ಸುತ್ತೋಲೆ ಹೊರಡಿಸಿದ ದಿನದಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡದಿರುವುದರ ವಿರುದ್ಧ ಗ್ರಾಹಕರ ಪರವಾಗಿ ಏಕಸದಸ್ಯಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಬ್ಯಾಂಕ್ ಮೇಲ್ಮನವಿಯನ್ನು ವಜಾಗೊಳಿಸಿರುವ ವಿಭಾಗೀಯ ಪೀಠ “ಈ ಪ್ರಕರಣದಲ್ಲಿ ಬ್ಯಾಂಕ್‌ನ ನಿಲುವು ತೃಪ್ತಿಕರವಾಗಿಲ್ಲ. ಬಡ್ಡಿ ದರ ಕಡಿತದ ಸುತ್ತೋಲೆ ಬ್ಯಾಂಕ್ ನೋಟಿಸ್ ಬೋರ್ಡ್‌ನಲ್ಲಿ ಹಾಕಿದರೆ ಅದು ವ್ಯಾಪಕವಾಗಿ ಪ್ರಚಾರವಾಗುವುದಿಲ್ಲ. ಅದು ಎಷ್ಟೋ ಗ್ರಾಹಕರ ಗಮನಕ್ಕೆ ಬಂದಿಲ್ಲದೆ ಇರಬಹುದು. ಹಾಗಾಗಿ, ಸುತ್ತೋಲೆಯನ್ನು ಗ್ರಾಹಕರಿಗೆ ಖುದ್ದಾಗಿ ತಲುಪಿಸಿದರೆ ಮಾತ್ರ ಅವರಿಗೆ ಮಾಹಿತಿ ನೀಡಿದಂತಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.
ಗ್ರಾಹಕರಿಗೆ ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಬಡ್ಡಿ ದರ ಕಡಿತದ ಪ್ರಯೋಜನ ದೊರಕಿಸಿಕೊಡಬೇಕೆಂಬ ಏಕಸದಸ್ಯಪೀಠದ ಆದೇಶವನ್ನು ಎತ್ತಿ ಹಿಡಿದಿರುವ ವಿಭಾಗೀಯ ಪೀಠ “ಬ್ಯಾಂಕ್ 2010ರಲ್ಲಿ ಯಾವ ದಿನಾಂಕದಿಂದ ಬಡ್ಡಿ ದರ ಕಡಿತವಾಗುತ್ತದೆಂದು ಸುತ್ತೋಲೆ ಹೊರಡಿಸಿತ್ತೋ ಅಂದಿನಿಂದ ಅನ್ವಯವಾಗುವಂತೆ ಅರ್ಜಿದಾರರ ಗೃಹ ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿ ಅದರ ಪ್ರಯೋಜನವನ್ನು ಅರ್ಜಿದಾರರಿಗೆ ವರ್ಗಾಯಿಸಬೇಕು,” ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಬೆಂಗಳೂರಿನ ವಾಸಿ ಬಿ.ಎಸ್. ಶೇಖರ್ 2007ರ ಫೆ. 14ರಂದು ಪ್ರತಿವಾದಿ ಕೆನರಾ ಬ್ಯಾಂಕ್‌ನಿಂದ ಶೇ. 11.75ರ ಬಡ್ಡಿಗೆ ಗೃಹ ಸಾಲ ಪಡೆದಿದ್ದರು. ಬ್ಯಾಂಕ್ 2010ರ ಜು. 1ರಿಂದ ಅನ್ವಯವಾಗುವಂತೆ ಬ್ಯಾಂಕ್ ಬಡ್ಡಿ ದರವನ್ನು ಶೇ. 8.25ಕ್ಕೆ ಕಡಿತಗೊಳಿಸಿತ್ತು. ಆದರೆ, ಇದರ ಮಾಹಿತಿ ಅರ್ಜಿದಾರರಿಗೆ ತಿಳಿದಿರಲಿಲ್ಲ. ಆದರೆ, ಅವರಿಗೆ ತಡವಾಗಿ ಬಡ್ಡಿದರ ಕಡಿತದ ಮಾಹಿತಿ ಲಭ್ಯವಾಗಿ 2017ರ ಜ. 24ರಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಕೋರಿದ್ದರು. ಬ್ಯಾಂಕ್ 2017ರ ಜ. 24ರಿಂದ ಅನ್ವಯವಾಗುವಂತೆ ಮಾತ್ರ ಬಡ್ಡಿ ದರ ಕಡಿತಗೊಳಿಸಿತ್ತು.
ಹಾಗಾಗಿ ಅರ್ಜಿದಾರರು, 2010ರಿಂದಲೇ ಬ್ಯಾಂಕ್ ಬಡ್ಡಿ ದರ ಕಡಿತಗೊಳಿಸಿದ್ದರೂ ತಮಗೆ ಅದರ ಪ್ರಯೋಜನ ನೀಡಿಲ್ಲ. ಆ ಬಗ್ಗೆ ಬ್ಯಾಂಕ್‌ಗೆ ನಿರ್ದೇಶನ ನೀಡಬೇಕೆಂದು ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ನೀಡಿದ್ದರು. ಆ ದೂರನ್ನು ಪರಿಶೀಲಿಸಿದ ಓಂಬುಡ್ಸ್‌ಮನ್ ‘ಅದರಲ್ಲಿ ಹುರುಳಿಲ್ಲ, ಬ್ಯಾಂಕ್ ಸರಿಯಾದ ಕ್ರಮ ಕೈಗೊಂಡಿದೆ’ ಎಂದು ದೂರು ವಜಾಗೊಳಿಸಿದ್ದರು. ಆ ಆದೇಶ ಪ್ರಶ್ನಿಸಿ ಶೇಖರ್ ಹೈಕೋರ್ಟ್ ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯಪೀಠ, 2010ರಿಂದ ಅನ್ವಯವಾಗುವಂತೆ ಬಡ್ಡಿ ದರ ಕಡಿತದ ಪ್ರಯೋಜನ ಅರ್ಜಿದಾರರಿಗೆ ನೀಡಬೇಕೆಂದು ಆದೇಶ ನೀಡಿತ್ತು.
ಗ್ರಾಹಕರಿಗೆ ಅನ್ಯಾಯ ಹೇಗೆ?
ಬ್ಯಾಂಕ್‌ಗಳ ಬಡ್ಡಿ ದರ ಆಗಾಗ ಏರಿಳಿತ ಆಗುತ್ತಿರುತ್ತದೆ. ಆದರೆ ಬಡ್ಡಿ ದರ ಏರಿದರೆ ಬ್ಯಾಂಕ್‌ಗಳು ತಕ್ಷಣವೇ ಅದನ್ನು ಸಾಲ ಪಡೆದ ಗ್ರಾಹಕರ ಮೇಲೆ ಹೇರುತ್ತವೆ. ಆದರೆ ಬಡ್ಡಿ ದರ ಇಳಿಕೆ ಆದರೆ ಮಾತ್ರ ಬ್ಯಾಂಕ್‌ಗಳು ಈ ಸೌಲಭ್ಯವನ್ನು ಸ್ವಯಂಪ್ರೇರಿತವಾಗಿ ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಗ್ರಾಹಕರು ಬ್ಯಾಂಕ್ ಶಾಖೆಗೆ ಬಂದು ಅರ್ಜಿ ಸಲ್ಲಿಸಿದರೆ ಮಾತ್ರ ಬಡ್ಡಿ ಕಡಿಮೆ ಮಾಡುತ್ತಾರೆ. ಈ ಕ್ರಮದಿಂದ ಬ್ಯಾಂಕ್‌ಗಳಿಗೆ ಲಾಭವಾದರೆ, ಗ್ರಾಹಕರಿಗೆ ನಷ್ಟವಾಗುತ್ತಿದೆ.
Read more
[wpas_products keywords=”deal of the day sale today offer all”]