್ನು ಪಡೆದು ಅವರಿಗೆ ಸರಿಯಾಗಿ ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ಇಬ್ರಾಹಿಂ ಅವರು ಈಗ ಎತ್ತಿರುವ ಪ್ರಶ್ನೆಗಳಿಗೆ ಅಹಿಂದ ನಾಯಕ ಎನಿಸಿಕೊಂಡ ಸಿದ್ದರಾಮಯ್ಯ ಉತ್ತರ ಕೊಡಲಿ’ ಎಂದು ಸವಾಲು ಹಾಕಿದರು.
Read more from source
[wpas_products keywords=”deal of the day sale today kitchen”]