ಕೊಪ್ಪಳ: ಮಾವಿನ ಗಿಡದ ರೆಂಬೆ, ಕೊಂಬೆಗಳಲ್ಲಿ ಹೂವು ಬಿಟ್ಟಿದ್ದು ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಹುಟ್ಟಿಸಿದೆ. ಮಾವು ಬೆಳೆಗಾರರ ಮೊಗದಲ್ಲಿ ಹೊಸ ಆಶಾಭಾವನೆ ಹುಟ್ಟಿಸಿದೆ.
ಮಾವು ರೈತರ ಆರೋಗ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು, ಸಿಹಿ ನೀಡುವ ಮಾವು ಆರೋಗ್ಯದಾಯಕ, ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂಬ ಆರೋಗ್ಯ ಇಲಾಖೆಯ ಮಾತು ರೈತಾಪಿ ವರ್ಗದಲ್ಲಿ ಭರವಸೆ ಹುಟ್ಟಿಸಿದ್ದು, ಅಧಿಕ ಆದಾಯ ಪಡೆಯಬಹುದು ಎಂಬ ಆಶಾವಾದದ ನೆಲೆಯಲ್ಲಿ ರಾಜ್ಯಾದ್ಯಂತ ಮಾವು ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿಯೂ ಇತ್ತೀಚೆಗೆ ಹೆಚ್ಚಾಗಿ ಬೆಳೆಯುವ ವಾಡಿಕೆ ಇದೆ.
ಎಲ್ಲೆಲ್ಲಿ ಮಾವು?
ಜಿಲ್ಲೆಯ ಗಂಗಾವತಿ, ಕಾರಟಗಿ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಸೇರಿದಂತೆ ಇತರೆಡೆ ಈ ಬಾರಿ ನಿರೀಕ್ಷೆ ಮೀರಿ ಮಾವಿನ ಗಿಡಗಳಲ್ಲಿ ಹೂವು ಬಿಟ್ಟಿದೆ. ಹೂವಿನಗೊಂಚಲು ಮರಗಳ ತುಂಬಿ ಕೈಬೀಸಿ ಕರೆಯುವಂತಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆಯೂ ಹೆಚ್ಚಿಸಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಯೋಗ್ಯ ಬೆಲೆ ಸಿಕ್ಕರೆ ರೈತರು ಭರ್ಜರಿ ಆದಾಯ ಸಿಗಲಿದೆ ಎಂಬ ಬಲವಾದ ನಂಬಿಕೆ ಬಂದಿದೆ.
ಯಾವ್ಯಾವ ಮಾದರಿ ಬೆಳೆ
ಜಿಲ್ಲಾದ್ಯಂತ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೇಸರ್, ಮಲ್ಲಿಕಾ, ಪೆರಿಕ್ವೀನ್, ಅಲ್ಪಾನ್ಸ್, ಮಲ್ಲಿಕಾ, ತೋತಾಪುರಿ, ಬಾದಾಮಿ ಸೇರಿದಂತೆ ಇತರೆ ತಳಿಯ ಮಾವು ಬೆಳೆಯಲಾಗಿದ್ದು, ಶೇ.80ರಷ್ಟು ಮಾವಿನ ಗಿಡಗಳು ಹೂವಿನಿಂದ ಮೈದುಂಬಿಕೊಂಡಿವೆ. ಕೇಸರ್ ತಳಿಯ ಮಾವಿನ ಹಣ್ಣಿಗೆ ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿದ್ದು, ಈ ಬಾರಿ ನಿರೀಕ್ಷೆಗೂ ಮೀರಿ ಇಳುವರಿ ಬರುವ ಮುನ್ಸೂಚನೆ ಇದೆ. ಒಂದು ವೇಳೆ ಅಕಾಲಿಕ ಮಳೆ-ಗಾಳಿಯಾದರೆ ಮಾವಿನ ಗಿಡಗಳಲ್ಲಿ ಕಾಯಿಗಳು ನೆಲಕ್ಕುರುಳುವುದರಿಂದ ಇಳುವರಿಯಲ್ಲಿ ಸ್ಪಲ್ಪ ಮಟ್ಟದ ಏರಿಳಿತವಾಗುವ ಸಾಧ್ಯತೆ ಇದೆ.
ಕಾಲ ಕಾಲಕ್ಕೆ ನಿರ್ವಹಣೆ
ಕೇಸರ್, ಮಲ್ಲಿಕಾ ಸೇರಿದಂತೆ ನಾನಾ ತಳಿಯ ಮಾವಿನ ಗಿಡ ನೆಟ್ಟು ಕಾಲ-ಕಾಲಕ್ಕೆ ನೀರು, ಗೊಬ್ಬರ, ಹಿಂಡಿ ಹಾಕುವ ಮೂಲಕ ನಿರ್ವಹಣೆ ಮಾಡಿದ್ದರಿಂದ ಈ ಬಾರಿ ಎಂಟನೇ ತಿಂಗಳಲ್ಲೇ ಮಾವಿನ ಗಿಡಗಳು ಹೂವಿನಿಂದ ಕಂಗೊಳಿಸುತ್ತಿದ್ದು, ದಾರಿಹೋಕರ ಗಮನ ಸೆಳೆಯುವಂತಿವೆ.
ಮಾವು ಮೇಳದ ನಿರೀಕ್ಷೆ
ಕೊರೊನಾ ಭೀತಿಯಿಂದ ಕಳೆದೆರಡು ವರ್ಷದಿಂದ ಮಾವು ಮೇಳ ರದ್ದುಪಡಿಸಲಾಗಿತ್ತು. ಇದರಿಂದ ಜಿಲ್ಲೆಯ ಮಾವು ಬೆಳೆಗಾರರು ತಮ್ಮ ಉತ್ಪನ್ನ ಮಾರಲು ಸಾಕಷ್ಟು ಸಮಸ್ಯೆ ಎದುರಿಸುವ ಜತೆಗೆ ನಷ್ಟ ಅನುಭವಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ವಾಯು ಸಾರಿಗೆಗೆ ಅವಕಾಶ ಇಲ್ಲವಾದ್ದರಿಂದ ವಿದೇಶಕ್ಕೂ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ಇಳಿಮುಖಗೊಂಡರೆ ಮಾವು ಮೇಳ ಆಯೋಜಿಸಬೇಕು ಎಂಬುದು ಮಾವು ಬೆಳೆಗಾರರ ಒತ್ತಾಸೆಯಾಗಿದೆ.
ನವೆಂಬರ್-ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆ ಹಾಗೂ ವಾತಾವರಣದ ಏರುಪೇರಿನಿಂದ ಈ ಬಾರಿ ಮಾವಿನ ಗಿಡದಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಹೂವು ಬಿಟ್ಟಿದ್ದು, ಇಳುವರಿ ಕುಂಠಿತಗೊಳ್ಳುವ ಆತಂಕ ಎದುರಾಗಿದೆ. ಜಿಲ್ಲೆಯ ಕುಷ್ಟಗಿ, ಕೊಪ್ಪಳ,ಗಂಗಾವತಿ ಭಾಗದಲ್ಲಿ ಮಾವಿನ ಗಿಡಗಳ ಮೈತುಂಬಾ ಹೂವು ಬಿಟ್ಟಿವೆ. ನಮ್ಮಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ.
ಶಿವಣ್ಣ ಕರಡಿ, ಮಾವು ಬೆಳೆಗಾರರು, ಕೂಕನಪಳ್ಳಿ
ಜಿಲ್ಲೆಯಲ್ಲಿ ಅಧಿಕವಾಗಿ ಬೆಳೆಯುವ ಕೇಸರ್ ತಳಿಯ ಮಾವಿನ ಹಣ್ಣಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ ಬೇಡಿಕೆ ಇದೆ. ಈ ಬಾರಿ ಮಾವು ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ.
ಕೃಷ್ಣ ಉಕ್ಕುಂದ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೊಪ್ಪಳ
Read more
[wpas_products keywords=”deal of the day sale today offer all”]