Karnataka news paper

1932 ರಿಂದ 2022ರವರೆಗೆ, ಹೀಗಿತ್ತು ನೋಡಿ ಏರ್‌ ಇಂಡಿಯಾ ಎಂಬ ‘ಮಹಾರಾಜ’ನ ಏಳು ಬೀಳಿನ ಕತೆ!


ಏರ್‌ ಇಂಡಿಯಾ ಏಳು ದಶಕಗಳ ನಂತರ ಟಾಟಾ ಸಮೂಹದ ಅಂಗಳಕ್ಕೆ ಮರಳಿದೆ. ಒಂದು ಕಾಲದಲ್ಲಿ ಟಾಟಾ ಸಮೂಹದವರ ಹೆಮ್ಮೆಯ ಸ್ವತ್ತಾಗಿದ್ದ ಈ ಏರ್‌ ಇಂಡಿಯಾ ಸರಕಾರೀಕರಣಗೊಂಡಿತ್ತು. ಭಾರತದ ಈ ಹೆಮ್ಮೆಯ ಸಂಸ್ಥೆಯ ಹುಟ್ಟು, ಏಳುಬೀಳು, ವರ್ತಮಾನ- ಭವಿಷ್ಯದತ್ತ ಇಲ್ಲಿ ಕಣ್ಣು ಹಾಯಿಸೋಣ.

ಜೆಏರ್‌ಡಿ ಟಾಟಾ ಕಟ್ಟಿದ ಕನಸು

1903ರಲ್ಲಿ ಜನಿಸಿದ ಜೆಹಾಂಗೀರ್‌ ರತನ್‌ಜೀ ದಾದಾಭಾಯ್‌ ಟಾಟಾ (ಜೆಆರ್‌ಡಿ ಟಾಟಾ) ತಮ್ಮ ಬಾಲ್ಯವನ್ನು ಫ್ರಾನ್ಸ್‌ನಲ್ಲಿ ಕಳೆದರು. 1929ರಲ್ಲಿ ಮುಂಬಯಿಯಲಿ ಫ್ಲೈಯಿಂಗ್‌ ಕ್ಲಬ್‌ ಆರಂಭವಾದಾಗ ಅದಕ್ಕೆ ಸೇರಿಕೊಂಡರು. 1932ರಲ್ಲಿ 2 ಲಕ್ಷ ರೂಪಾಯಿ ಹೂಡಿ ‘ಟಾಟಾ ಏವಿಯೇಶನ್‌ ಸರ್ವಿಸ್‌’ ಸ್ಥಾಪಿಸಿದರು. ಮೊದಲ ವಿಮಾನವನ್ನು ತಾವೇ ಹಾರಿಸಿದರು. ಅದೊಂದು ಸರಕು ಸಾಗಣೆ ವಿಮಾನ. ಆಗ ಅದನ್ನು ‘ಟಾಟಾ ಏರ್‌ ಮೇಲ್‌’ ಎನ್ನಲಾಗುತ್ತಿತ್ತು. ಐದು ವರ್ಷಗಳಲ್ಲಿ ಅದು ಲಾಭಕರ ವಾಯುಯಾನ ಸಂಸ್ಥೆಯಾಗಿ ಬೆಳೆಯಿತು. 1938ರಲ್ಲಿ ಇದರ ಹೆಸರನ್ನು ಟಾಟಾ ಏರ್‌ಲೈನ್ಸ್‌ ಎಂದು ಬದಲಾಯಿಸಿದರು.

​ಬ್ರಿಟೀಷರ ತೆಕ್ಕೆಗೂ ಸೇರಿತ್ತು ಏರ್‌ ಇಂಡಿಯಾ!

ಎರಡನೇ ವಿಶ್ವಯುದ್ಧ ಆರಂಭವಾದಾಗ, ಬ್ರಿಟಿಸ್‌ ಸರಕಾರ ಟಾಟಾದವರ ಎಲ್ಲ ವಿಮಾನಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಹಕ್ಕಿನಿಂದ ಬಳಸಿಕೊಳ್ಳಲು ಆರಂಭಿಸಿತು. ಯುದ್ಧ ಮುಗಿದ ಬಳಿಕ ಟಾಟಾ ತೆಕ್ಕೆಗೆ ಅವು ಮರಳಿ ಬಂದವು. 1946ರಲ್ಲಿ ಟಾಟಾ ತಮ್ಮ ಸಂಸ್ಥೆಯ ಹೆಸರನ್ನು ಏರ್‌ ಇಂಡಿಯಾ ಎಂದು ಬದಲಾಯಿಸಿದರು. 1947ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ‘ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌’ ಆರಂಭಿಸುವ ಪ್ರಸ್ತಾವವನ್ನು ಟಾಟಾ ಸರಕಾರದ ಮುಂದಿಟ್ಟರು. ಸರಕಾರ ತಾನು ಸಂಸ್ಥೆಯಲ್ಲಿ ಶೇ. 49 ಷೇರುಗಳನ್ನು ಹೊಂದುವೆನೆಂದಿತು. ಉಳಿದದ್ದರಲ್ಲಿ ಶೇ. 25ನ್ನು ಟಾಟಾ ತಮ್ಮ ಬಳಿ ಇಟ್ಟುಕೊಂಡರೆ, ಉಳಿದದ್ದು ಸಾರ್ವಜನಿಕ ಷೇರುಗಳಾದವು. 1948ರಲ್ಲಿ ಅಂತಾರಾಷ್ಟ್ರೀಯ ಹಾರಾಟಗಳು ಶುರುವಾದವು. ‘ಮಹಾರಾಜ’ ಲಾಂಛನ ಬಳಕೆಗೆ ಬಂದಿದ್ದೇ ಆಗ.

ಹಳೆ ವಿಮಾನಗಳು, ಕಳಪೆ ಸೇವೆ; ಟಾಟಾ ಮುಂದಿದೆ ಏರ್‌ ಇಂಡಿಯಾ ಮೇಲೆತ್ತುವ ಭಾರೀ ಸವಾಲು

​ರಾಷ್ಟ್ರೀಕರಣವಾಯಿತು ಸಂಸ್ಥೆ

ಎರಡನೇ ಮಹಾಯುದ್ಧ ಕೊನೆಗೊಂಡ ಬಳಿಕ ವಾಯುಯಾನ ಸಂಸ್ಥೆಗಳ ರಾಷ್ಟ್ರೀಕರಣ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದ್ದವು. ಟಾಟಾ ಮಾತ್ರ ಇದರ ಸಂಭಾವ್ಯತೆಯನ್ನು ತಳ್ಳಿಹಾಕಿದ್ದರು. ಆದರೆ ಅಚ್ಚರಿ ಎಂಬಂತೆ, 1952ರಲ್ಲಿ ಸರಕಾರ ಎಲ್ಲ ಷೇರುಗಳನ್ನೂ ತಾನೇ ಖರೀದಿಸಿ, ಸಂಸ್ಥೆಯನ್ನು ರಾಷ್ಟ್ರೀಕರಣ ಮಾಡಿಕೊಂಡಿತು. ಆಗ ಸರಕಾರ ಟಾಟಾಗಳಿಗೆ ನೀಡಿದ ಮೊತ್ತ 2.8 ಕೋಟಿ ರೂಪಾಯಿ. 3 ಕೋಟಿ ರೂಪಾಯಿ ತೆತ್ತು ಇನ್ನೂ ಕೆಲವು ವಿಮಾನ ಸಂಸ್ಥೆಗಳನ್ನೂ ಸರಕಾರ ಖರೀದಿಸಿತು. ಹೀಗಿದ್ದರೂ ಮುಂದಿನ 25 ವರ್ಷ ಟಾಟಾ ಅವರೇ ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರಿದರು.

1978ರ ಜನವರಿ 1ರಂದು ಏರ್‌ ಇಂಡಿಯಾದ ಒಂದು ವಿಮಾನ ಅರಬ್ಬೀ ಸಮುದ್ರಕ್ಕೆ ಬಿದ್ದು ಎಲ್ಲ 213 ಪ್ರಯಾಣಿಕರು ಜಲಸಮಾಧಿಯಾದರು. ಕೇಂದ್ರ ಸರಕಾರ ಟಾಟಾ ಅವರನ್ನು ಪದವಿಯಿಂದ ಕೆಳಗಿಳಿಸಿತು. 1980ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾದ ಬಳಿಕ ಮತ್ತೆ ಟಾಟಾ ಅವರನ್ನು ಸಂಸ್ಥೆಯ ನಿರ್ದೇಶಕರ ಮಂಡಳಿಗೆ ಕರೆ ತಂದರು. 1986ರಲ್ಲಿ ರತನ್‌ ಟಾಟಾ ಅವರನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಲಾಯಿತು. 1989ರವರೆಗೂ ರತನ್‌ ಟಾಟಾ ಏರ್‌ ಇಂಡಿಯಾದ ಅಧ್ಯಕ್ಷರಾಗಿದ್ದರು.

ಏರ್‌ ಇಂಡಿಯಾ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆ: ಕಳೆಗುಂದಿದ್ದ ‘ಮಹಾರಾಜ’ನಿಗೆ ಟಾಟಾದಿಂದ ಹೊಸ ಸ್ಪರ್ಶ

​ಕೊನೆಗೂ ಟಾಟಾ ತೆಕ್ಕೆಗೆ

ಈ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ಎರಡು ದಶಕಗಳ ಹಿಂದೆ ಆರಂಭವಾಗಿತ್ತು. ವಾಜಪೇಯಿ ಸರಕಾರ ಏರ್‌ ಇಂಡಿಯಾದಿಂದ ಶೇ. 40 ಷೇರುಗಳನ್ನು ಮಾರಾಟ ಮಾಡಲು ಉದ್ದೇಶಿಸಿತ್ತು. ಸಿಂಗಾಪುರ ಏರ್‌ಲೈನ್ಸ್‌ ಮತ್ತು ಟಾಟಾ ಗ್ರೂಪ್‌ ಆಸಕ್ತಿ ವಹಿಸಿತ್ತು. ಆದರೆ ಪ್ರಕ್ರಿಯೆ ಪೂರ್ಣವಾಗಿರಲಿಲ್ಲ. ಅಲ್ಲಿಂದ ನಂತರ ಏರ್‌ಲೈನ್‌ ಅನ್ನು ಸರಕಾರ ಮಾರಲು ಯತ್ನಿಸಿದ್ದರೂ ಆಗಿರಲಿಲ್ಲ. ನಷ್ಟ ವರ್ಷದಿಂದ ವರ್ಷ ಏರುತ್ತಲೇ ಇತ್ತು. ಕಳೆದ ನಾಲ್ಕಾರು ವರ್ಷಗಳಿಂದ ನಷ್ಟದಲ್ಲಿರುವ ಏರ್‌ ಇಂಡಿಯಾ ಕಂಪನಿಯ ಎಲ್ಲ ಷೇರುಗಳನ್ನು ಹಿಂದೆಗೆದುಕೊಂಡು ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಮತ್ತೆ ಮತ್ತೆ ಪ್ರಯತ್ನಿಸಿತು.

ಟಾಟಾ ಗ್ರೂಪ್‌ ಹಾಗೂ ಸ್ಪೈಸ್‌ಜೆಟ್‌ ಸಂಸ್ಥೆಯ ಅಜಯ್‌ ಸಿಂಗ್‌ ಅವರು ತಮ್ಮ ಬಿಡ್‌ಗಳನ್ನು ಸಲ್ಲಿಸಿದರು. ಟಾಟಾ ಗ್ರೂಪ್‌ ಹೆಚ್ಚಿನ ದರದ ಬಿಡ್‌ ಸಲ್ಲಿಸಿ ಮುಂಚೂಣಿಯಲ್ಲಿತ್ತು. ಕೊನೆಗೂ ಮಾರಾಟ ಪ್ರಯತ್ನ 2021ರ ಅಕ್ಟೋಬರ್‌ನಲ್ಲಿ ಪೂರ್ಣಗೊಂಡು, ಟಾಟಾ ಗ್ರೂಪ್‌ ಎಂದು ಕರೆಯಲ್ಪಡುವ ಟಾಟಾ ಸನ್ಸ್‌ ಲಿಮಿಟೆಡ್‌ ಇದರ ಎಲ್ಲ ಷೇರುಗಳನ್ನು ಖರೀದಿಸಲು ಯಶಸ್ವಿಯಾಯಿತು. ಇದಕ್ಕೆ ಟಾಟಾ ಗ್ರೂಪ್‌ ತೆತ್ತ ಮೌಲ್ಯ 18,000 ಕೋಟಿ ರೂಪಾಯಿ. 2004ರಲ್ಲಿ ಆರಂಭವಾದ, ಕೇರಳ- ಗಲ್ಫ್‌ ನಡುವೆ ಹಾರಾಡುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕೂಡ ಸಂಪೂರ್ಣವಾಗಿ ಖರೀದಿದಾರರ ತೆಕ್ಕೆ ಸೇರಿದೆ. ಸದ್ಯ ಏರ್‌ ಇಂಡಿಯಾ 60,074 ಕೋಟಿ ರೂ.ಗಳ ಸಾಲ ಹೊಂದಿದೆ. ಇದರಲ್ಲಿ 23,286 ಕೋಟಿ ರೂ.ಗಳನ್ನು ಖರೀದಿದಾರರು ಭರಿಸಬೇಕಿದೆ; ಉಳಿದುದನ್ನು ವಿಶೇಷೋದ್ದೇಶ ವೆಹಿಕಲ್‌ ಮೂಲಕ ಸರಕಾರ ಭರಿಸಲಿದೆ.

70 ವರ್ಷಗಳ ನಂತರ ಮರಳಿ ಗೂಡು ಸೇರಿದ ಏರ್‌ಇಂಡಿಯಾ, ಟಾಟಾ ಗ್ರೂಪ್‌ನಲ್ಲಿ ಕಳೆಗಟ್ಟಿದ ಸಂಭ್ರಮ

​ಏರ್‌ ಇಂಡಿಯಾ ಹಾರಿ ಬಂದ ಹಾದಿ

1932: ಜೆಆರ್‌ಡಿ ಟಾಟಾ ಅವರಿಂದ ಟಾಟಾ ಏರ್‌ಲೈನ್ಸ್‌ ಸಂಸ್ಥೆಯ ಆರಂಭ. ಸ್ವತಃ ಪೈಲಟ್‌ ಆಗಿದ್ದ ಜೆಆರ್‌ಡಿ ಟಾಟಾ ಮೊದಲ ಸೇವೆಯನ್ನು ತಾವೇ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಕರಾಚಿಯಿಂದ ಮುಂಬಯಿಗೆ ಮೊದಲ ವಿಮಾನ ಸರಕು ಸಾಗಣೆ ಹೊತ್ತು ಬಂತು. ಕಂಪನಿ ಬಳಸಿದ ಮೊದಲ ವಿಮಾನ ಹ್ಯಾವಿಲ್ಯಾಂಡ್‌ ಪುಸ್‌ ಮಾತ್‌. ಆಗ ಮುಂಬಯಿಯಲ್ಲಿ ಸರಿಯಾದ ರನ್‌ವೇ ಕೂಡ ಇರಲಿಲ್ಲ. ರೇಡಿಯೋ ಸಿಗ್ನಲ್‌, ನ್ಯಾವಿಗೇಶನ್‌ ವ್ಯವಸ್ಥೆಗಳೆಲ್ಲ ಇರಲೇ ಇಲ್ಲ.

1933: ಅಹಮದಾಬಾದ್‌, ಬಾಂಬೆ, ಚೆನ್ನೈ, ತಿರುವನಂತಪುರಂ ನಡುವೆ ಪ್ರಯಾಣಿಕ ಹಾಗೂ ಸರಕು ವಿಮಾನಗಳು ಹಾರಾಟ ನಡೆಸಿದವು. ಆಗ ದಿಲ್ಲಿಯಿಂದ ಬಾಂಬೆ ಟಿಕೆಟ್‌ ದರ 75 ರೂ.!

1937: ಬಾಂಬೆ-ಇಂದೋರ್‌-ಭೋಪಾಲ್‌-ಗ್ವಾಲಿಯರ್‌-ದಿಲ್ಲಿ ಸೇವೆ ಆರಂಭ. ಮತ್ತೊಮ್ಮೆ ಜೆಆರ್‌ಡಿ ಟಾಟಾ ಅವರೇ ಚೊಚ್ಚಲ ವಿಮಾನ ಹಾರಾಟ ನಡೆಸಿದರು.

1938: ಡ್ರ್ಯಾಗನ್‌ ರಾಪಿಡ್‌ ಡಿಎಚ್‌-89 ವಿಮಾನ ಸೇರ್ಪಡೆ. ರೇಡಿಯೋ ಅಳವಡಿಸಿದ ಮೊದಲ ವಿಮಾನವಿದು.

1939: ತಿರುವನಂತಪುರಂ, ಕೊಲಂಬೊ, ಲಾಹೋರ್‌ ಮತ್ತಿತರ ಕಡೆಗಳಿಗೆ ಮಾರ್ಗ ವಿಸ್ತರಣೆ.

1946: ಎರಡನೇ ಮಹಾಯುದ್ಧದ ನಂತರ ಟಾಟಾ ಏರ್‌ಲೈನ್ಸ್‌ ಅನ್ನು ಸಾರ್ವಜನಿಕ ಕಂಪನಿಯಾಗಿ ಪರಿವರ್ತಿಸಲಾಯಿತು; ಏರ್‌ ಇಂಡಿಯಾ ಲಿಮಿಟೆಡ್‌ ಎಂದು ಮರುನಾಮಕರಣ ಆಗಿದ್ದೇ ಆಗ.

1948: ಬಾಂಬೆ, ಕೈರೋ, ಜಿನೀವಾ ಮತ್ತು ಲಂಡನ್‌ ನಡುವೆ ಅಂತಾರಾಷ್ಟ್ರೀಯ ಸೇವೆಗಳು ಆರಂಭವಾದವು. ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಅಸ್ತಿತ್ವಕ್ಕೆ ಬಂತು.

1953: ಭಾರತ ಸರಕಾರ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕೃತಗೊಳಿಸಿತು ಮತ್ತು ಎರಡು ನಿಗಮಗಳನ್ನು ರಚಿಸಿತು- ಒಂದು ದೇಶೀಯ ಸೇವೆಗಳಿಗೆ (ಇಂಡಿಯನ್‌ ಏರ್‌ಲೈನ್ಸ್‌ ಕಾರ್ಪೊರೇಶನ್‌) ಮತ್ತು ಇನ್ನೊಂದು ಅಂತಾರಾಷ್ಟ್ರೀಯಕ್ಕೆ (ಏರ್‌ ಇಂಡಿಯಾ ಲಿಮಿಟೆಡ್‌).

1960: ಬೋಯಿಂಗ್‌ 707 ಅನ್ನು ಏಷ್ಯಾದಲ್ಲಿ ಮೊದಲ ಬಾರಿಗೆ ಸಂಸ್ಥೆ ಖರೀದಿಸಿ ಹಾರಾಟಕ್ಕೆ ಬಿಟ್ಟಿತು.

1962: ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಕಾರ್ಪೊರೇಷನ್‌ ಅನ್ನು ಏರ್‌ ಇಂಡಿಯಾ ಎಂದು ಸಂಕ್ಷಿಪ್ತಗೊಳಿಸಲಾಯಿತು.

2001: ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಏರ್‌ಲೈನ್‌ ಮಾರಾಟದ ಮೊದಲ ಪ್ರಯತ್ನ ಮಾಡಿತು. ಏರ್‌ ಇಂಡಿಯಾದ ಶೇ. 40 ಷೇರುಗಳನ್ನು ಮಾರಾಟಕ್ಕಿಡಲಾಯಿತು.

2007: ಏರ್‌ ಇಂಡಿಯಾ ತನ್ನ ದೇಶೀಯ ಘಟಕ ಇಂಡಿಯನ್‌ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಿತು.

2018: ಸರಕಾರ ಸಂಸ್ಥೆಯ ಮಾರಾಟಕ್ಕೆ ಪ್ರಯತ್ನಿಸಿತು. ಅಷ್ಟು ಹೊತ್ತಿಗೆ ರೂ. 50,000 ಕೋಟಿಗಿಂತ ಅಧಿಕ ಸಾಲ ಸಂಸ್ಥೆಯ ಮೇಲಿತ್ತು. ಈ ಬಾರಿ, ಸಂಸ್ಥೆಯಲ್ಲಿನ ಶೇ. 24 ಶೇರುಗಳನ್ನು ಉಳಿಸಿಕೊಳ್ಳಲು ಸರಕಾರ ನಿರ್ಧರಿಸಿತು. ಆದರೆ ಒಂದು ಬಿಡ್‌ ಸಹ ಬರಲಿಲ್ಲ.

2020: ಮಾರಾಟಕ್ಕೆ ಸರಕಾರದಿಂದ ಮತ್ತೊಮ್ಮೆ ಯತ್ನ. ಈ ಬಾರಿ ಸರಕಾರ ಶೇ. 100 ಷೇರುಗಳನ್ನೂ ಕೊಟ್ಟು ಬಿಡುವುದಾಗಿ ಹೇಳಿತು. ಟಾಟಾ ಸನ್ಸ್‌, ಸ್ಪೈಸ್‌ಜೆಟ್‌, ಏರ್‌ ಇಂಡಿಯಾ ಉದ್ಯೋಗಿಗಳ ಒಂದು ವಿಭಾಗ ಮತ್ತು ಅಮೆರಿಕ ಮೂಲದ ಹಣಕಾಸು ಹೂಡಿಕೆ ಸಂಸ್ಥೆ ಇಂಟರ್‌ಅಫ್ಸ್‌ ಇಂಕ್‌ ಬಿಡ್‌ ಮಾಡಿದವು.

2021: ಏಪ್ರಿಲ್‌ನಲ್ಲಿ ಕೇಂದ್ರವು ಟಾಟಾ ಸನ್ಸ್‌ ಮತ್ತು ಸ್ಪೈಸ್‌ಜೆಟ್‌ಗೆ ಅಂತಿಮ ಬಿಡ್‌ ಸಲ್ಲಿಸುವಂತೆ ಕೇಳಿತು. ಅಕ್ಟೋಬರ್‌ನಲ್ಲಿ ಪ್ರಕ್ರಿಯೆ ಪೂರ್ಣಗೊಂಡು, ಟಾಟಾ ಸನ್ಸ್‌ ಗೆದ್ದುಕೊಂಡಿತು.

​ಇಂಡಿಯನ್‌ ಏರ್‌ಲೈನ್ಸ್‌

ಇಂಡಿಯನ್‌ ಏರ್‌ಲೈನ್ಸ್‌ಗೆ ಕೂಡ ಭವ್ಯ ಹಿನ್ನೆಲೆಯಿದೆ. 1966ರ ಹೊತ್ತಿಗೆ, ಇಂಡಿಯನ್‌ ಏರ್‌ಲೈನ್ಸ್‌ನ 100 ವಿಮಾನಗಳು ಪ್ರತಿದಿನ 36,000 ಕಿ.ಮೀ. ಹಾರಾಡುತ್ತಿದ್ದವು. ವಾರ್ಷಿಕವಾಗಿ ಹತ್ತು ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದವು. ವಿಶ್ವದ ಅತಿದೊಡ್ಡ ದೇಶೀ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿತ್ತು. 1969-70ರಲ್ಲಿ ವಿದೇಶಿ ವಿನಿಮಯದಲ್ಲಿ 8.50 ಕೋಟಿ ರೂ. ಗಳಿಸಿತ್ತು. 1999ರಲ್ಲಿ ದಿಲ್ಲಿ ಮತ್ತು ಮುಂಬೈ ನಡುವೆ ಮೆಟ್ರೋ ವಿಮಾನವನ್ನೂ ಪರಿಚಯಿಸಿತು. 2007ರಲ್ಲಿ ಸರಕಾರ ಇದನ್ನು ಏರ್‌ ಇಂಡಿಯಾ ಜೊತೆ ವಿಲೀನಗೊಳಿಸಿತು.

​ಟಾಟಾ ಗ್ರೂಪ್‌ ಪಡೆದುದೇನು?

ಬಿಡ್‌ನಲ್ಲಿ ಗೆದ್ದ ಟಾಟಾ ಗ್ರೂಪ್‌ ಭಾರತದ ಏರ್‌ಪೋರ್ಟ್‌ಗಳಲ್ಲಿ 4,400 ಸ್ಲಾಟ್‌ಗಳು ಹಾಗೂ ವಿದೇಶ ಹಾರಾಟದ 2,700 ಸ್ಲಾಟ್‌ಗಳನ್ನು ಪಡೆಯಲಿದೆ. ಸ್ಲಾಟ್‌ಗಳೆಂದರೆ ನಿಗದಿತ ಆಗಮನ ಹಾಗೂ ನಿರ್ಗಮನ ಸಮಯಗಳು. 1,500 ಪರಿಣತ ಪೈಲಟ್‌ಗಳು, 2,000 ಎಂಜಿನಿಯರ್‌ಗಳು ಸಂಸ್ಥೆಯಲ್ಲಿದ್ದಾರೆ. ಟಾಟಾ ಸನ್ಸ್‌ ಗ್ರೂಪ್‌ ಈಗಾಗಲೇ ಎರಡು ವಿಮಾನಯಾನ ಕಂಪನಿಗಳನ್ನು ಹೊಂದಿದೆ- ಏರ್‌ ಏಷ್ಯಾ ಹಾಗೂ ವಿಸ್ತಾರ. ಇವುಗಳ ಜೊತೆಗೆ ಏರ್‌ ಇಂಡಿಯಾವನ್ನು ವಿಲೀನಗೊಳಿಸಬಹುದು. ಆದರೆ ಏರ್‌ ಇಂಡಿಯಾದಲ್ಲಿ ಈಗಾಗಲೇ ಇರುವ ಸರಕಾರಿ ಮನೋಧರ್ಮದ ಸಿಬ್ಬಂದಿ, ಅಧಿಕಾರಿಗಳು ಇದರಲ್ಲಿ ಹೇಗೆ ಸಹಕರಿಸುತ್ತಾರೋ ತಿಳಿಯದು. ಅಥವಾ ಏರ್‌ ಇಂಡಿಯಾದ ಹೆಸರೇ ಅದರ ಬ್ರಾಂಡ್‌ ಆಗಿರುವುದರಿಂದ, ಹಾಗೇ ಇಟ್ಟುಕೊಳ್ಳಲೂಬಹುದು.

ದೊಡ್ಡ ಮೊತ್ತದ ಸಾಲದ ಸಮಸ್ಯೆಯನ್ನು ಪರಿಹರಿಸುವ ಸವಾಲು ಟಾಟಾಗಳಿಗೆ ಎದುರಾಗಲಿದೆ. ಟಾಟಾ ಸನ್ಸ್‌ ಮಾಲೀಕರಾಗಿರುವ ರತನ್‌ ಟಾಟಾ ಅವರೇ ಸಮಗ್ರ ಹೊಣೆಯನ್ನು ಹೊತ್ತುಕೊಳ್ಳಲಿದ್ದಾರೆ. ತಮ್ಮ ತಾತ ಜೆಆರ್‌ಡಿ ಟಾಟಾ ಅವರಂತೆಯೇ ರತನ್‌ ಅವರಿಗೂ ವಾಯುಯಾನ ವಲಯ ಅತ್ಯಂತ ಇಷ್ಟ. ಆದರೆ ಭಾರತದಲ್ಲಿ ಪ್ರಭಾವಿಯಾಗಿರುವ ಇಂಡಿಗೋ ಹಾಗೂ ಸ್ಪೈಸ್‌ಜೆಟ್‌ಗಳ ಪೈಪೋಟಿಯನ್ನು ಸಂಸ್ಥೆ ಎದುರಿಸಬೇಕಾಗಿದೆ. ಏರ್‌ ಇಂಡಿಯಾದಲ್ಲಿ ಟಾಟಾ ಸಮೂಹ ಪ್ರಯಾಣಿಕರಿಗೆ ಭೋಜನ ಸೇವೆಯನ್ನು ವಿಸ್ತರಿಸಿದ್ದು, ಸ್ವಾಧೀನದ ನಂತರ ಸೇವೆಗಳ ಗುಣಮಟ್ಟ ವೃದ್ಧಿಸುವ ಮೊದಲ ಹೆಜ್ಜೆ ಇಟ್ಟಿದೆ.

​ನಷ್ಟ ಸಂಭವಿಸಿದ್ದು ಏಕೆ?

ಒಂದು ಕಾಲದಲ್ಲಿ ಏರ್‌ ಇಂಡಿಯಾ ಭಾರತೀಯ ಹಾಗೂ ಏಷ್ಯಾದ ವಿಮಾನಯಾನ ಕ್ಷೇತ್ರದ ‘ಮಹಾರಾಜ’ ಎನಿಸಿಕೊಂಡಿತ್ತು (ಇದರ ಲೋಗೋದಲ್ಲಿ ಮಹಾರಾಜನಿದ್ದಾನೆ). ಆದರೆ 1990ರಿಂದ ಈಚೆಗೆ ಇದರ ಸ್ಥಿತಿ ಕೆಡತೊಡಗಿತು. ಸರಕಾರ 1994ರಲ್ಲಿ ಖಾಸಗಿ ಏರ್‌ಲೈನ್‌ಗಳಿಗೆ ಹಾರಾಟ ನಡೆಸಲು ಅನುಮತಿ ನೀಡಿತು. ಇದು ಏರ್‌ ಇಂಡಿಯಾ ಮೇಲೆ ಒತ್ತಡ ಸೃಷ್ಟಿಸಿತು. ವಾಯುಯಾನ ಕ್ಷೇತ್ರದಲ್ಲಿ ವಿಪರೀತ ಪೈಪೋಟಿ ಹೆಚ್ಚಿತು. ಅಂತಾರಾಷ್ಟ್ರೀಯ ಕಂಪನಿಗಳ ಜೊತೆಗೆ ಅಗ್ಗದ ದರದ ಆಂತರಿಕ ವಿಮಾನಯಾನ ಸಂಸ್ಥೆಗಳ ಪೈಪೋಟಿಯೂ ಸೇರಿಕೊಂಡಿತು. 1 ರೂಪಾಯಿಗೆ ವಿಮಾನ ಹಾರಾಟದ ಕನಸುಗಳನ್ನೆಲ್ಲ ಸಂಸ್ಥೆಗಳು ಬಿತ್ತಿದವು. ಕಡಿಮೆ ಟಿಕೆಟ್‌ ದರ ಹಾಗೂ ಹೆಚ್ಚಿದ ಸಿಬ್ಬಂದಿ ಸಂಬಳ, ಸವಲತ್ತುಗಳ ನಿರ್ವಹಣೆ ಮಾಡಲಾಗದೆ ಸಂಸ್ಥೆ ಸೊರಗಿತು. ಕಳಪೆ ನಿರ್ವಹಣೆ ಕೂಡ ನಷ್ಟ ಹೆಚ್ಚಿಸಿತು. ಇಂಡಿಯನ್‌ ಏರ್‌ಲೈನ್ಸ್‌ ಹಾಗೂ ಏರ್‌ ಇಂಡಿಯಾ ಸಿಬ್ಬಂದಿ ವಿಲೀನವಂತೂ ಸರಿಹೋಗಲೇ ಇಲ್ಲ.

2012ರಲ್ಲಿ ಸಂಸ್ಥೆಯನ್ನು ಜೀವಂತವಾಗಿ ಉಳಿಸಲು ಸರಕಾರ 30,000 ಕೋಟಿ ರೂ.ಗಳ ಬೇಲ್‌ಔಟ್‌ ಪ್ಯಾಕೇಜ್‌ ಘೋಷಿಸಬೇಕಾಗಿ ಬಂತು. 2015ರಲ್ಲಿ ಮತ್ತೆ 5,859 ಕೋಟಿ, 2016ರಲ್ಲಿ 3,836 ಕೋಟಿ ರೂ.ಗಳ ಪ್ಯಾಕೇಜನ್ನು ನೀಡಲಾಯಿತು. 2017ರಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ಮತ್ತು ಏರ್‌ ಇಂಡಿಯಾವನ್ನು ವಿಲೀನಗೊಳಿಸಲಾಯಿತು. ಆದರೆ ಮಹಾರಾಜನ ಆರೋಗ್ಯ ಸುಧಾರಿಸಿಕೊಳ್ಳುವ ಬದಲು ಕೆಡುತ್ತಲೇ ಹೋಯಿತು.



Read more…

[wpas_products keywords=”deal of the day”]