Karnataka news paper

Australia Open 2022: 21ನೇ ಗ್ರ್ಯಾನ್‌ ಸ್ಲಾಮ್‌ ಮೇಲೆ ನಡಾಲ್‌ ಕಣ್ಣು!


ಮೆಲ್ಬೋರ್ನ್‌: ಆಸ್ಪ್ರೇಲಿಯನ್‌ ಒಪನ್‌ ಪುರುಷರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಹೋರಾಟ ಕೌತುಕದ ಉಚ್ಛ್ರಾಯ ಸ್ಥಿತಿಗೆ ತಲುಪಿದೆ. ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಗೆದ್ದಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ಗೆ ಪ್ರಶಸ್ತಿ ಒಲಿದರೆ, ಆಧುನಿಕ ಯುಗದ ಟೆನಿಸ್‌ನಲ್ಲಿ21 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಜಯಿಸಿ ವಿಶ್ವ ದಾಖಲೆ ಬರೆಯಲಿದ್ದಾರೆ.

ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಸಾಧನೆಯನ್ನು ಕಣ್ತುಂಬಿಸಿಕೊಳ್ಳುವ ಉತ್ಸಾಹದಿಂದ ಕಾಯುತ್ತಿದ್ದಾರೆ. ಅಂತೆಯೇ ಎರಡನೇ ಸೆಮಿಯಲ್ಲಿ ಗೆದ್ದಿರುವ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಗೆದ್ದರೆ ಅವರ ಪಾಲಿಗೆ ಸತತ 2 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಲಿದೆ.

ಶುಕ್ರವಾರ ರಾಡ್‌ ಲೇವರ್‌ ಅರೆನಾದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ 3-6, 2-6, 6-3, 3-6 ಸೆಟ್‌ಗಳಿಂದ ಗೆಲುವು ಸಾಧಿಸಿದ ವಿಶ್ವದ 6ನೇ ಶ್ರೇಯಾಂಕದ ರಾಫೆಲ್‌ ನಡಾಲ್‌ 7ನೇ ಸಲ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡರು.

ಆಸ್ಟ್ರೇಲಿಯಾ ಓಪನ್‌ 2022: ಫೈನಲ್‌ಗೇರಿದ ಆಶ್ಲಿ ಬಾರ್ಟಿ, ಕಾಲಿನ್ಸ್‌!

ಎರಡನೇ ಸೆಮಿಫೈನಲ್‌ನಲ್ಲಿ ಗ್ರೀಕ್‌ನ ಸ್ಟೆಫಾನೋಸ್‌ ಸಿಟ್ಸಿಪಸ್‌ ವಿರುದ್ಧ 6-7, 6-4, 4-6, 1-6 ಸೆಟ್‌ಗಳಿಂದ ಜಯ ಸಾಧಿಸಿದ ವಿಶ್ವದ 2ನೇ ಶ್ರೇಯಾಂಕಿತ 25ರ ಪ್ರಾಯದ ರಷ್ಯಾದ ತರುಣ ಡ್ಯಾನಿಲ್‌ ಮೆಡ್ವೆಡೆವ್‌ ಫೈನಲ್‌ ಫೈಟ್‌ಗೆ ವೇದಿಕೆ ಸಜ್ಜುಗೊಳಿಸಿಕೊಂಡರು.

ನಡಾಲ್‌ಗೆ ದಾಖಲೆ ಬರೆಯುವ ತವಕ: ಎರಡು ಗಂಟೆ 55 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿಏಳನೇ ಶ್ರೇಯಾಂಕದ ಬೆರೆಟ್ಟಿನಿ ವಿರುದ್ಧ ಗೆದ್ದಿರುವ 35 ಪ್ರಾಯದ ನಡಾಲ್‌ ಪಾಲಿಗೆ ಫೈನಲ್‌ ಅತಿಹೆಚ್ಚು ಪ್ರಾಮುಖ್ಯತೆ ಪಡೆದಿದೆ. ನೊವಾಕ್‌ ಜೊಕೊವಿಕ್‌, ರೋಜರ್‌ ಫೆಡರರ್‌ ಜತೆ ದಾಖಲೆಯ 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸಾಧನೆ ಹಂಚಿಕೊಂಡಿರುವ ಅವರು, ಫೈನಲ್‌ನಲ್ಲಿಗೆದ್ದರೆ 21 ಪ್ರಶಸ್ತಿಗಳೊಂದಿಗೆ ವೈಯಕ್ತಿಕ ಗರಿಷ್ಠ ಪ್ರಶಸ್ತಿಗಳ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ.

ಜೊಕೊವಿಕ್‌ ಅನುಪಸ್ಥಿತಿಯಲ್ಲಿ ನಡಾಲ್ ಗೆಲ್ಲುವವರೇ 21ನೇ ಗ್ರ್ಯಾನ್ ಸ್ಲಾಮ್?

ನಡಾಲ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ: ಸ್ಪೇನ್‌ ಆಟಗಾರನ ಪಾಲಿಗೆ ಇದು 7ನೇ ಆಸ್ಪ್ರೇಲಿಯನ್‌ ಓಪನ್‌ ಫೈನಲ್‌. ಇದುವರೆಗಿನ 6 ಯತ್ನದಲ್ಲಿ ಒಂದು ಸಲ ಮಾತ್ರ ಕಪ್‌ ಗೆದ್ದಿರುವ ನಡಾಲ್‌ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಆಟಗಾರ. ಅಂತೆಯೇ 8 ಬಾರಿಯ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಜೊಕೊವಿಕ್‌ ಟೂರ್ನಿಯಲ್ಲಿಇಲ್ಲದಿರುವುದು ನಡಾಲ್‌ ಪಾಲಿಗೆ ಅನುಕೂಲಕರ ಪರಿಸ್ಥಿತಿ ತಂದೊಡ್ಡಿದೆ.

ಪ್ರದರ್ಶನದ ಉತ್ತುಂಗದಲ್ಲಿರುವ ಮೆಡ್ವೆಡೆವ್‌ ಹಾಗೂ ಸಿಟ್ಸಿಪಸ್‌ ನಡುವೆಯೂ 2.30 ನಿಮಿಷಗಳ ಉಪಾಂತ್ಯದ ಹೋರಾಟ ಸಾಗಿತು. ಕೊನೆಗೂ ಫೈನಲ್‌ಗೆ ಪ್ರವೇಶ ಪಡೆದಿರುವ ಡ್ಯಾನಿಲ್‌ಗೆ ಸತತ ಎರಡನೇ ಗ್ರ್ಯಾನ್‌ ಸ್ಲಾಮ್‌ ಗೆಲ್ಲುವ ಅವಕಾಶ ಲಭಿಸಿದೆ. ಕಳೆದ ಯುಎಸ್‌ ಓಪನ್‌ ಚಾಂಪಿಯನ್‌ಷಿಪ್‌ ಗೆದ್ದಿರುವ ಅವರು ವಿಶ್ವದ ನಂಬರ್‌ ಒನ್‌ ಆಟಗಾರ ಜೊಕೊವಿಕ್‌ಗೆ ಕ್ಯಾಲೆಂಡರ್‌ ಗ್ರ್ಯಾನ್‌ ಸ್ಲಾಮ್‌ (ಒಂದು ಋುತುವಿನ ಎಲ್ಲಾ ನಾಲ್ಕು ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ) ವಿಶ್ವ ದಾಖಲೆಗೆ ಅಡ್ಡಿಪಡಿಸಿದ್ದರು. 2019ರ ಯುಎಸ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿರುವ ಡ್ಯಾನಿಲ್‌ ಎರಡನೇ ಗ್ರ್ಯಾನ್‌ ಸ್ಲಾಮ್‌ಗಾಗಿ ಅನುಭವಿ ಆಟಗಾರನಿಗೆ ಸವಾಲೊಡ್ಡಬೇಕಾಗಿದೆ.

2022ರ ಋತುವಿನ ಬಳಿಕ ಸಾನಿಯಾ ಮಿರ್ಜಾ ಟೆನಿಸ್‌ಗೆ ವಿದಾಯ!

ಬಾರ್ಟಿಗೆ ಕಾಲಿನ್ಸ್‌ ಸವಾಲು:
ವಿವಿಧ ಕ್ರೀಡೆಗಳಲ್ಲಿ ಪಳಗಿರುವ ಆ್ಯಶ್ಲಿ ಬಾರ್ಟಿ ಅವರು ಶನಿವಾರ ನಡೆಯಲಿರುವ ಆಸ್ಪ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೆ, ಡ್ಯಾನಿಯಲ್‌ ಕಾಲಿನ್ಸ್‌ ಮೊದಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ. ಎರಡು ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳೂ ಅವರ ಮುಡಿಯೇರಿವೆ. ಕಾಲಿನ್ಸ್‌ ವಿವಿಧ ಟೂರ್ನಿಗಳಲ್ಲಿ ಒಟ್ಟು ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಮಹತ್ವದ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿ ಮೆಚ್ಚುಗೆ ಗಳಿಸಿದ್ದಾರೆ.



Read more

[wpas_products keywords=”deal of the day gym”]