ಮೈಸೂರಿಗೆ ಆಗಮಿಸುವ ಪ್ರವಾಸಿಗರ ಮನ ತಣಿಸಲೆಂದು ದಸರಾ ವೇಳೆ ನಗರದ ದಾಸಪ್ಪ ಸರ್ಕಲ್ ಬಳಿ ಇರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಕಚೇರಿಯಿಂದ ಆರಂಭಿಸಿದ್ದ ಡಬ್ಬಲ್ ಡೆಕ್ಕರ್ ಬಸ್ಸಿಗೆ ಸದ್ಯ ಕೊರೊನಾ ಭೀತಿಯಿಂದ ಸಾರ್ವಜನಿಕರು ಬರುತ್ತಿಲ್ಲ. ಪರಿಣಾಮ ಕೇವಲ ಒಂದು ಬಸ್ ಸಂಚರಿಸುತ್ತಿದ್ದು, ಉಳಿದ 5 ಬಸ್‌ಗಳನ್ನು ಬನ್ನಿ ಮಂಟಪದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನಿಲ್ಲಿಸಲಾಗಿದೆ.
ಕೊರೊನಾ ಕಾರಣಕ್ಕೆ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಲವು ಮನೆಗಳಲ್ಲಿ ನಾಗರಿಕರು ಜ್ವರ, ಶೀತ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಇಲಾಖೆಯು ಪ್ರಯಾಣಿಕರಿಲ್ಲದೇ ನಿರೀಕ್ಷಿತ ಆದಾಯ ದೊರೆಯದೇ ನಿರ್ವಹಣೆ ಕೊರತೆ ಉಂಟಾಗಿದೆ. ಅಲ್ಲದೆ, ನಗರ ಸಾರಿಗೆ ವಿಭಾಗವನ್ನು ಗ್ರಾಮಾಂತರ ವಿಭಾಗದೊಂದಿಗೆ ವಿಲೀನಗೊಳಿಸಲಾಗಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಗುರಿಯಾಗಿಸಿಕೊಂಡು ಆರಂಭಿಸಲಾಗಿದ್ದ ಅಂಬಾರಿ ಯೋಜನೆಗೆ ಇದೀಗ ಪ್ರಯಾಣಿಕರೇ ಇಲ್ಲದೆ ಭಣಗುಡುತ್ತಿದೆ.
ಮೈಸೂರಿನಲ್ಲಿ ಒಟ್ಟು 6 ಅಂಬಾರಿ ಬಸ್‌ಗಳಿವೆ. ಆದರೆ, ಸದ್ಯಕ್ಕೆ ಕೇವಲ ಒಂದು ಬಸ್ ಸಂಚರಿಸುತ್ತಿದೆ. ಅದೂ ದಿನಕ್ಕೆ ಒಂದು ಟ್ರಿಪ್ ಮಾತ್ರ. ಕೇವಲ 6 ರಿಂದ 10 ಮಂದಿ ಸವಾರಿ ಮಾಡಿ ನಗರದ ಪ್ರಮುಖ ರಸ್ತೆ, ಪಾರಂಪರಿಕ ಕಟ್ಟಡಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಪ್ರತಿ ಟ್ರಿಪ್ ಮುಗಿಯುತ್ತಿದ್ದಂತೆಯೇ ಬಸ್ ಸ್ವಚ್ಛಗೊಳಿಸಿ ಅದನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಸವಾರಿ ಮಾಡುವವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವುದೂ ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಬಸ್ ಡ್ರೈವರ್ ನಿಗಾ ವಹಿಸುತ್ತಿದ್ದಾರೆ. ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬಂದರೆ ಮಾತ್ರ ಹೆಚ್ಚುವರಿ ಬಸ್ ತರಿಸಿ ಟ್ರಿಪ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋಯರ್ ಡೆಕ್‌ನಲ್ಲಿ 40 ಆಸನಗಳಿವೆಯಾದರೂ ಓಪನ್ ರೂಫ್ ಆಸನಗಳನ್ನು ಮಾತ್ರ ಜನರು ಆಯ್ಕೆ ಮಾಡಿಕೊಂಡು ಸಂಜೆ ಅಥವಾ ಬೆಳಗ್ಗೆ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಒಂದು ಟ್ರಿಪ್ ಪೂರ್ಣಗೊಳಿಸಲು 2 ತಾಸು ಬೇಕಿದೆ.
ಕೊರೊನಾ ತಗ್ಗಿದ ನಂತರ ಬೇಡಿಕೆ ಸಾಧ್ಯತೆ?
ದಸರಾ ವೇಳೆ ವಿದ್ಯುತ್ ದೀಪಾಲಂಕಾರವಿದ್ದ ಕಾರಣ ಅಂಬಾರಿ ಬಸ್‌ನಲ್ಲಿ ನಗರ ಸುತ್ತಲು ಭಾರಿ ಬೇಡಿಕೆ ಇತ್ತು. 6 ಬಸ್‌ಗಳೂ ಪ್ರತಿನಿತ್ಯ ಕನಿಷ್ಠ 3 ಟ್ರಿಪ್ ಮಾಡುತ್ತಿದ್ದವು. ಕೆಲವೊಮ್ಮೆ ಆಸನಗಳು ಸಿಗದೇ ಪ್ರವಾಸಿಗರು ಈ ಬಸ್ಸಿನಲ್ಲಿ ನಿಂತುಕೊಂಡೇ ವಿಹರಿಸುತ್ತಿದ್ದರು. ಹೆಚ್ಚು ಒತ್ತಡವಿಲ್ಲದೇ ಇರುವುದರಿಂದ ನಿಧಾನವಾಗಿ ಚಲಿಸುವ ಅಂಬಾರಿ ಬಸ್‌ನಲ್ಲಿ ಪ್ರಯಾಣಿಕರು ಪಾರಂಪರಿಕ ಕಟ್ಟಡ, ಸ್ಮಾರಕಗಳನ್ನು ನೋಡಿ ಖುಷಿ ಪಡುತ್ತಿದ್ದರು. ಆದರೆ, ಸದ್ಯ ಕೊರೊನಾದಿಂದ ಜನ ಆತಂಕಗೊಂಡು ಅಂಬಾರಿ ಬಸ್ ಕಡೆ ಮುಖ ಮಾಡಿಲ್ಲ. ಮುಂದಿನ ದಿನಗಳಲ್ಲಿ ಕೊರೊನಾ ಪ್ರಖರತೆ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿ ಅಂಬಾರಿಗೆ ಮತ್ತೆ ಮರುಜೀವ ಬರಬಹುದು ಎಂಬುದು ಪ್ರವಾಸೋದ್ಯ ಇಲಾಖೆ ಅಧಿಕಾರಿಗಳ ನಿರೀಕ್ಷೆ.
Read more
[wpas_products keywords=”deal of the day sale today offer all”]