Karnataka news paper

ಶಾಸಕರ ಭವನ ಬಳಿ ಪೊಲೀಸ್ ಸಿಬ್ಬಂದಿ ಮೇಲೆ ವಾಗ್ವಾದ, ಹಲ್ಲೆ ಆರೋಪ: ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದ್ದೇನು?


Online Desk

ಬೆಂಗಳೂರು: ವಿಧಾನ ಸೌಧದ ಶಾಸಕರ ಭವನ ಬಳಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಕಳೆದ ರಾತ್ರಿ ಪೊಲೀಸ್ ಸಿಬ್ಬಂದಿ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಕಳೆದ ತಡರಾತ್ರಿ ವಿಧಾನ ಸೌಧ ಬಳಿ ನೈಟ್ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನರಸಿಂಹ ಮೂರ್ತಿ ಮೇಲೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ನಿನ್ನೆ ತಡರಾತ್ರಿ ಶಾಸಕರ ಭವನದಿಂದ ಶಾಸಕ ಎಂ ಪಿ ಕುಮಾರಸ್ವಾಮಿಯವರು ಕಾರಿನಲ್ಲಿ ಹೊರಬಂದಿದ್ದ ಸಂದರ್ಭದಲ್ಲಿ ಹೊಯ್ಸಳ ವಾಹನ ನಿಂತಿದ್ದು ಈ ಸಮಯದಲ್ಲಿ ಪಾರ್ಕಿಂಗ್ ವಿಚಾರವಾಗಿ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆ. ನೈಟ್ ಬೀಟ್‌ನಲ್ಲಿದ್ದ ಕಾನ್ಸ್‌ಟೇಬಲ್ ಚಂದ್ರಶೇಖರ್‌, ಹೆಚ್‌ಪಿ ನರಸಿಂಹಮೂರ್ತಿ ಅವರಿಗೆ ಅವಾಚ್ಯ ಶಬ್ದಗಳಿಂದ ಶಾಸಕರು ನಿಂದಿಸಿದ್ದಾರೆ ಎನ್ನಲಾಗಿತ್ತು. 

ಹಲ್ಲೆ ಬಗ್ಗೆ ಕಂಟ್ರೋಲ್ ರೂಂಗೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಂತೆ ಎಸಿಪಿ ಸ್ಥಳಕ್ಕೆ ಆಗಮಿಸಿದ್ದರು. ಶಾಸಕರನ್ನು ಮತ್ತು ಅಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.

ಶಾಸಕರು ಹೇಳುವುದೇನು?: ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ, ಕಳೆದ ರಾತ್ರಿ ನಡೆದ ಘಟನೆ ಬಗ್ಗೆ ಮತ್ತು ನನ್ನ ವರ್ತನೆ ಬಗ್ಗೆ ನನಗೇ ಬೇಸರವಿದೆ. ಆ ಪೊಲೀಸ್‌ಗೆ ನಾನು ಶಾಸಕನೆಂಬುದೇ ಗೊತ್ತಿಲ್ಲ. ನನ್ನ ಕಾರು ಹೋಗುವುದಕ್ಕೆ ಮುಕ್ಕಾಲು ಗಂಟೆ ಕಾಲ ಸಿಬ್ಬಂದಿ ಬಿಡಲೇ ಇಲ್ಲ. ಪೊಲೀಸರು ಹೊಯ್ಸಳ ಕಾರು ಅಡ್ಡಹಾಕಿಕೊಂಡಿದ್ದರು. ಹೀಗಾಗಿ ನಾನೇ ಸ್ಥಳಕ್ಕೆ ಹೋಗಿ ಮಾತನಾಡಿದ್ದೆ. ನಿನಗೆ ಬುದ್ಧಿ ಇಲ್ಲವಾ? ಕಾರು ಹೋಗುವುದಕ್ಕೆ ಬಿಡಲ್ವಾ? ಎಂದು ಪ್ರಶ್ನಿಸಿದ್ದೆ. ಈ ವೇಳೆ ಸಿಬ್ಬಂದಿ ಪೆದ್ದ ಪೆದ್ದನಾಗಿ ಮಾತನಾಡಿದ್ದರು. ನಾನು ಶಾಸಕನೇ ಅಲ್ಲ ಎನ್ನುವಂತೆ ಮಾತನಾಡಿದ್ದರು. ಈ ವೇಳೆ ಸಿಟ್ಟಾಗಿ ನಾನು ಕೂಡ ಮಾತನಾಡಿದ್ದೇನೆ. ಬಳಿಕ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿ ಬಂದರು. ಎಸಿಪಿ ಆ ಪೊಲೀಸ್ ಸಿಬ್ಬಂದಿಗೆ ಬುದ್ಧಿ ಹೇಳಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದಿದ್ದಾರೆ.



Read more

[wpas_products keywords=”deal of the day”]