ಹೈಲೈಟ್ಸ್:
- ಹಳೆಗೇಟು ತಲವಾರು ದಾಳಿ ಪ್ರಕರಣ ಹಿನ್ನೆಲೆಯಲ್ಲಿ ಮೂವರು ಪಿಎಫ್‌ಐ ಮುಖಂಡರು ಖಾಕಿ ವಶಕ್ಕೆ
- ವಶಕ್ಕೆ ಪಡೆದ ಆರೋಪಿಗಳ ಬಿಡುಗಡೆಗೆ ಪಿಎಫ್‌ಐ ಕಾರ್ಯಕರ್ತರ ಪ್ರತಿಭಟನೆ
- ರಸ್ತೆಯಲ್ಲೇ ನಮಾಜ್ ಮಾಡಿ ಪೊಲೀಸರ ವಿರುದ್ಧ ಆಕ್ರೋಶ
ಸೂರ್ಯಾಸ್ತಮಾನದ ಬಳಿಕ ವಶಕ್ಕೆ ಪಡೆದುಕೊಂಡವರನ್ನು ಬಿಡುಗಡೆಗೊಳಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು. ರಾತ್ರಿ ವೇಳೆ ಇನ್ನೂ ಇಬ್ಬರು ಆರೋಪಿಗಳನ್ನು ಬಿಡುಗಡೆಗೊಳಿಸಲು ಆಗ್ರಹಿಸಿ ಜನ ಜಮಾಹಿಸಿದರು. ಈ ವೇಳೆ, ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ಮಂಗಳವಾರ ರಾತ್ರಿಯಿಂದ ಈ ಪ್ರದೇಶದಲ್ಲಿ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರು ಲಾಠಿ ಚಾರ್ಜ್ ನಡೆಸಿದ ಸಂದರ್ಭದಲ್ಲಿ ಹತ್ತಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪಿಎಫ್‌ಐನ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಎಸ್‌ಡಿಪಿಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷ ಝಕಾರಿಯಾ ಕೊಡಿಪ್ಪಾಡಿ ಹಾಗೂ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಾಫ ಲತೀಫಿ ಅವರನ್ನು ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು.
ಸುದ್ದಿ ತಿಳಿದು ಠಾಣೆಯ ಮುಂದೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ‍್ಯಕರ್ತರು ಬೆಳಗ್ಗೆಯೇ ಜಮಾಯಿಸಿದರು. ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ‍್ಯಕರ್ತರು ಠಾಣೆಯ ಎದುರಿನ ರಸ್ತೆಗೆ ಅಡ್ಡವಾಗಿ ನಿಂತುಕೊಂಡು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಮಧ್ಯಾಹ್ನದ ಹೊತ್ತಿಗೆ ಉಪ್ಪಿನಂಗಡಿ ಠಾಣೆ ಉಪನಿರೀಕ್ಷಕ ಕುಮಾರ್ ಕಾಂಬ್ಳೆ ಅವರು, ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ರೀತಿ ನೋಟಿಸ್ ಜಾರಿಗೊಳಿಸಿ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ. ಈಗ ನೀವು ಸೇರಿರುವುದು ಅಕ್ರಮ ಕೂಟ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪೊಲೀಸ್ ಕರ್ತವ್ಯಕ್ಕೂ ನೀವು ಅಡ್ಡಿ ಪಡಿಸುತ್ತಿದ್ದೀರಿ. ಕೋವಿಡ್ ನಿಯಮಾವಳಿಯೂ ಇಲ್ಲಿ ಉಲ್ಲಂಘನೆಯಾಗುತ್ತಿದೆ. ಎಲ್ಲರೂ ಇಲ್ಲಿಂದ ತೆರಳಬೇಕೆಂದು ಧ್ವನಿವರ್ಧಕದ ಮೂಲಕ ಮನವಿ ಮಾಡಿ, ಎಚ್ಚರಿಕೆ ನೀಡಿದರು. ಆ ಬಳಿಕ ರಸ್ತೆ ಬಿಟ್ಟು ಕದಲಿದ ಪ್ರತಿಭಟನಕಾರರು, ಕೆಲ ಕಾಲ ಅಲ್ಲಿದ್ದು, ಬಳಿಕ ಸಮೀಪದಲ್ಲಿರುವ ಮಸೀದಿಯತ್ತ ತೆರಳಿದರು.
ಮಾತುಕತೆಗೆ ಕರೆದರು: ಸಂಜೆಯ ಬಳಿಕ ಡಿವೈಎಸ್ಪಿ ಡಾ. ಗಾನಾ ಕುಮಾರಿ ಸ್ಥಳಕ್ಕಾಗಮಿಸಿದ್ದು, ಈ ವೇಳೆ ಪ್ರತಿಭಟನಾಕಾರರ ಆಕ್ರೋಶವೂ ಹೆಚ್ಚಾಯ್ತು. ನಾಲ್ಕೈದು ಮುಖಂಡರು ಮಾತ್ರ ಠಾಣೆಯೊಳಗೆ ಮಾತುಕತೆಗೆ ಬನ್ನಿ. ಉಳಿದವರನ್ನು ಇಲ್ಲಿಂದ ಕಳುಹಿಸಿ. ಹಾಗಾದರೆ ಮಾತ್ರ ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಲಾಗುವುದು ಎಂದರು. ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸುತ್ತಿದ್ದಂತೆಯೇ ತಾಲೂಕು ತಹಸೀಲ್ದಾರ್ ಟಿ. ರಮೇಶ್ ಬಾಬು ಅವರು ಕೂಡಾ ಉಪ್ಪಿನಂಗಡಿ ಠಾಣೆಗೆ ಆಗಮಿಸಿದರು.
ಒಬ್ಬನ ಬಿಡುಗಡೆ: ಪಿಎಫ್‌ಐ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಅವರನ್ನು ಬಿಡುಗಡೆಗೊಳಿಸಿದರು. ಆದ್ರೆ, ಉಳಿದಿಬ್ಬರನ್ನೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ರಾತ್ರಿ ವೇಳೆಗೆ ಕಾರ್ಯಕರ್ತರು ಜಮಾಯಿಸಿದರು. ಹೀಗಾಗಿ, ರಾಜ್ಯ ಹಾಗೂ ದ.ಕ. ಜಿಲ್ಲಾ ಮೀಸಲು ಪೊಲೀಸ್ ಪಡೆಯ ತುಕಡಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.