ಹೈಲೈಟ್ಸ್:
- ಭದ್ರತಾ ಪಡೆ ಮೇಲೆ ದಾಳಿ ನಡೆಸಲು ಐಎಸ್‌ಐನಿಂದ ಆದೇಶ
- ಸಂಚು ಹೆಣೆಯುತ್ತಿದ್ದ ಪಾಕಿಸ್ತಾನ ಪೋಷಿತ ಲಷ್ಕರೆ ತೊಯ್ಬಾ ಸಂಘಟನೆಯ ಉಗ್ರ
- ಕಣಿವೆಯಲ್ಲಿನ ಬೆಂಬಲಿಗರಿಂದ ಶಸ್ತ್ರಾಸ್ತ್ರಗಳು ಕೂಡ ಉಗ್ರನಿಗೆ ಸಿಕ್ಕಿದ್ದವು
ಮಂಗಳವಾರ ಮುಂಜಾನೆ ಪೂಂಚ್ ಜಿಲ್ಲೆಯ ಬೆಹ್ರಮ್‌ಗಾಲ ಪ್ರದೇಶದಲ್ಲಿ ಸಶಸ್ತ್ರ ಉಗ್ರರು ಅಡಗಿರುವ ಗುಪ್ತಚರ ಮಾಹಿತಿ ಸಿಕ್ಕಿತ್ತು. ಇದನ್ನು ಬೆನ್ನತ್ತಿ ಹೊರಟ ಭದ್ರತಾ ಪಡೆಗಳು ಹಾಗೂ ಜಮ್ಮು – ಕಾಶ್ಮೀರ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ಆರಂಭಿಸಿದರು.
ಪ್ರತಿಯಾಗಿ ಕಾರ್ಯಾಚರಣೆ ಆರಂಭಿಸಿದ ಯೋಧರು, ಪಾಕ್ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಆತನ ಬಳಿಯಿಂದ ಎಕೆ – 47 ರೈಫಲ್, ನಾಲ್ಕು ಸುತ್ತು ಗುಂಡುಗಳು, ಒಂದು ಗ್ರೆನೇಡ್, ಭಾರತೀಯ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರ ಅಬು ಜರಾರ್‌ಗೆ ರಾಜೌರಿ – ಪೂಂಚ್ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಹೆಚ್ಚಿಸುವುದರ ಜತೆಗೆ ಭದ್ರತಾ ಪಡೆಗಳ ಮೇಲೆ ಭೀಕರ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆದೇಶಿಸಿತ್ತು ಎಂದು ಮೂಲಗಳು ತಿಳಿಸಿವೆ. ಆ ನಿಟ್ಟಿನಲ್ಲಿ ಸಕ್ರಿಯನಾಗಿದ್ದ ಜರಾರ್‌ಗೆ ಲಷ್ಕರ್ ಸಂಘಟನೆಯ ಕಣಿವೆಯಲ್ಲಿನ ಬೆಂಬಲಿಗರಿಂದ ಶಸ್ತ್ರಾಸ್ತ್ರಗಳು ಕೂಡ ಸಿಕ್ಕಿದ್ದವು ಎಂದು ಸೇನಾ ಮೂಲಗಳು ತಿಳಿಸಿವೆ.
ಕೆಲ ದಿನಗಳಿಂದ ಈಚೆಗೆ ಪಾಕಿಸ್ತಾನದಿಂದ ನುಸುಳಿ ಬಂದು, ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ಎಂಟನೇ ಉಗ್ರ ಅಬು ಜರಾರ್. ಕೆಲ ದಿನಗಳ ಮುನ್ನ ರಾಜೌರಿ ಸೆಕ್ಟರ್‌ನಲ್ಲಿ ಉಗ್ರರ ಸಹಚರ ಹಾಗೂ ಶಸ್ತ್ರಾಸ್ತ್ರ ಪೂರೈಕೆದಾರ ಹಾಜಿ ಆರಿಫ್ ಎಂಬಾತನನ್ನು ಎಲ್‌ಒಸಿಯಲ್ಲಿ ಹೊಡೆದುರುಳಿಸಲಾಗಿತ್ತು.
ಮತ್ತೊಬ್ಬ ಪೊಲೀಸ್ ಹುತಾತ್ಮ: ಪೊಲೀಸ್ ವಾಹನ ಗುರಿಯಾಗಿಸಿಕೊಂಡು ಸೋಮವಾರ ಸಂಜೆ ಶ್ರೀನಗರದಲ್ಲಿ ಜೈಷೆ ಮೊಹಮದ್ ಸಂಘಟನೆಯ ಉಗ್ರರು ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಪೊಲೀಸ್ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇದರಿಂದ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಸಂಖ್ಯೆ ಮೂರಕ್ಕೆ ಏರಿದೆ.
ಕಾಶ್ಮೀರದಲ್ಲಿ ಸೇನಾ ನೆಲೆ, ಯೋಧರ ಮೇಲೆ ಸರಣಿ ದಾಳಿ: ಕೇಂದ್ರದ ಎಚ್ಚರಿಕೆ
ಕಾಶ್ಮೀರದಲ್ಲಿ ಯೋಧರು, ಅರೆ ಸೇನಾ ಪಡೆಗಳು ಮತ್ತು ಅವರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಪೋಷಿತ ಉಗ್ರರು ಸರಣಿ ದಾಳಿ ನಡೆಸಲು ಸಂಚು ಹೆಣೆದಿದ್ದಾರೆ ಎಂದು ಕಳೆದ ವಾರದಿಂದ ಗುಪ್ತಚರ ಸಂಸ್ಥೆಗಳು ಎಚ್ಚರಿಸುತ್ತಿವೆ. ಈ ನಿಟ್ಟಿನಲ್ಲಿ ಭದ್ರತಾ ಪಡೆಗಳು ಉಗ್ರ ನಿಗ್ರಹಕ್ಕಾಗಿ ಅನುಸರಿಸಬೇಕಾದ ಏಕರೂಪದ ಕಾರ್ಯಾಚರಣೆ ಪದ್ಧತಿಗೆ ಸೇನಾ ಕಮಾಂಡರ್‌ಗಳು ಸೂಚಿಸಿದ್ದಾರೆ ಎನ್ನಲಾಗಿದೆ.
‘ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಬಳಸಿಕೊಂಡು ಪೊಲೀಸರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಉಗ್ರರು ದಾಳಿ ನಡೆಸಲಿದ್ದಾರೆ. ಈ ಮೂಲಕ ಕಾಶ್ಮೀರ ಇನ್ನೂ ಕೂಡ ತಮ್ಮ ಹಿಡಿತದಲ್ಲಿದೆ ಎಂಬ ಸಂದೇಶವನ್ನು ಸ್ಥಳೀಯರಿಗೆ ಉಗ್ರರು ರವಾನಿಸುವ ಪ್ರಯತ್ನ ನಡೆಸಲಿದ್ದಾರೆ. ಪಾಕಿಸ್ತಾನದ ಒಂಬತ್ತು ಉಗ್ರರು ಎರಡು ತಂಡಗಳಲ್ಲಿ ಪೂಂಛ್ ಮೂಲಕ ಕಾಶ್ಮೀರ ಕಣಿವೆ ನುಸುಳಿದ್ದಾರೆ. ಉಗ್ರ ಕಮಾಂಡರ್‌ಗಳಾಗಿದ್ದ ಶಿರಾಜ್ ಅಹ್ಮದ್ ಲೋನ್, ಮೆಹ್ರನ್ ಯಾಸೀನ್ ಶಲ್ಲಾನ ಹತ್ಯೆಗೆ ಪ್ರತಿಕಾರದ ದಾಳಿ ನಡೆಯಲಿದೆ ಎಂಬುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಭದ್ರತಾ ಪಡೆಗಳು ಕಟ್ಟೆಚ್ಚರದಿಂದ ಇರಬೇಕು’ ಎಂದು ಕೇಂದ್ರ ಸರಕಾರವು ಭದ್ರತಾ ಪಡೆಗಳಿಗೆ ರವಾನಿಸಿರುವ ಎಚ್ಚರಿಕೆ ಸಂದೇಶದಲ್ಲಿ ತಿಳಿಸಿದೆ.