ಹೈಲೈಟ್ಸ್:
- ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಸ್ಲಂ ನೋಡಿ ತಮ್ಮ ಜೀವನ ನೆನಪಿಸಿಕೊಂಡ ಮಹಿಳೆ
- ಮುಂಬಯಿಯ ಕೊಳೆಗೇರಿಗಳಲ್ಲಿ ಕಡು ಬಡತನದ ಜೀವನ ಸಾಗಿಸುತ್ತಿದ್ದ ದಿನಗಳು
- ಊಟ, ನಿದ್ದೆಗಳನ್ನು ಬಿಟ್ಟು ಕಲಿತ ಪರಿಣಾಮ ಬದುಕು ಬದಲಿಸಿಕೊಂಡ ಶಹೀನಾ
- ಬೀದಿ ಬದಿ ಮಲಗುತ್ತಿದ್ದವರದು ಈಗ, ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸ
- ಛಲ ಇದ್ದರೆ ಎಂತಹ ಸವಾಲನ್ನೂ ಎದುರಿಸಿ ಗುರಿ ತಲುಪಬಹುದು ಎಂಬುದಕ್ಕೆ ಸಾಕ್ಷಿ
ಮೈಕ್ರೋಸಾಫ್ಟ್‌ನಲ್ಲಿ ಡಿಸೈಲ್ ಲೀಡರ್ ಆಗಿರುವ ಶಹೀನಾ, ಕೊಳೆಗೇರಿಯ ಬದುಕಿನಿಂದ ರೂಪುಗೊಂಡು ಜೀವನದ ಬಗ್ಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಟ್‌ಫ್ಲಿಕ್ಸ್ ಸರಣಿಯೊಂದರಲ್ಲಿ ತಮ್ಮ ಹಳೆಯ ಮನೆಯನ್ನು ಕಂಡ ಶಹೀನಾ, ಹಿಂದಿನ ದಿನಗಳ ನೆನಪಿಗೆ ಜಾರಿದ್ದಾರೆ. “ನೆಟ್‌ಫ್ಲಿಕ್ಸ್ ಸರಣಿ ‘ಬ್ಯಾಡ್ ಬಾಯ್ ಬಿಲಿಯನೇರ್ಸ್: ಇಂಡಿಯಾ’ ಬಾಂಬೆಯ ಸ್ಲಂಗಳ ಪಕ್ಷಿನೋಟವನ್ನು ಸೆರೆ ಹಿಡಿದಿದೆ. ನಾನು ನನ್ನ ಜೀವನ ಕಟ್ಟಲು 2015ರಲ್ಲಿ ಏಕಾಂಗಿಯಾಗಿ ಹೊರಬರುವ ಮುನ್ನ ಅಲ್ಲಿಯೇ ವಾಸಿಸಿದ್ದೆ. ಈ ಚಿತ್ರಗಳಲ್ಲಿ ಕಂಡ ಮನೆಗಳಲ್ಲಿ ಒಂದು ನಮ್ಮದು” ಎಂದು ಅವರು ಬರೆದುಕೊಂಡಿದ್ದಾರೆ.
ಬಾಂದ್ರಾ ರೈಲ್ವೆ ನಿಲ್ದಾಣ ಸಮೀಪದ ದರ್ಗಾ ಗಲ್ಲಿ ಸ್ಲಂನಲ್ಲಿ ತಾವು ವಾಸಿಸಿದ್ದಾಗಿ ಶಹೀನಾ ತಿಳಿಸಿದ್ದಾರೆ. ತಮ್ಮ ತಂದೆ ಖಾದ್ಯ ತೈಲ ವ್ಯಾಪಾರಿಯಾಗಿದ್ದು, ಉತ್ತರ ಪ್ರದೇಶದಿಂದ ಮುಂಬಯಿಗೆ ತೆರಳಿದ್ದರು. ‘ಕೊಳೆಗೇರಿಯ ಜೀವನ ಬಹಳ ಕಠಿಣವಾಗಿತ್ತು. ಅತ್ಯಂತ ಕಷ್ಟಕರ ಜೀವನ ಸ್ಥಿತಿಯನ್ನು ಎದುರಿಸಿದ್ದೆ. ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯಗಳನ್ನು ಅನುಭವಿಸಿದ್ದೆ. ಆದರೆ ಇದು ಕಲಿಯುವ ನನ್ನ ಕುತೂಹಲವನ್ನೂ ಹೆಚ್ಚಿಸಿತ್ತು. ನನಗೆ ಬೇರೆಯದೇ ಜೀವನವನ್ನು ವಿನ್ಯಾಸಗೊಳಿಸಿತು’ ಎಂದು ತಿಳಿಸಿದ್ದಾರೆ.
’15ನೇ ವಯಸ್ಸಿನಲ್ಲಿ, ನನ್ನ ಸುತ್ತಲಿನ ಅನೇಕ ಮಹಿಳೆಯರು ನಿಸ್ಸಹಾಯಕರು, ಪರಾವಲಂಬಿತರು, ಶೋಷಣೆಗೆ ಒಳಗಾಗುತ್ತಿರುವವರು ಹಾಗೂ ತಮ್ಮದೇ ಆಯ್ಕೆಯ ಸ್ವತಂತ್ರ ಬದುಕನ್ನು ಅಥವಾ ತಾವು ಬಯಸಿದ ಜೀವನ ಜೀವಿಸಲು ಸಾಧ್ಯವಾಗದೆ ವಾಸಿಸುತ್ತಿದ್ದಾರೆ ಎನ್ನುವುದು ಅರ್ಥವಾಯಿತು. ನನಗಾಗಿ ಕಾದಿದ್ದ ಅದೇ ಬದುಕನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿರಲಿಲ್ಲ’ ಎಂದಿದ್ದಾರೆ.
ಶಹೀನಾ ಅವರು ಮೊದಲ ಬಾರಿಗೆ ಕಂಪ್ಯೂಟರ್ ಅನ್ನು ಕಂಡಿದ್ದು ಶಾಲೆಯಲ್ಲಿ. ಆಗಿನಿಂದಲೇ ಅದರ ಬಗ್ಗೆ ಆಕರ್ಷಿತರಾದರು. ಕಂಪ್ಯೂಟರ್‌ಗಳು ಬಹಳ ವಿಶೇಷಗಳಾಗಿರುತ್ತವೆ. ಅವುಗಳ ಮುಂದೆ ಕುಳಿತವರಿಗೆ ಅವಕಾಶಗಳು ಸಿಗುತ್ತವೆ ಎಂದು ನಂಬಿದ್ದಾಗಿ ವಿವರಿಸಿದ್ದಾರೆ.
ಆದರೆ, ಕಡುಬಡತನದ ಕಾರಣ ಅವರು ಕಂಪ್ಯೂಟರ್ ತರಗತಿಗಳ ಬದಲು ಕಸೂತಿ ಕೆಲಸ ಮಾಡುವಂತಾಯಿತು. ಇದರಿಂದ ಕಂಗೆಡಲಿಲ್ಲ. ತಂತ್ರಜ್ಞಾನದಲ್ಲಿ ವೃತ್ತಿ ಕಟ್ಟಿಕೊಳ್ಳುವ ಕನಸು ಬೆಳೆಸುತ್ತಲೇ ಹೋದರು. ಸ್ಥಳೀಯ ಕಂಪ್ಯೂಟರ್ ತರಗತಿಗೆ ಸೇರಿಕೊಳ್ಳಲು ಸಾಲ ತರುವಂತೆ ಅಪ್ಪನನ್ನು ಕಾಡಿ ಬೇಡಿದ್ದರು. ತಮ್ಮದೇ ಕಂಪ್ಯೂಟರ್ ಖರೀದಿಸಲು ಮಧ್ಯಾಹ್ನದ ಊಟಗಳನ್ನು ಬಿಟ್ಟರು, ನಡೆದುಕೊಂಡು ಓಡಾಡಲು ಆರಂಭಿಸಿದ್ದರು. ಏನೂ ಕಷ್ಟ ಬಂದರೂ ತಮ್ಮ ಗುರಿಯಿಂದ ಅವರು ವಿಮುಖರಾಗಿರಲಿಲ್ಲ.
ಹಲವು ವರ್ಷಗಳ ಕಠಿಣ ಶ್ರಮದ ನಂತರ ಕಳೆದ ವರ್ಷ, ಶಹೀನಾ ಅವರ ಕುಟುಂಬ ಉತ್ತಮ ಬೆಳಕು, ಗಾಳಿ ಮತ್ತು ಹಸಿರಿನಿಂದ ಕೂಡಿದ ಅಪಾರ್ಟ್‌ಮೆಂಟ್ ಒಂದಕ್ಕೆ ಸ್ಥಳಾಂತರ ಹೊಂದಿತು. ಬಾಲ್ಯದಲ್ಲಿ ಊಟಗಳನ್ನು ಬಿಟ್ಟು ಜೀವಿಸುತ್ತಿದ್ದ ಅವರ ಪಾಲಿಗೆ ಇದು ಬಹುದೊಡ್ಡ ಹಂತವಾಗಿದೆ. ಅವರ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.
‘ನನ್ನ ತಂದೆ ಸಣ್ಣ ಕೈಗಾಡಿ ವ್ಯಾಪಾರಿಯಾಗಿ, ರಸ್ತೆ ಬದಿಯಲ್ಲಿ ಮಲಗುವ ಜೀವನದಿಂದ, ಈಗಿನ ಬದುಕು ಕೇವಲ ಕನಸಾಗಿತ್ತು. ಅದೃಷ್ಟ, ಶ್ರಮ ಮತ್ತು ಹೋರಾಟಗಳು ಮುಖ್ಯವಾಗುತ್ತವೆ’ ಎಂದು ಶಹೀನಾ ಬರೆದುಕೊಂಡಿದ್ದಾರೆ.
ತಮ್ಮ ಜೀವನವನ್ನು ಎತ್ತರಕ್ಕೆ ಕೊಂಡೊಯ್ದ ಶಹೀನಾ, ತಮ್ಮಂತೆಯೇ ಕಷ್ಟದಲ್ಲಿರುವ ಯುವತಿಯರಿಗೆ ಕೆಲವು ಸಲಹೆಗಳನ್ನು ನೀಡುತ್ತಾರೆ. ಏನೇ ಬಂದರೂ ಶಿಕ್ಷಣ, ಕೌಶಲ ಮತ್ತು ವೃತ್ತಿ ಪಡೆಯುವುದನ್ನು ಬಿಡಬೇಡಿ. ಯುವ ಮಹಿಳೆಯರಿಗೆ ಇದು ದೊಡ್ಡ ಬದಲಾವಣೆ ನೀಡುತ್ತದೆ’ ಎಂದು ಹೇಳಿದ್ದಾರೆ.
ತಮ್ಮ ಬರಹದಲ್ಲಿ ಅವರು ತಂದೆಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಕುಟುಂಬದ ಉತ್ತಮ ಜೀವನಕ್ಕಾಗಿ ತ್ಯಾಗ ಮಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಅವರಿಗೆ ಯಾವುದೇ ಶಿಕ್ಷಣ ಇಲ್ಲ. ಆದರೆ ಅವರ ಪರಿಶ್ರಮವು ಎಲ್ಲವನ್ನೂ ಬದಲಿಸಿತು. ಸ್ಲಂನಲ್ಲಿ ದಶಕಗಳವರೆಗೆ ಬದುಕಿದ ನಂತರ, ಅವರ ತಾಳ್ಮೆ ಮತ್ತು ತ್ಯಾಗ ನಮಗೆ ಉತ್ತಮ ಜೀವನ ಸಿಗಲು ಸಹಾಯ ಮಾಡಿತು ಎಂದು ತಿಳಿಸಿದ್ದಾರೆ. ಶಹೀನಾ ಅವರ ಸ್ಫೂರ್ತಿದಾಯಕ ಬದುಕಿನ ಕಥೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
Read more
[wpas_products keywords=”deal of the day sale today offer all”]