ಹೈಲೈಟ್ಸ್:
- ಬಸವರಾಜ ಬೊಮ್ಮಾಯಿಗೆ 50:50 ಫಲಿತಾಂಶ ನೀಡಿದ ಪರಿಷತ್ ಚುನಾವಣೆ
- ಕಾಂಗ್ರೆಸ್‌ಗೆ ವಿಶ್ವಾಸ ವೃದ್ಧಿಸಿದ ರಿಸಲ್ಟ್, ಜೆಡಿಎಸ್‌ಗೆ ಮೈಸೂರು, ಹಾಸನ ಮಾತ್ರ
- ತಲಾ 11 ಸ್ಥಾನಗಳಲ್ಲಿ ಗೆದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ 2, ಪಕ್ಷೇತರಗೆ ಒಂದರಲ್ಲಿ ಗೆಲುವು
15 ಸ್ಥಾನಗಳ ನಿರೀಕ್ಷೆಯಲ್ಲಿದ್ದ ಆಡಳಿತಾರೂಢ ಬಿಜೆಪಿಗೆ ಈ ಫಲಿತಾಂಶ ಸಹಜವಾಗಿಯೇ ಹಿನ್ನಡೆಯಾಗಿದೆ. ಆದರೆ, ಕಳೆದ ಬಾರಿಗಿಂತ 5 ಸ್ಥಾನಗಳನ್ನು ಹೆಚ್ಚಿಸಿಕೊಂಡಿರುವ ತೃಪ್ತಿ ಕೇಸರಿ ಪಡೆಗಿದೆ. ಆದರೆ, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಉಪ ಚುನಾವಣೆ ಬಳಿಕ ಪರಿಷತ್ ಚುನಾವಣೆ ಕೂಡ 50:50 ಫಲಿತಾಂಶ ನೀಡಿರುವುದು ಸ್ಪಷ್ಟವಾಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿಯೇ ಬಿಜೆಪಿಗೆ ಹಿನ್ನಡೆಯಾಗಿರುವುದು ಬೊಮ್ಮಾಯಿ ಅವರಿಗೆ ತಲೆನೋವು ತಂದಿದೆ.
ಇನ್ನು, ಕಾಂಗ್ರೆಸ್ ಈ ಫಲಿತಾಂಶದಿಂದ ಸ್ವಲ್ಪ ಚೇತರಿಸಿಕೊಂಡಂತೆ ಕಾಣುತ್ತಿದೆ. ಆಡಳಿತಾರೂಢ ಬಿಜೆಪಿಯ ಜನಪ್ರಿಯತೆ ನಡುವೆಯೂ 11 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಳೆದ ಬಾರಿ ಗೆದ್ದಿದ್ದ ಚಿಕ್ಕಮಗಳೂರು ಮತ್ತು ಬಳ್ಳಾರಿ ಕ್ಷೇತ್ರಗಳು ಪಕ್ಷದ ಕೈ ತಪ್ಪಿದ್ದು ಹೊರತುಪಡಿಸಿದರೆ, ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಿರುವುದು ಸ್ಪಷ್ಟವಾಗಿದೆ. ಇದೇ ಛಾತಿಯನ್ನು ಕಾಂಗ್ರೆಸ್ ಮುಂದುವರೆಸಿದರೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಸುಲಭ ತುತ್ತಾಗುವ ಸಾಧ್ಯತೆಯೇ ಹೆಚ್ಚು.
ಜೆಡಿಎಸ್‌ಗೆ ಹಾಸನ ಸಂಜೀವಿನಿಯಾಗಿದ್ದು, ಲೋಕಸಭೆಯಂತೆ ಪರಿಷತ್ ಚುನಾವಣೆಯಲ್ಲೂ ಜಾತ್ಯತೀತ ಜನತಾದಳದ ಕೈ ಹಿಡಿದಿದೆ. ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ಸೂರಜ್ ರೇವಣ್ಣ ಮೇಲ್ಮನೆ ಪ್ರವೇಶಿಸಿದ್ದಾರೆ. ಉಳಿದಂತೆ ಮೈಸೂರಿನಲ್ಲಿ ಕೊನೆ ಕ್ಷಣದಲ್ಲಿ ಮಂಜೇಗೌಡ ಗೆಲುವು ಸಾಧಿಸಿರುವುದು ಜೆಡಿಎಸ್‌ಗೆ ಜೀವ ಬಂದಂತಾಗಿದೆ. ಆದರೆ, ಮಂಡ್ಯದಲ್ಲಿ 7 ಜೆಡಿಎಸ್ ಶಾಸಕರಿದ್ದರು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಜೆಡಿಎಸ್ ಆತ್ಮಾವಲೋಕನಕ್ಕೆ ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ.
ಕುಟುಂಬ ರಾಜಕಾರಣಕ್ಕೆ ಮಣೆ..!
ಈ ಚುನಾವಣೆಯಲ್ಲೂ ಮತದಾರರು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ. ಹಾಸನದಿಂದ ಎಚ್‌ಡಿ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಮೇಲ್ಮನೆ ಪ್ರವೇಶಿಸಿದರೆ, ಬೆಳಗಾವಿಯಲ್ಲಿ ಚನ್ನರಾಜ್ ಹಟ್ಟಿಹೊಳಿ, ಲಖನ್ ಜಾರಕಿಹೊಳಿ ಇಬ್ಬರಿಗೂ ಮತದಾರ ಗೆಲುವಿನ ಬಾವುಟ ನೀಡಿದ್ದಾನೆ. ಇನ್ನು, ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಶಿವಮೊಗ್ಗದಲ್ಲಿ ಡಿಎಚ್ ಶಂಕರಮೂರ್ತಿ ಅವರ ಪುತ್ರ ಡಿಎಸ್ ಅರುಣ್, ವಿಜಯಪುರದಲ್ಲಿ ಎಂಬಿ ಪಾಟೀಲ್ ಸಹೋದರ ಸುನಿಲ್ ಗೌಡ ಪಾಟೀಲ್, ರಾಯಚೂರಲ್ಲಿ ಅಮರೇಗೌಡ ಬಯ್ಯಾಪುರ ಸಂಬಂಧಿ ಶರಣಗೌಡ ಪಾಟೀಲ್ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಶಿವಕುಮಾರ್ ಸಂಬಂಧಿ ಎಸ್ ರವಿ ಗೆದ್ದಿರುವುದು ಫ್ಯಾಮಿಲಿ ಪಾಲಿಟಿಕ್ಸ್‌ಗೆ ಉದಾಹರಣೆ.
ಬಿಜೆಪಿಗೆ ಜಾರಕಿಹೊಳಿ ಶಾಕ್..!
ಇನ್ನು, ಬೆಳಗಾವಿಯಲ್ಲಿ ಬಿಜೆಪಿಗೆ ರಮೇಶ್ ಜಾರಕಿಹೊಳಿ ಅವರ ಸಹೋದರ ಲಖನ್ ಜಾರಕಿಹೊಳಿ ಶಾಕ್ ನೀಡಿದ್ದಾರೆ. ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚನ್ನರಾಜ್ ಹಟ್ಟಿಹೊಳಿ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲಿನ ಜಿದ್ದಿಗೆ ಸಹೋದರ ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಿದ್ದ ರಮೇಶ್ ಜಾರಕಿಹೊಳಿ ತಮ್ಮದೇ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ. ಅದಲ್ಲದೇ ಲಖನ್ ಜಾರಕಿಹೊಳಿ ಪರ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಪಕ್ಷ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದೇ ಈಗಿನ ಪ್ರಶ್ನೆ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ
ಉತ್ತರ ಕರ್ನಾಟಕದಲ್ಲಿ ಗಟ್ಟಿ ನೆಲೆ ಹೊಂದಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ. ಉತ್ತರ ಕರ್ನಾಟಕದ 9 ಸ್ಥಾನಗಳ ಪೈಕಿ ಬಿಜೆಪಿಗೆ ದಕ್ಕಿರುವುದು ಕೇವಲ ನಾಲ್ಕು ಸ್ಥಾನಗಳು ಮಾತ್ರ. ಧಾರವಾಡ, ವಿಜಯಪುರ, ಕಲಬುರಗಿ, ಬಳ್ಳಾರಿಯಲ್ಲಿ ಕೇಸರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಪ್ರಮುಖವಾಗಿ ಬೆಳಗಾವಿ, ಬೀದರ್, ರಾಯಚೂರಿನಲ್ಲಿ ಪರಾಜಯಗೊಂಡಿದ್ದಾರೆ. ಉಳಿದ 5 ಸ್ಥಾನಗಳಲ್ಲಿ 4 ಕಾಂಗ್ರೆಸ್ ಪಾಲಾಗಿದ್ದರೆ, 1 ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.