ಹೈಲೈಟ್ಸ್:
- ನಿರ್ದೇಶಕ, ನಿರ್ಮಾಪಕ ಕಟ್ಟೆ ರಾಮಚಂದ್ರ ನಿಧನ
- ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಟ್ಟೆ ರಾಮಚಂದ್ರ
- ‘ವೈಶಾಖ ದಿನಗಳು’ ಚಿತ್ರವನ್ನು ನಿರ್ದೇಶನ ಮಾಡಿದ್ದ ಕಟ್ಟೆ ರಾಮಚಂದ್ರ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಟ್ಟೆ ರಾಮಚಂದ್ರ ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕಟ್ಟೆ ರಾಮಚಂದ್ರ ಚಿರನಿದ್ರೆಗೆ ಜಾರಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕಟ್ಟೆ ರಾಮಚಂದ್ರ ಅನೇಕ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಕೆಲ ಸಿನಿಮಾಗಳು ಹಾಗೂ ಸೀರಿಯಲ್‌ಗಳನ್ನೂ ಕಟ್ಟೆ ರಾಮಚಂದ್ರ ಅವರು ನಿರ್ಮಾಣ ಮಾಡಿದ್ದರು.
ಕಟ್ಟೆ ರಾಮಚಂದ್ರ ಅವರ ಕುರಿತು
ಕಟ್ಟೆ ರಾಮಚಂದ್ರ ಅವರು ಹುಟ್ಟಿದ್ದು ಫೆಬ್ರವರಿ 15, 1947 ರಂದು. ಚಿತ್ರರಂಗಕ್ಕೆ ಕಾಲಿಟ್ಟ ಕಟ್ಟೆ ರಾಮಚಂದ್ರ ‘ವೈಶಾಖ ದಿನಗಳು’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ 1993ರ ಏಪ್ರಿಲ್‌ನಲ್ಲಿ ತೆರೆಕಂಡಿತ್ತು. ‘ವೈಶಾಖ ದಿನಗಳು’ ಸಿನಿಮಾದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಟಿಸಿದ್ದರು. ‘ಅರಿವು’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಟ್ಟೆ ರಾಮಚಂದ್ರ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.
‘ಮನೆ ಮನೆ ಕಥೆ’, ‘ಅಲೆಗಳು’ ಸೇರಿದಂತೆ ಕೆಲ ಧಾರಾವಾಹಿಗಳನ್ನೂ ಕಟ್ಟೆ ರಾಮಚಂದ್ರ ನಿರ್ಮಿಸಿದ್ದಾರೆ. ‘ಒಂದು ಪ್ರೇಮದ ಕಥೆ’, ‘ಪ್ರೇಮ ಮತ್ಸರ’, ‘ಗ್ರಹಣ’, ‘ನಮ್ಮಮ್ಮ ತಾಯಿ ಅಣ್ಣಮ್ಮ’ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಕಟ್ಟೆ ರಾಮಚಂದ್ರ ಅಭಿನಯಿಸಿದ್ದಾರೆ. ‘ಚೋಮನ ದುಡಿ’, ‘ಘಟಶ್ರಾದ್ಧ’, ‘ಗೀಜಗನ ಗೂಡು’ ಮುಂತಾದ ಸಿನಿಮಾಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು ಕಟ್ಟೆ ರಾಮಚಂದ್ರ.
ಕಟ್ಟೆ ರಾಮಚಂದ್ರ ಅವರ ಅಂತ್ಯಸಂಸ್ಕಾರ ಇಂದು ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಟ್ಟೆ ರಾಮಚಂದ್ರ ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ.
Read more
[wpas_products keywords=”deal of the day sale today offer all”]