Karnataka news paper

ಬಜೆಟ್‌ ಮೇಲೆ ಕಾಫಿ ಬೆಳೆಗಾರರ ಕಣ್ಣು; ಬೆಂಬಲ ಬೆಲೆ, ಶೇ.3ರ ಬಡ್ಡಿಯಂತೆ ಹೊಸ ಸಾಲ, ಬೆಳೆ ವಿಮೆಗೆ ಆಗ್ರಹ


ಹೈಲೈಟ್ಸ್‌:

  • ಕಾಫಿಗೂ ಬೆಂಬಲ ಬೆಲೆ ಕೊಡುವಂತೆ ಬಜೆಟ್‌ಗೂ ಮುನ್ನ ಬೆಳೆಗಾರರ ಮನವಿ
  • ಶೇ.3ರ ಬಡ್ಡಿಯಂತೆ ಹೊಸ ಸಾಲ, ಬೆಳೆ ವಿಮೆಗೆ ಒತ್ತಾಯ
  • ಬಜೆಟ್‌ನಲ್ಲಿ ಕೊಡುಗೆ ಪ್ರಕಟಿಸಲು ಕೇಂದ್ರ, ರಾಜ್ಯದ ಪ್ರಮುಖರಿಗೆ ಬೆಳೆಗಾರರ ಮನವಿ

  • ಸುನಿಲ್‌ ಪೊನ್ನೇಟಿ ಮಡಿಕೇರಿ

ಕೇಂದ್ರ ಮತ್ತು ರಾಜ್ಯ ಸರಕಾರದ ಬಜೆಟ್‌ ಮೇಲೆ ಕಾಫಿ ಬೆಳೆಗಾರರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಾಕೃತಿಕ ವಿಕೋಪ, ಕೊರೊನಾ ಸಂಕಷ್ಟದ ಜೊತೆಗೆ ಇನ್ನೊಂದಿಷ್ಟು ಸಮಸ್ಯೆಗಳು ಸೇರಿಕೊಂಡು ಬೆಳೆಗಾರರ ಬದುಕಿನ ಮೇಲೆ ಬರೆ ಎಳೆದಿದ್ದು, ಸಹಜವಾಗಿ ಬಜೆಟ್‌ ಕಡೆ ನೋಡುವಂತಾಗಿದೆ.

ಕಾಫಿ ಬೆಳೆಗಾರರು ಮತ್ತು ಪೂರಕ ಸಂಘಟನೆಗಳ ಪದಾಧಿಕಾರಿಗಳು ಸಾಮಾನ್ಯವಾಗಿ ಬಜೆಟ್‌ಗಿಂತಲೂ ಮುಂಚೆ ಸರಕಾರ ಮತ್ತು ಆಡಳಿತ ವ್ಯವಸ್ಥೆಯ ಪ್ರಮುಖರನ್ನು ಭೇಟಿಯಾಗಿ ತಮ್ಮ ಸಂಕಷ್ಟಗಳನ್ನು ಅವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ಈ ಬಾರಿಯೂ ಕೇಂದ್ರ ಹಣಕಾಸು ಸಚಿವರು, ಕೈಗಾರಿಕೆ ಸಚಿವರು, ಮುಖ್ಯಮಂತ್ರಿ, ಸಂಸದ, ವಿವಿಧ ಸಚಿವಾಲಯಗಳ ಮುಖ್ಯಕಾರ್ಯದರ್ಶಿಗಳ ಬಳಿಗೆ ತೆರಳಿ ಎಂದಿನಂತೆ ತಮ್ಮ ಮನವಿ ಸಲ್ಲಿಸಿ ಬಂದಿದ್ದಾರೆ.

“ಕೇಳಿದ್ದೆಲ್ಲಾ ಸಿಗುವುದಿಲ್ಲವಾದರೂ ಈಗಿನ ಸಂದರ್ಭದಲ್ಲಿ ಸರಕಾರದಿಂದ ಅನುಕೂಲಕರ ನಿರ್ಧಾರಗಳು ಪ್ರಕಟವಾದಷ್ಟೂ ನಾವು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ,” ಎನ್ನುತ್ತಾರೆ ಕಾಫಿ ಬೆಳೆಗಾರ ಸಂಘಟನೆಯ ಪ್ರಮುಖರು. “ಈ ವರ್ಷ ಕಾಫಿಗೆ ಉತ್ತಮ ಎನ್ನಬಹುದಾದ ಬೆಲೆ ಇದ್ದರೂ ತೋಟದ ನಿರ್ವಹಣಾ ವೆಚ್ಚ ಗಮನಿಸಿದರೆ ಈ ದರ ಏನೇನೂ ಸಾಲದು,” ಎನ್ನುವುದು ಕಾಫಿ ಬೆಳೆಗಾರರ ಅಭಿಪ್ರಾಯ. ಹಾಗಾಗಿಯೇ ಬಜೆಟ್‌ ಮೇಲೆ ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.

2016ರಿಂದ ಈಚೆಗೆ ಪ್ರಾಕೃತಿಕ ವಿಕೋಪ ಕಾಫಿ ಬೆಳೆಗಾರರನ್ನು ಕಾಡುತ್ತಿದೆ. 2 ವರ್ಷ ಸರಿಯಾಗಿ ಮಳೆಯಾಗದೆ ಫಸಲು ಕೈಕೊಟ್ಟರೆ, 2018ರಿಂದ ಈಚೆಗೆ ಅತಿವೃಷ್ಟಿಯಿಂದಾಗಿ ಬಹುತೇಕ ಪ್ರದೇಶಗಳಲ್ಲಿ ಕಾಫಿ ತೋಟಗಳೇ ನಾಶವಾಗಿವೆ. 2021ರಲ್ಲಂತೂ ವರ್ಷಪೂರ್ತಿ ಸುರಿದ ಮಳೆಯಿಂದಾಗಿ ಕಾಫಿ ನಿರೀಕ್ಷಿತ ಇಳುವರಿ ಸಿಗಲಿಲ್ಲ. ಹಾಗಾಗಿಯೇ ಈಗ ಬೆಲೆ ಇದ್ದರೂ ಬೆಳೆ ಇಲ್ಲದಂತಾಗಿದೆ.

ಕಾಫಿ ಬೆಳೆಗಾರರ ಪ್ರಮುಖ ಬೇಡಿಕೆಗಳೇನು?

* ಬೆಳೆಗಾರರು ಮಾಡಿರುವ ಎಲ್ಲಾ ರೀತಿಯ ಸಾಲ ಅಥವಾ ಬಡ್ಡಿ ಮನ್ನಾ ಮಾಡಬೇಕು.

* ಬೆಳೆಗಾರರ ಶೇ. 3 ರ ಬಡ್ಡಿ ಅನ್ವಯದ ಸಾಲದ ಪಾವತಿ ಅವಧಿ ಮತ್ತಷ್ಟು ವರ್ಷಗಳಿಗೆ ವಿಸ್ತರಿಸಬೇಕು.

* ಶೇ. 3ರ ಬಡ್ಡಿಯಂತೆ ಬೆಳೆಗಾರರಿಗೆ ಮತ್ತೆ ಹೊಸದಾಗಿ ಸಾಲ ಸಿಗಬೇಕು.

* ಬೆಳೆಗಾರರ ಎಲ್ಲಾ ರೀತಿಯ ಸಾಲಗಳಿಗೂ ಶೇ. 3ರ ಬಡ್ಡಿ ದರ ನಿಗದಿ ಮಾಡಬೇಕು.

* ಕಾಫಿ ಬೆಳೆಗಾರರನ್ನೂ ಫಸಲ್‌ ಭೀಮಾ ಯೋಜನೆಗೆ ಸೇರಿಸಬೇಕು.

* 10 ಹೆಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಕೊಡಬೇಕು.

* ಕಾಫಿಗೂ ಬೆಂಬಲ ಬೆಲೆ ಘೋಷಿಸುವಂತಾಗಬೇಕು.

ಕರಿಮೆಣಸಿಗೆ ಸ್ಥಿರಬೆಲೆ ಅಗತ್ಯ

ಕಪ್ಪು ಚಿನ್ನ ಎಂದು ಕರೆಯಲಾಗುವ ಕರಿಮೆಣಸನ್ನು ಕಾಫಿ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯಲಾಗುತ್ತದೆ. ಸಾಕಷ್ಟು ಸಂದರ್ಭಗಳಲ್ಲಿ ಕರಿಮೆಣಸು ಕಾಫಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದೆ. ಉತ್ತಮ ಬೆಲೆಯಿದ್ದರೆ ಸಂಪೂರ್ಣ ತೋಟದ ನಿರ್ವಹಣೆಗೆ ಮೆಣಸಿನಿಂದ ಸಿಗುವ ಹಣವೇ ಸಾಕಾಗುತ್ತದೆ. ಆದರೆ, ಕರಿಮೆಣಸಿಗೆ ಈಗಲೂ ಸ್ಥಿರವಾದ ಒಳ್ಳೆಯ ಬೆಲೆ ಇಲ್ಲ. ಕಳ್ಳದಾರಿಯಿಂದ ನಡೆಯುವ ಆಮದು ತಡೆಯುವುದು, ನಿಯಮ ಬಾಹಿರ ದಂಧೆಗಳಿಗೆ ಕಡಿವಾಣ ಹಾಕುವ ಮೂಲಕ ಕರಿಮೆಣಸು ಬೆಲೆ ಸ್ಥಿರತೆ ಕಾಪಾಡಬಹುದಾಗಿದೆ.

2016ರಿಂದ ಈಚೆಗೆ ಕಾಫಿ ಬೆಳೆಗಾರರು ದೊಡ್ಡ ಮಟ್ಟದಲ್ಲಿ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ನಾವು ಬಜೆಟ್‌ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಾವು ಈಗಾಗಲೇ ಸಂಬಂಧಿಸಿದ ಮಂತ್ರಿಗಳು, ಮುಖ್ಯಮಂತ್ರಿ, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸಿದ್ದೇವೆ ಎನ್ನುತ್ತಾರೆ ಕೊಡಗು ಕಾಫಿ ಪ್ಲಾಂಟರ್ಸ್‌ ಅಸೋಸಿಯೇಷನ್‌ ಸಂಚಾಲಕ ಕೆ.ಕೆ.ವಿಶ್ವನಾಥ್‌.



Read more

[wpas_products keywords=”deal of the day sale today offer all”]