ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು 2020 ಹಾಗೂ 2021ನೇ ಸಾಲಿನ ‘ಎಚ್.ಎಸ್. ಪಾರ್ವತಿ ಪ್ರಶಸ್ತಿ’ ಘೋಷಿಸಿದ್ದು, ಲೇಖಕಿಯರಾದ ಎಸ್.ವಿ. ಪ್ರಭಾವತಿ ಹಾಗೂ ವೈ.ಸಿ. ಭಾನುಮತಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಇದೇ 20ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ನರಸಿಂಹರಾಜ ಕಾಲೊನಿಯ ಬಿ.ಎಂ.ಶ್ರೀ. ಪ್ರತಿಷ್ಠಾನದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಲೇಖಕಿ ವಿಜಯಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕವಯತ್ರಿ ಎಚ್.ಎಲ್. ಪುಷ್ಪಾ ಅವರು ಅಭಿನಂದನಾ ನುಡಿ ನುಡಿಯಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
