Karnataka news paper

ಬಾಲಿವುಡ್ ಸಿನಿಮಾ ‘ಸ್ಪೆಷಲ್ 26’ ಮಾದರಿಯಲ್ಲಿ ಬೆಂಗಳೂರಿನಲ್ಲಿ ನಕಲಿ ಐಟಿ ದಾಳಿ..!


ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಗೆ ನುಗ್ಗಿ 3.50 ಲಕ್ಷ ರೂ. ನಗದು ಹಾಗೂ ಪಿಸ್ತೂಲ್‌ ದೋಚಿ ಪರಾರಿಯಾಗಿದ್ದ ಐವರನ್ನು ಸಂಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಜಯ ನಗರ ನಿವಾಸಿ ಎಂ. ಮಂಜುನಾಥ (35), ಕಾವಲ್‌ ಭೈರಸಂದ್ರದ ಮಹಮ್ಮದ್‌ ಶೋಯೆಬ್‌ ರಬ್ಬಾನಿ ಅಲಿಯಾಸ್‌ ಫಕರ್‌ ಅಲಿ (32), ಸಹಕಾರ ನಗರದ ಟಿ. ಸಿ. ಪ್ರಶಾಂತ್‌ ಕುಮಾರ್‌ (40), ಯಶವಂತಪುರದ ವೈ. ಸಿ. ದುರ್ಗೇಶ (30) ಹಾಗೂ ಆರ್‌. ಟಿ. ನಗರದ ಕೆ. ಕುಮಾರ್‌ (40) ಬಂಧಿತರು. ಆರೋಪಿಗಳಿಂದ 1.70 ಲಕ್ಷ ರೂ. ನಗದು, 2 ಪಿಸ್ತೂಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಟಿ ಅಧಿಕಾರಿಗಳೆಂದು ನುಗ್ಗಿದ ದರೋಡೆಕೋರರು..!

ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಆರೋಪಿಗಳು ಜನವರಿ 23ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಜಯ ನಗರದ ಕ್ಯಾಡ್‌ಮೆಟ್‌ ಲೇಔಟ್‌ನ ನಿವಾಸಿ ಆರ್‌. ಚೇತನ್‌ ಎಂಬುವವರ ಮನೆಗೆ ನುಗ್ಗಿದ್ದರು. ಮನೆ ಪರಿಶೀಲಿಸುವ ನೆಪದಲ್ಲಿ ವಾರ್ಡ್‌ರೋಬ್‌ ಲಾಕರ್‌ನಲ್ಲಿದ್ದ ನಗದು ಹಾಗೂ ಒಂದು ಪಿಸ್ತೂಲ್‌ ದೋಚಿ ಪರಾರಿಯಾಗಿದ್ದರು. ಆರಂಭದಲ್ಲಿ ಐಟಿ ಅಧಿಕಾರಿಗಳೇ ಇರಬೇಕು ಎಂದು ನಂಬಿದ್ದ ಚೇತನ್‌ಗೆ ಮಧ್ಯಾಹ್ನದ ವೇಳೆಗೆ ಅನುಮಾನ ಬಂದಿದೆ. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸಂಜಯ ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಜೆ. ಬಾಲರಾಜ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ರಿಯಲ್‌ ಎಸ್ಟೇಟ್‌ ವ್ಯವಹಾರ

ದೂರುದಾರ ಚೇತನ್‌ ನಗರದ ಖಾಸಗಿ ಕಾಲೇಜೊಂದರಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ತಂದೆ ರಮೇಶ್‌ ಸಂಜಯ ನಗರದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಆರ್ಥಿಕವಾಗಿ ಸದೃಢರಾಗಿದ್ದರು. ಕಳೆದ ವರ್ಷ ರಮೇಶ್‌ ಅಕಾಲಿಕ ಮರಣವನ್ನಪ್ಪಿದ್ದರು. ತಂದೆ ನಿಧನದ ಹಿನ್ನೆಲೆಯಲ್ಲಿ ಪುತ್ರ ಚೇತನ್‌, ತಂದೆಯ ಕಚೇರಿಯಲ್ಲಿರಿಸಲಾಗಿದ್ದ ಕೆಲವು ದಾಖಲೆಗಳು ಹಾಗೂ ಪರವಾನಗಿ ಇರುವ ಪಿಸ್ತೂಲ್‌ ತೆಗೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡಿದ್ದರು.

ಮಾಹಿತಿ ಸಂಗ್ರಹಿಸಿ ದಾಳಿ..!

ಸಂಜಯ ನಗರ ನಿವಾಸಿಯಾದ ಆರೋಪಿ ಮಂಜುನಾಥ್‌ ವಾರಪತ್ರಿಕೆಯೊಂದರಲ್ಲಿ ಉಪ ಸಂಪಾದಕನಾಗಿದ್ದು, ರಮೇಶ್‌ ಅವರ ರಿಯಲ್‌ ಎಸ್ಟೇಟ್‌ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ. ರಮೇಶ್‌ ಅವರಿಗೆ ಬಾಡಿಗೆ ರೂಪದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಬರುವುದರ ಬಗ್ಗೆಯೂ ತಿಳಿದುಕೊಂಡಿದ್ದ. ಮನೆ ಬಾಡಿಗೆಗೆ ಕೊಡಿಸುವ ಬ್ರೋಕರ್‌ ಆಗಿರುವ ಆರೋಪಿ ಕುಮಾರ್‌ಗೆ ರಿಯಲ್‌ ಎಸ್ಟೇಟ್‌ ಉದ್ಯಮಿ ರಮೇಶ್‌ ಬಗ್ಗೆ ಮಾಹಿತಿ ನೀಡಿದ್ದ. ಅಂತೆಯೇ ರಮೇಶ್‌ ಮನೆ ಹಾಗೂ ಮನೆಯಲ್ಲಿ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದ. ಅದರಂತೆ ರಮೇಶ್‌ ಮನೆಯವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಉಳಿದ ಮೂವರು ಆರೋಪಿಗಳೊಂದಿಗೆ ಸೇರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಮನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಪಿ ಪರ್ಫ್ಯೂಮ್‌ ಬಿಡುಗಡೆ ಮಾಡಿದ್ದ ಉದ್ಯಮಿ ಮೇಲೆ ಐಟಿ ದಾಳಿ, ರಾಶಿ ರಾಶಿ ನೋಟು ಎಣಿಸಿ ಅಧಿಕಾರಿಗಳು ಹೈರಾಣು!
ದರೋಡೆಗೆ ನಕಲಿ ಐಡಿ ಕಾರ್ಡ್‌ ಬಳಕೆ

ಪೂರ್ವ ನಿರ್ಧರಿತ ಸಂಚಿನಂತೆ ಆರೋಪಿಗಳಾದ ಮಹಮ್ಮದ್‌ ಶೋಯೆಬ್‌ ರಬ್ಬಾನಿ ಮತ್ತು ದುರ್ಗೇಶ್‌ ಐಟಿ ಅಧಿಕಾರಿಗಳ ಸೋಗಿನಲ್ಲಿ ಜನವರಿ 23ರಂದು ಬೆಳಗ್ಗೆ 8.45ಕ್ಕೆ ರಮೇಶ್‌ ಅವರ ಮನೆಗೆ ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ ದೂರದಾರ ಚೇತನ್‌, ಅವರ ಅಮ್ಮ, ತಂಗಿ, ಅಜ್ಜಿ ಇದ್ದರು. ಆಗ ತಾವು ಐಟಿ ಅಧಿಕಾರಿಗಳು ಎಂದು ನಕಲಿ ಗುರುತಿನ ಚೀಟಿ ತೋರಿಸಿದ್ದರು. ಮನೆ ತಪಾಸಣೆ ಮಾಡಬೇಕು ಎಂದು ಮನೆಯನ್ನೆಲ್ಲಾ ತಡಕಾಡಿ ಕಡೆಗೆ ರೂಮ್‌ನ ವಾರ್ಡ್‌ ರೋಬ್‌ನ ಲಾಕರ್‌ ತೆರೆದು ನಗದು ಹಾಗೂ ಪಿಸ್ತೂಲ್‌ ತೆಗೆದುಕೊಂಡಿದ್ದರು. ಬಳಿಕ ವಿಚಾರಣೆಗೆ ಕರೆದಾಗ ಬರಬೇಕು ಎಂದು ಚೇತನ್‌ ಅವರನ್ನು ಹೆದರಿಸಿ ಬೆಳಗ್ಗೆ 9.45ಕ್ಕೆ ಮನೆಯಿಂದ ಪರಾರಿಯಾಗಿದ್ದರು. ಈ ವೇಳೆ ಉಳಿದ ಮೂವರು ಆರೋಪಿಗಳು ರಮೇಶ್‌ ಅವರ ಮನೆ ಹೊರಗೆ ನಿಂತು ಸಾರ್ವಜನಿಕರ ಚಲನ ವಲನಗಳ ಬಗ್ಗೆ ನಿಗಾ ವಹಿಸಿದ್ದರು. ರಬ್ಬಾನಿ ಮತ್ತು ದುರ್ಗೇಶ್‌ ರಮೇಶ್‌ ಮನೆಯಿಂದ ಹೊರ ಬರುತ್ತಿದ್ದಂತೆ ಐವರು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.

ಸಿಸಿ ಕ್ಯಾಮೆರಾದಿಂದ ಆರೋಪಿಗಳ ಪತ್ತೆ!

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಮನೆಗಳು, ಅಪಾರ್ಟ್‌ಮೆಂಟ್‌ಗಳ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದರು. ಈ ವೇಳೆ ಆರೋಪಿಗಳ ಗುರುತು ಪತ್ತೆಯಾಗಿತ್ತು. ಬಳಿಕ ಅವರ ಮೊಬೈಲ್‌ ನಂಬರ್‌ ಟ್ರೇಸ್‌ ಮಾಡಿದಾಗ ಆರೋಪಿಗಳು ವಿಜಯವಾಡದಲ್ಲಿರುವುದು ಪತ್ತೆಯಾಗಿತ್ತು. ಹೀಗಾಗಿ, ಪೊಲೀಸ್‌ ತಂಡ ಆಂಧ್ರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದೆ. ಅಲ್ಲಿಯೂ ಆರೋಪಿಗಳು ಶ್ರೀಮಂತರ ಮನೆಗಳನ್ನು ಗುರುತಿಸಿ ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಸ್ಕೆಚ್‌ ಹಾಕಿದ್ದರು ಎಂದು ಪೊಲೀಸರು ತಿಳಿಸಿದರು.

ಉತ್ತರ ಪ್ರದೇಶ: ಚುನಾವಣೆ ಸಮೀಪದಲ್ಲಿಯೇ ಅಖಿಲೇಶ್ ಯಾದವ್ ಆಪ್ತರ ಮೇಲೆ ಐಟಿ ದಾಳಿ
ಪಿಸ್ತೂಲ್‌ ಎಫ್‌ಎಸ್‌ಎಲ್‌ಗೆ ರವಾನೆ

ಪ್ರಕರಣದ ಕಿಂಗ್‌ಪಿನ್‌ ಮಂಜುನಾಥ್‌ ಬಳಿ ಪಿಸ್ತೂಲ್‌ ಸಿಕ್ಕಿದೆ. ಈ ಪಿಸ್ತೂಲ್‌ಗೆ ಯಾವುದೇ ಪರವಾನಗಿ ಇಲ್ಲ. ಇದು ಏರ್‌ಗನ್‌ ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿದ್ದಾನೆ. ಈ ಬಗ್ಗೆ ದೃಢಪಡಿಸಿಕೊಳ್ಳಲು ಪಿಸ್ತೂಲ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ರಮೇಶ್‌ ಮನೆಯಿಂದ ಕಳವಾಗಿದ್ದ ಪಿಸ್ತೂಲ್‌ಗೆ ಪರವಾನಗಿ ಇದೆ ಎಂದು ದೂರುದಾರ ಚೇತನ್‌ ಹೇಳಿದ್ದಾರೆ. ಈ ಬಗ್ಗೆ ದಾಖಲೆ ಹಾಜರುಪಡಿಸಲು ಸೂಚಿಸಿದ್ದು, ಆ ಪಿಸ್ತೂಲ್‌ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಲಿವುಡ್ ಸಿನೆಮಾ ‘ಸ್ಪೆಷಲ್ 26’ ಮಾದರಿಯಲ್ಲೇ ನಕಲಿ ದಾಳಿ..!

ಇದೀಗ ಈ ಖದೀಮರು ಎಸಗಿರುವ ದುಷ್ಕೃತ್ಯ, 2013ರಲ್ಲಿ ತೆರೆಕಂಡ ಬಾಲಿವುಡ್ ಸಿನೆಮಾ ‘ಸ್ಪೆಷಲ್ 26’ ಮಾದರಿಯಲ್ಲೇ ಇದೆ..! ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಅನುಪಮ್ ಖೇರ್ ನಟಿಸಿದ್ದ ಈ ಚಿತ್ರದಲ್ಲಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಹಲವು ಗಣ್ಯರು ಹಾಗೂ ಸಿರಿವಂತರ ಮನೆ ಮೇಲೆ ನಕಲಿ ದಾಳಿ ನಡೆಸಿ ಲೂಟಿ ಮಾಡುವ ರೋಚಕ ಕಥೆ ಹೆಣೆಯಲಾಗಿತ್ತು.

ಐಟಿ ದಾಳಿ ವೇಳೆ ನೀರಿನ ಟ್ಯಾಂಕ್‌ನಲ್ಲಿ ಸಿಗ್ತು ಕೋಟಿ ಕೋಟಿ ಹಣ: ಹೇರ್‌ ಡ್ರೈಯರ್ ಬಳಸಿ ಒಣಗಿಸಿದ ಅಧಿಕಾರಿಗಳು!



Read more

[wpas_products keywords=”deal of the day sale today offer all”]