Karnataka news paper

ಸಾರ್ವಜನಿಕ ಶೌಚಾಲಯ ಎಲ್ಲಿ ನಿರ್ಮಿಸಬೇಕೆಂದು ಕೋರ್ಟ್‌ ನಿರ್ಧರಿಸಲು ಸಾಧ್ಯವಿಲ್ಲ: ಹೈಕೋರ್ಟ್‌


ಹೈಲೈಟ್ಸ್‌:

  • ಸದಾಶಿವನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಪ್ರಶ್ನಿಸಿ ಅರ್ಜಿ ಸಲ್ಲಿಕೆ
  • ಅರ್ಜಿ ಇತ್ಯರ್ಥ ಪಡಿಸಿದ ಹೈಕೋರ್ಟ್ ವಿಭಾಗೀಯ ಪೀಠ
  • ಆರ್‌. ಎಂ. ವಿ ಎಕ್ಸಟೆನ್ಷನ್‌ 11ನೇ ಕ್ರಾಸ್‌ನಲ್ಲಿ ಬಿಬಿಎಂಪಿ ವತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ

ಬೆಂಗಳೂರು: ಸಾರ್ವಜನಿಕ ಶೌಚಾಲಯನ್ನು ಎಲ್ಲಿ ಮತ್ತು ಹೇಗೆ ನಿರ್ಮಿಸಬೇಕೆಂಬುದನ್ನು ಕೋರ್ಟ್‌ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಸದಾಶಿವನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಪಡಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರಿದ್ದ ವಿಭಾಗೀಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆಂಗಳೂರಿನ ಸದಾ ಶಿವ ನಗರದ ಆರ್‌. ಎಂ. ವಿ ಎಕ್ಸಟೆನ್ಷನ್‌ 11ನೇ ಕ್ರಾಸ್‌ನಲ್ಲಿ ಬಿಬಿಎಂಪಿ ವತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ ಪ್ರಶ್ನಿಸಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಶೌಚಾಲಯ ನಿರ್ಮಿಸಿದರೆ ಸ್ಥಳದಲ್ಲಿ ಅನಗತ್ಯ ಕಿರಿಕಿರಿ ಉಂಟಾಗಲಿದೆ ಎಂದರು.

ಇದಕ್ಕೆ ನ್ಯಾಯಪೀಠ, ‘ಈ ಮೊದಲೂ ಅಲ್ಲಿ ಶೌಚಾಲಯವಿತ್ತಲ್ಲವೇ..? ಈಗ ಅದೇ ಜಾಗದಲ್ಲಿ ಹೊಸದಾಗಿ ನಿರ್ಮಿಸಿದರೆ ಸಮಸ್ಯೆ ಹೇಗಾಗುತ್ತದೆ’ ಎಂದು ಪ್ರಶ್ನಿಸಿತು.

ಆಗ ವಕೀಲರು ಉತ್ತರಿಸಿ, ಮೊದಲಿದ್ದ ಶೌಚಾಲಯದ ಪ್ರವೇಶ ಬಾಗಿಲು ಅಲ್ಲಿನ ಪಾರ್ಕ್ ಒಳ ಭಾಗಕ್ಕೆ ಇತ್ತು. ಪಾರ್ಕ್‌ಗೆ ಬರುವವರಷ್ಟೇ ಅದನ್ನು ಬಳಸುತ್ತಿದ್ದರು. ಆದ್ದರಿಂದ ಶೌಚಾಲಯದ ಬಾಗಿಲನ್ನು ಪಾರ್ಕ್ ಒಳಕ್ಕೆ ಇರಿಸಬೇಕು. ರಸ್ತೆ ಕಡೆಗೆ ಇರಿಸಬಾರದು ಎಂದರು.

ಈ ವೇಳೆ ನ್ಯಾಯಪೀಠವು, ಸಾರ್ವಜನಿಕ ಶೌಚಾಲಯವನ್ನು ನಿರ್ದಿಷ್ಟ ಜನರಿಗೆ ಸೀಮಿತಗೊಳಿಸಲಾಗದು ಎಂದಿತು. ಮುಖ್ಯವಾಗಿ ಸಾರ್ವಜನಿಕ ಶೌಚಾಲಯವನ್ನು ಯಾವ ಜಾಗದಲ್ಲಿ, ಹೇಗೆ ನಿರ್ಮಿಸಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಾಗದು. ಆ ಕೆಲಸವನ್ನು ಬಿಬಿಎಂಪಿ ಮಾಡಲಿದೆ ಎಂದು ಹೇಳಿತು.

ಶಾಲೆಗಳಲ್ಲಿ ಕಾಣದ ಸ್ಯಾನಿಟೈಸೇಷನ್‌, ಶುಚಿತ್ವ: ಕರ್ನಾಟಕದ ಕೆಲ ಶಾಲೆಗಳಲ್ಲಿ ಸಮಸ್ಯೆ ತೀವ್ರ
ಸದಾ ಶಿವ ನಗರದ ಆರ್‌. ಎಂ. ವಿ ಎಕ್ಸಟೆನ್ಷನ್‌ 11ನೇ ಕ್ರಾಸ್‌ ರಸ್ತೆ ಬದಿಯಲ್ಲಿ ಬಿಬಿಎಂಪಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುತ್ತಿರುವುದನ್ನು ಹಾಗೂ ಘನ ತ್ಯಾಜ್ಯ ವಿಂಗಡಣಾ ಕೇಂದ್ರವನ್ನು ನಿರ್ಮಿಸಿರುವುದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿಗಳಾದ ಬಿ. ಅರುಣಾ ರೆಡ್ಡಿ, ಅನುರಾಧಾ ಘೋಷ್‌, ಸುನಿಲ್‌ ಗೋಕಾಕ್‌, ಡಾ. ಎಂ. ಎಚ್‌. ಕೋರಿ, ಜಿ. ವಿ. ದಶರಥಿ, ಬಾಂತ್‌ ಪೊದ್ದಾರ್‌ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕಳೆದ ಆಗಸ್ಟ್ 9 ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಅರ್ಜಿ ಮತ್ತು ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದರೆ ಎಲ್ಲಿಯೂ ಅಕ್ರಮ ಕಾಣುತ್ತಿಲ್ಲ. ತ್ಯಾಜ್ಯ ವಿಂಗಡಣೆ ಪಾಯಿಂಟ್‌ ಇರುವುದೇ ಜನರ ಉಪಯೋಗಕ್ಕಾಗಿ. ಆದರೆ, ಅರ್ಜಿದಾರರ ನಡೆ ಗಮನಿಸಿದರೆ, ಈ ಕೇಂದ್ರವನ್ನು ತಮ್ಮ ಮನೆಯ ಬದಲಿಗೆ ಮತ್ತೊಬ್ಬರ ಮನೆ ಮುಂದೆ ನಿರ್ಮಿಸಲಿ ಎಂಬಂತಿದೆ. ಇನ್ನು ಸಾರ್ವಜನಿಕ ಶೌಚಾಲಯವನ್ನು ಎಲ್ಲಿ ನಿರ್ಮಾಣ ಮಾಡಬೇಕೆಂದು ಕೋರ್ಟ್‌ ನಿರ್ಧರಿಸಲಾಗದು ಎಂದಿತು.

ದೇಶದ ಶೇ 26ರಷ್ಟು ಕೋರ್ಟ್‌ಗಳಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲ!: ಸಿಜೆಐ ರಮಣ ವಿಷಾದ



Read more