Karnataka news paper

ದಿಲ್ಲಿಯಿಂದ ಹೆಲಿಕಾಪ್ಟರ್ ಹಾರಾಟ ವಿಳಂಬ: ಬಿಜೆಪಿಯ ಸಂಚು ಎಂದು ಅಖಿಲೇಶ್ ಯಾದವ್ ಆರೋಪ


ಹೊಸದಿಲ್ಲಿ: ದಿಲ್ಲಿಯಿಂದ ಉತ್ತರ ಪ್ರದೇಶದ ಮುಜಫ್ಫರಪುರಕ್ಕೆ ತೆರಳಬೇಕಿದ್ದಾಗ ತಮ್ಮ ಹೆಲಿಕಾಪ್ಟರ್ ಅನ್ನು ಕೆಲ ಸಮಯ ತಡೆಹಿಡಿಯಲಾಗಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಇದು ಬಿಜೆಪಿಯ ಸಂಚು ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಹೆಲಿಕಾಪ್ಟರ್ ಅನ್ನು ಸುಮಾರು ಅರ್ಧ ಗಂಟೆ ಹಾರಾಟಕ್ಕೆ ಅವಕಾಶ ನೀಡದೆ ಆಡಳಿತಾರೂಢ ಬಿಜೆಪಿ ಅಡ್ಡಿಪಡಿಸಿತ್ತು ಎಂದು ಅವರು ಆರೋಪ ಮಾಡಿದ್ದಾರೆ. ಬಳಿಕ ಅವರು, ‘ನಾವು ವಿಜಯಕ್ಕಾಗಿ ಹಾರಾಟ ನಡೆಸಲು ಸಿದ್ಧರಾಗಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಹೊಸ ‘ಎತ್ತರ’ಕ್ಕೆ ಸಮಾಜವಾದಿ ಪಕ್ಷ!: ‘ಸೈಕಲ್’ ಏರಿದ ಭಾರತದ ಅತಿ ಎತ್ತರದ ವ್ಯಕ್ತಿ!
‘ನನ್ನ ಹೆಲಿಕಾಪ್ಟರ್ ಅನ್ನು ದಿಲ್ಲಿಯಲ್ಲಿ ಯಾವುದೇ ಕಾರಣ ಇಲ್ಲದೆಯೇ ತಡೆ ಹಿಡಿಯಲಾಗಿತ್ತು. ನನಗೆ ಮುಜಫ್ಫರ್‌ನಗರಕ್ಕೆ ಪ್ರಯಾಣಿಸಲು ಅವಕಾಶ ನೀಡಲಿಲ್ಲ. ಆದರೆ ಇಲ್ಲಿಂದ ತೆರಳಲು ಬಿಜೆಪಿ ನಾಯಕರೊಬ್ಬರಿಗೆ ಅವಕಾಶ ನೀಡಲಾಗಿತ್ತು. ಇದು ಸೋಲಿನ ಭೀತಿಯಲ್ಲಿರುವ ಬಿಜೆಪಿಯ ಸಂಚು. ಇದು ಅವರ ಹತಾಶೆಗೆ ಸಾಕ್ಷಿ’ ಎಂದು ಶುಕ್ರವಾರ ಮಧ್ಯಾಹ್ನ 2.30ರ ವೇಳೆಗೆ ಅವರು ಟ್ವೀಟ್ ಮಾಡಿದ್ದಾರೆ.

ತಾವು ಹೆಲಿಕಾಪ್ಟರ್ ಮುಂದೆ ನಿಂತಿರುವ ಫೋಟೊವನ್ನು ಅವರು ಹಂಚಿಕೊಂಡಿದ್ದಾರೆ. ಇದೆಲ್ಲವೂ ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಎದುರಾಳಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

‘ಅಧಿಕಾರದ ದುರ್ಬಳಕೆಯು ಸೋಲು ಎದುರಿಸುತ್ತಿರುವ ಜನರು ಎಸಗುತ್ತಿರುವ ದ್ರೋಹವಾಗಿದೆ. ಇದು ಸಮಾಜವಾದಿ ಪಕ್ಷದ ಹೋರಾಟದ ಇತಿಹಾಸದಲ್ಲಿ ದಾಖಲಾಗುವ ದಿನ. ನಾವು ದಿಗ್ವಿಜಯದ ಹಾರಾಟ ನಡೆಸಲು ಸಿದ್ಧರಾಗಿದ್ದೇವೆ’ ಎಂದು ಕೆಲವು ಸಮಯದ ಬಳಿಕ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಮುಜಫ್ಫರನಗರದಲ್ಲಿ ರಾಷ್ಟ್ರೀಯ ಲೋಕ ದಳದ ಜಾಟ್ ನಾಯಕ ಜಯಂತ್ ಚೌಧರಿ ಅವರು ಅಖಿಲೇಶ್ ಯಾದವ್ ಅವರನ್ನು ಸ್ವಾಗತಿಸಿದರು. ಜಂಟಿ ಸುದ್ದಿಗೋಷ್ಠಿ ನಡೆಸಿದ ಇಬ್ಬರೂ, ಕೃಷಿ ಕಾಯ್ದೆಗಳ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕೃತ, ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆಗೆ ಸ್ಪರ್ಧಿಸಲು ಅಖಿಲೇಶ್‌ ಯಾದವ್‌ ನಿರ್ಧಾರ
‘ನಮ್ಮ ಪಕ್ಷವು ಉಚಿತ ವಿದ್ಯುತ್ ಪೂರೈಕೆ, ಕನಿಷ್ಠ ಬೆಂಬಲ ಬೆಲೆ, ನೀರಾವರಿ ಸೌಲಭ್ಯಗಳು ಮತ್ತು ಬಾಕಿ ಇರುವ ಕಬ್ಬಿನ ಬೆಲೆಯನ್ನು ನೀಡುವ ಭರವಸೆ ನೀಡಿದೆ. ನಾವು ಮತ್ತೆ ಲ್ಯಾಪ್‌ಟಾಪ್‌ಗಳನ್ನು ವಿತರಿಸುತ್ತೇವೆ. ನಿಮ್ಮ ಪ್ರಣಾಳಿಕೆಯನ್ನು ಮತ್ತೊಮ್ಮೆ ಓದಿ ಎಂದು ಬಿಜೆಪಿಯವರಿಗೆ ನೆನಪಿಸುತ್ತೇನೆ. ನೀವು ನೀಡಿ ಎಲ್ಲ ಭರವಸೆಗಳೂ ಪೊಳ್ಳು. ಅವು ಮುನ್ನೆಲೆಗೆ ಬಂದಾಗ ಬೇರೆ ವಿಚಾರಗಳತ್ತ ವಿಷಯ ತಿರುಗಿಸುತ್ತೀರಿ. ಆದರೆ ಈ ಸಹೋದರತ್ವದ ನೆಲವು ಯಾವಾಗಲೂ ನಕಾರಾತ್ಮಕತೆಯನ್ನು ತಿರಸ್ಕರಿಸುತ್ತದೆ’ ಎಂದು ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದರು.



Read more

[wpas_products keywords=”deal of the day sale today offer all”]