Karnataka news paper

ಝುಕರ್‌ಬರ್ಗ್‌ ಹಿಂದಿಕ್ಕಿದ ವಾರೆನ್‌ ಬಫೆಟ್‌, ಮೌಲ್ಯಯುತ ಹೂಡಿಕೆಯ ಶಕ್ತಿ ತೆರೆದಿಟ್ಟ 91ರ ಹಿರಿಯಜ್ಜ!


ಹೂಡಿಕೆ ದಿಗ್ಗಜ ವಾರೆನ್ ಬಫೆಟ್ ಮತ್ತೊಮ್ಮೆ ಫೇಸ್‌ಬುಕ್‌ನ ಮಾರ್ಕ್ ಝುಕರ್‌ಬರ್ಗ್‌ಗಿಂತ ಶ್ರೀಮಂತರಾಗಿ ಮೂಡಿ ಬಂದಿದ್ದಾರೆ. ಈ ಮೂಲಕ ಮಗದೊಮ್ಮೆ ಅವರು ಮೌಲ್ಯಯುತ ಹೂಡಿಕೆ ವಿಧಾನದ ನಿರಂತರ ಶಕ್ತಿಯನ್ನು ನೆನಪಿಸಿದ್ದಾರೆ.

ಟೆಕ್ ಕಂಪನಿಗಳ ಷೇರುಗಳು ಈ ವಾರ ತೀವ್ರ ಕುಸಿತ ಕಂಡ ಪರಿಣಾಮ ಈ ಬೆಳವಣಿಗೆ ನಡೆದಿದೆ. ಟೆಕ್‌ ಕಂಪನಿಗಳ ಷೇರುಗಳು ನೆಲಕಚ್ಚಿದ ಪರಿಣಾಮ ಸಿಲಿಕಾನ್ ವ್ಯಾಲಿಯ ಶ್ರೀಮಂತರು ಸುಮಾರು 50 ಬಿಲಿಯನ್ ಡಾಲರ್‌ ನಷ್ಟ ಅನುಭವಿಸಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯವು ಗುರುವಾರ ಒಂದೇ ದಿನ 25.8 ಬಿಲಿಯನ್‌ ಡಾಲರ್‌ ಕುಸಿತ ಕಂಡಿದ್ದು, ಇದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಇತಿಹಾಸದಲ್ಲಿಯೇ ಒಂದೇ ದಿನದಲ್ಲಿ ಸಂಭವಿಸಿದ ನಾಲ್ಕನೇ ಅತೀ ದೊಡ್ಡ ಕುಸಿತವಾಗಿದೆ. ಈ ವರ್ಷ ಎಲಾನ್‌ ಮಸ್ಕ್‌ ಆಸ್ತಿಯಲ್ಲಿ 54 ಬಿಲಿಯನ್ ಡಾಲರ್‌ ಕುಸಿತವಾಗಿದೆ. ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನ ಸಹ ಸಂಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಅವರ ಸಂಪತ್ತು 2022ರಲ್ಲಿ ಶೇ. 12 ಅಥವಾ 15 ಬಿಲಯನ್‌ ಡಾಲರ್‌ ಕುಸಿತ ಕಂಡಿದೆ.

ಆದರೆ ಇದೇ ವೇಳೆ ಬರ್ಕ್‌ಶೈರ್‌ ಹಾಥ್‌ವೇ ಸಂಸ್ಥೆಯ ವಾರೆನ್‌ ಬಫೆಟ್ ಅವರ ಆಸ್ತಿ ಮೌಲ್ಯವು ಈ ವರ್ಷ 2.4 ಬಿಲಿಯನ್‌ ಡಾಲರ್‌ ಏರಿಕೆಯಾಗಿದ್ದು, 111.3 ಬಿಲಿಯನ್‌ ಡಾಲರ್‌ಗೆ ಮುಟ್ಟಿದೆ. ಸದ್ಯ ಅವರು ಮಾರ್ಕ್‌ ಝುಕರ್‌ಬರ್ಗ್‌ಗೆ ಹೋಲಿಸಿದರೆ 1 ಬಿಲಿಯನ್‌ ಡಾಲರ್‌ ಹೆಚ್ಚಿನ ಆಸ್ತಿ ಹೊಂದಿದ್ದು, ಬ್ಲೂಮ್‌ಬರ್ಗ್ ಸೂಚ್ಯಂಕದಲ್ಲಿ ಕಳೆದ ಮಾರ್ಚ್‌ ನಂತರ ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ.

‘ಮೌಲ್ಯಯುತ ಷೇರುಗಳು’ ವಾರೆನ್‌ ಬಫೆಟ್‌ ಅವರ ಬರ್ಕ್‌ಶೈರ್ ಹಾಥ್‌ವೇ ಇಂಕ್‌ನ ಸರಳ ಸೂತ್ರ ಎಂದರೂ ತಪ್ಪಲ್ಲ. ಈ ವರ್ಷದ ಆರಂಭದಿಂದ ಬರ್ಕ್‌ಶೈರ್‌ ಹಾಥ್‌ವೇ ಟೆಕ್ ಸಂಸ್ಥೆಗಳು ಮತ್ತು ಎಸ್‌&ಪಿ 500 ಸೂಚ್ಯಂಕಕ್ಕಿಂತ ಉತ್ತಮ ಪ್ರದರ್ಶನ ನೀಡಿದೆ. ಈ ವರ್ಷ ಎಸ್‌&ಪಿ ಸೂಚ್ಯಂಕ ಶೇ. 9.2ರಷ್ಟು ನಷ್ಟ ಅನುಭವಿಸಿದ್ದರೆ, ಟೆಕ್‌ ಕಂಪನಿಗಳ ಷೇರುಗಳು ಶೇ. 15ರಷ್ಟು ಕುಸಿತ ಕಂಡಿವೆ. ಇದಕ್ಕೆ ಹೋಲಿಸಿದರೆ ಬರ್ಕ್‌ಶೈರ್‌ ಹಾಥ್‌ವೇ ಕೇವಲ ಶೇ. 4.2ರಷ್ಟು ಕುಸಿತವಷ್ಟೇ ದಾಖಲಿಸಿದೆ.

ವಿಶ್ವದ ಟಾಪ್‌ 10 ಶ್ರೀಮಂತರಲ್ಲಿ ಈ ವರ್ಷ ಸಂಪತ್ತು ಹೆಚ್ಚಿಸಿಕೊಂಡ ಏಕೈಕ ವ್ಯಕ್ತಿಯೆಂದರೆ ಅದು 91 ವರ್ಷದ ವಾರೆನ್‌ ಬಫೆಟ್‌ ಮಾತ್ರ. ಅವರ ಸಂಪತ್ತಿನ ಶೇ. 98ರಷ್ಟು ಭಾಗವಾಗಿರುವ ಬರ್ಕ್‌ಷೈರ್ ಹ್ಯಾಥ್‌ವೇಯ ‘ಎ’ ಷೇರುಗಳು – ಜನವರಿ 1 ರಿಂದ ಶೇ. 2.3ರಷ್ಟು ಗಳಿಕೆ ಕಂಡಿವೆ.

ಅವರು ದೇಣಿಗೆ ನೀಡಿರುವ ಹಣದ ಮೊತ್ತವನ್ನು ಪರಿಗಣಿಸಿದಾಗ ಶತಕೋಟ್ಯಾಧಿಪತಿಗಳ ಸೂಚ್ಯಂಕದಲ್ಲಿ ಇಂದಿಗೂ ಉನ್ನತ ಸ್ಥಾನದಲ್ಲಿ ವಾರೆನ್‌ ಬಫೆಟ್ ಮುಂದುವರಿದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಕಾರಣ 2006 ರಿಂದ ಅವರು ಬಿಲ್ & ಮೆಲಿಂದಾ ಗೇಟ್ಸ್ ಫೌಂಡೇಶನ್‌ಗೆ ಸುಮಾರು 33 ಬಿಲಿಯನ್‌ ಡಾಲರ್‌ ಮೌಲ್ಯದ ಬರ್ಕ್‌ಶೈರ್‌ ಹಾಥ್‌ ವೇ ಷೇರುಗಳನ್ನು ನೀಡಿದ್ದಾರೆ. ಪ್ರಸ್ತುತ ಬಿಲ್‌ ಗೇಟ್ಸ್ ಮಾತ್ರ ಈ ಪ್ರಮಾಣದ ದೇಣಿಗೆಯನ್ನು ನೀಡಿಯೂ 127 ಬಿಲಿಯನ್ ಡಾಲರ್‌ ಸಂಪತ್ತಿನೊಂದಿಗೆ ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಫೆಡರಲ್ ರಿಸರ್ವ್‌ನಿಂದ ನಿರೀಕ್ಷಿತ ಬಿಗಿ ಕ್ರಮಗಳಿಗೆ ಷೇರು ಮಾರುಕಟ್ಟೆಗಳು ಪ್ರತಿಕ್ರಿಯಿಸುತ್ತಿರುವುದರಿಂದ ಮತ್ತು ಹಣದುಬ್ಬರ ಕಳೆದ ನಾಲ್ಕು ದಶಕಗಳಲ್ಲೇ ಗರಿಷ್ಠ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ವಿಶ್ವದ 500 ಶ್ರೀಮಂತ ವ್ಯಕ್ತಿಗಳು ಜನವರಿ 1 ರಿಂದ ಒಟ್ಟು 635 ಬಿಲಿಯನ್‌ ಡಾಲರ್‌ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more…

[wpas_products keywords=”deal of the day”]