ಮೈಸೂರು: ಹತ್ತು ಸಾವಿರ ಕ್ಯೂಬಿಕ್ ಮೀಟರ್ ಹೂಳು ತೆರವು, ಸಾವಿರ ಕೋಟಿ ಲೀ. ನೀರು ಶೇಖರಣೆಗೆ ವ್ಯವಸ್ಥೆ, ಕೆರೆ ಹೂಳನ್ನು ಬರಡು ಕೃಷಿ ಭೂಮಿಗೆ ಬಳಕೆ… ಈ ಮೂರು ಘನ ಉದ್ದೇಶಗಳಿಟ್ಟು ಕೊಂಡು ಮೈಸೂರು ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ಆರಂಭವಾಗಿದೆ. 2500ಕ್ಕೂ ಹೆಚ್ಚು ಕೆರೆಗಳಿರುವ ಮೈಸೂರು ಜಿಲ್ಲೆಯಲ್ಲಿ ಒಂದು ಸಾವಿರ ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಯಾವುದೇ ಸರಕಾರದ ಅನುದಾನಕ್ಕೆ ಕಾಯದೇ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ರೈತರೇ ಆರಂಭಿಸಿದ್ದಾರೆ.
ಕೆರೆ ಹೂಳೆತ್ತುವ ‘ನಮ್ಮ ಜಲಭದ್ರತೆ ಯೋಜನೆ’ಯನ್ನು ಅನುಷ್ಠಾನಗೊಳಿಸುವ ಮೂಲಕ ಊರಿಗೆ ಜಲ ಭದ್ರತೆ ಕಲ್ಪಿಸುವುದರೊಂದಿಗೆ ಬರಡು ಭೂಮಿಯಲ್ಲಿ ಬಂಗಾರ ಬೆಳೆಯುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಈ ಯೋಜನೆಯ ಸಾಕಾರಕ್ಕೆ 30 ಕೋಟಿ ರೂ. ಅಗತ್ಯವಾಗಿದ್ದು, ಸ್ವಯಂ ಸೇವಾ ಸಂಸ್ಥೆಗಳ ಪ್ರಯತ್ನದ ಫಲವಾಗಿ ಏಷಿಯನ್ ಪೇಂಟ್ಸ್‌ನ ಸಿಎಸ್‌ಆರ್ ಅನುದಾನದ ನೆರವು ನೀಡಿದ್ದು, ರೈತರೂ ವಂತಿಗೆ ನೀಡಿರುವುದು ವಿಶೇಷವಾಗಿದೆ.
ಐಐಟಿ ಫಾರ್ ಐಐಟಿ ಸಂಸ್ಥೆಯು ನೆರೆಯ ಮಹಾರಾಷ್ಟ್ರದ ಖಂಡೇಲಾ ಮತ್ತು ಕರ್ನಾಟಕದ ಕೋಲಾರದಲ್ಲಿ ಈ ಯೋಜನೆಯನ್ನು ಖಾಸಗಿ ಸಂಸ್ಥೆಗಳ ನೆರವಿನಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸಿತ್ತು. ಇದೇ ಮಾದರಿಯಲ್ಲಿ ಮೈಸೂರಿನಲ್ಲಿಯೂ ಯೋಜನೆ ರೂಪಿಸಿದ ಐಐಟಿ ಫಾರ್ ಐಐಟಿ ಸಂಸ್ಥೆಯ ಸದಸ್ಯರು, ಕ್ರೆಡಿಟ್-ಐ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ.
ಕ್ರೆಡಿಟ್-ಐ ಸಂಸ್ಥೆಯ ಡಾ.ಎಂ.ಪಿ.ವರ್ಷ ಅವರು, ಏಳು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸೇರಿ ಒಕ್ಕೂಟ ರಚಿಸಿಕೊಂಡು, ಸಾವಿರ ಕೆರೆಗಳಿಗೆ ಜಲ ಭದ್ರತೆ ಒದಗಿಸುವ ಯೋಜನೆಯನ್ನು ಆರಂಭಿಸಿದ್ದಾರೆ. ತಾಂತ್ರಿಕ ನೆರವನ್ನು ಐಐಟಿ ಫಾರ್ ಐಐಟಿ ಸಂಸ್ಥೆ ನೀಡುತ್ತಿದೆ. ಮೊದಲ ಹಂತವಾಗಿ ಮೈಸೂರು ಮತ್ತು ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿನ 90 ಕೆರೆಗಳನ್ನು ಗುರುತಿಸಲಾಗಿ 2.88 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ, ಮಳೆಯಿಂದಾಗಿ ಮೂರು ತಿಂಗಳು ತಡವಾಗಿ ಆರಂಭಗೊಂಡಿದ್ದರಿಂದ ಈಗ ಕೇವಲ 40 ಕೆರೆಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಹೂಳೆತ್ತುವ ಕಾರ್ಯ ಆರಂಭವಾಗಿದೆ.
ಅದಕ್ಕಾಗಿ 1.28 ಕೋಟಿ ರೂ.ಸಿಎಸ್‌ಆರ್ ಅನುದಾನ ಬಳಕೆಯಾಗುತ್ತಿದೆ. ಕಳೆದ 15 ದಿನಗಳಿಂದ ಮೈಸೂರು ತಾಲೂಕಿನ ಗೋಪಾಲಪುರ ಗ್ರಾಪಂನ ಅನಗನಹಳ್ಳಿಯ ಹೊನ್ನಯ್ಯನ ಕಟ್ಟೆ ಕೆರೆ, ನಂಜನಗೂಡಿನ ಹಗಿನವಾಳು ಗ್ರಾಪಂನ ಅಂಬ್ಲೆ ಹೊಸಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಮಳೆಗಾಲ ಆರಂಭವಾಗುವ ಹೊತ್ತಿಗೆ ಎರಡು ತಾಲೂಕು ವ್ಯಾಪ್ತಿಯಲ್ಲಿನ 200ಕ್ಕೂ ಹೆಚ್ಚು ಕೆರೆಗಳಿಗೆ ಜಲ ಭದ್ರತೆ ಕಲ್ಪಿಸುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ಭರದಿಂದ ಕಾರ್ಯ ಸಾಗುತ್ತಿದೆ.
ರೈತರ ಪಾಲು
ಕೆರೆಗಳಿಂದ ಹೂಳೆತ್ತುವ ಕೆಲಸವನ್ನು ಜೆಸಿಬಿ ಯಂತ್ರಗಳ ಮೂಲಕ ಮಾಡುತ್ತಿದ್ದು, ಹೂಳನ್ನು ರೈತರ ಜಮೀನು ಗಳಿಗೆ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಟ್ರ್ಯಾಕ್ಟರ್‌ನಲ್ಲಿ ಪ್ರತಿಲೋಡ್‌ಗೆ 30 ರೂ. ಶುಲ್ಕವನ್ನು ಸಂಗ್ರಹಿಸಿ, ಹೂಳೆತ್ತುವ ಕಾರ್ಯದ ವೆಚ್ಚಕ್ಕೆ ನೀಡುತ್ತಿದ್ದಾರೆ. ಈ ಮೂಲಕ ಕೆರೆ ಅಭಿವೃದ್ಧಿಗೆ ತಮ್ಮ ಪಾಲನ್ನು ನೀಡುತ್ತಿದ್ದಾರೆ.
ಉಳಿದ ತಾಲೂಕಿಗೂ ವಿಸ್ತರಣೆ
ಮೈಸೂರು ಜಿಲ್ಲೆಯ ಈ ಎರಡು ತಾಲೂಕು ಗಳಲ್ಲಿನ ಕೆರೆಗಳ ಅಭಿವೃದ್ಧಿ ಬಳಿಕ ಉಳಿದ ತಿ.ನರಸೀಪುರ, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲೂಕುಗಳಿಗೆ ನಮ್ಮ ಜಲ ಭದ್ರತೆ ಯೋಜನೆ ವಿಸ್ತರಣೆಯಾಗಲಿದೆ. ಒಂದು ಸಾವಿರ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ನಡೆದ ಬಳಿಕ ಯೋಜನೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಯೋಜನೆಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಕ್ರೆಡಿಟ್-ಐ ಸಂಸ್ಥೆಯ ಡಾ.ಎಂ.ಪಿ.ವರ್ಷ. ಕೈ ಜೋಡಿಸಿರುವ ಸಂಘ-ಸಂಸ್ಥೆಗಳು ಕ್ರೆಡಿಟ್-ಐ ಸಂಸ್ಥೆ, ಐಐಟಿ ಫಾರ್ ಐಐಟಿ, ಕಾರ್ಡೋ, ಮಾನುಷಿ ಫೌಂಡೇಷನ್, ವಿಶ್ವ ಮಾನವ ಟ್ರಸ್ಟ್, ದಿಶಾ ಫೌಂಡೇಷನ್, ನವೋದಯ ಫೌಂಡೇಷನ್, ಗಾರ್ಡ್ ಸಂಸ್ಥೆ.
Read more
[wpas_products keywords=”deal of the day sale today offer all”]