ಹೈಲೈಟ್ಸ್:
- ಸಿನಿಮಾ ಶೂಟಿಂಗ್‌ಗಳಿಗೆ ಶೀತಬಾಧೆ ಅಡ್ಡಿಯುಂಟು ಮಾಡಿದೆ
- ಕೆಲ ಸಿನಿಮಾಗಳ ಚಿತ್ರೀಕರಣ ಮುಂದಕ್ಕೆ ಹೋಗಿದೆ
- ಸಿನಿಮಾ ತಂಡಗಳಿಗೆ ಅನಾರೋಗ್ಯ
ರಾಜ್ಯದ ಪ್ರತಿ ಮನೆ ಮನೆಯಲ್ಲಿಯೂ ಇರುವ ಶೀತ, ಜ್ವರ ಚಿತ್ರೀಕರಣಕ್ಕೂ ತೊಂದರೆ ಕೊಟ್ಟಿದೆ. ಚಿತ್ರೀಕರಣದ ಸಮಯದಲ್ಲಿ ಹಲವು ತಂತ್ರಜ್ಞರು ಮತ್ತು ಸೆಟ್ ಹುಡುಗರ ಆರೋಗ್ಯ ಹದಗೆಟ್ಟ ಪರಿಣಾಮ ಕೆಲ ಚಿತ್ರತಂಡಗಳು ತಮ್ಮ ಚಿತ್ರೀಕರಣವನ್ನು ಮುಂದೂಡಿದ್ದಾರೆ.
ಯಾರನ್ನು ಕೇಳಿದರೂ ನೆಗಡಿ, ಕೆಮ್ಮು, ಜ್ವರ ಎಂಬ ಮಾತು ಕೇಳಿಬರುವುದು ಈಗ ಸಾಮಾನ್ಯ. ಕೆಲವರು ಕೋವಿಡ್‌ನಿಂದಾಗಿ ಮನೆಯಲ್ಲಿಯೇ ಐಸೊಲೇಟ್ ಆಗಿದ್ದಾರೆ. ಈ ಶೀತಬಾಧೆ ಚಿತ್ರೀಕರಣದ ಜಾಗಗಳಿಗೂ ವ್ಯಾಪಿಸಿದೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಚಿತ್ರೀಕರಣ ಮಾಡುತ್ತಿದ್ದ ಹಲವು ಚಿತ್ರತಂಡಗಳಿಗೂ ಈ ಅನಾರೋಗ್ಯ ತೊಂದರೆ ನೀಡಿದೆ.
‘ಮಾಫಿಯಾ’ ಮುಂದಕ್ಕೆ
ಲೋಹಿತ್ ನಿರ್ದೇಶನ ಮಾಡುತ್ತಿರುವ ‘ಮಾಫಿಯಾ’ ಸಿನಿಮಾದ ಚಿತ್ರೀಕರಣ ಕೆಲ ದಿನಗಳಿಂದ ನಡೆಯುತ್ತಿದೆ. ಈ ವಾರದ ಎಲ್ಲಾ ದಿನಗಳಲ್ಲೂ ಚಿತ್ರೀಕರಣ ಮಾಡಲು ನಿರ್ದೇಶಕರು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಸೋಮವಾರದ ಮೇಲೆ ತಂಡದ ನಾಲ್ಕೈದು ಸದಸ್ಯರಿಗೆ ಶೀತ ಮತ್ತು ಜ್ವರ ಕಾಣಿಸಿಕೊಂಡಿದೆ. ಆ ಕಾರಣಕ್ಕಾಗಿ ಈ ವಾರ ಚಿತ್ರೀಕರಣ ಮಾಡುವುದೇ ಬೇಡ ಎಂದು ತೀರ್ಮಾನಿಸಿ ಮುಂದಿನ ವಾರಕ್ಕೆ ಶೂಟಿಂಗ್ ಶೆಡ್ಯೂಲ್ ಮಾಡಲಾಗಿದೆ.
‘ನಮ್ಮ ಚಿತ್ರೀಕರಣ ಜಾಗದಲ್ಲಿ ನಾಲ್ಕೈದು ಜನರಿಗೆ ಕೆಮ್ಮು, ನೆಗಡಿ, ಜ್ವರ ಬಂತು. ಮುನ್ನೆಚ್ಚರಿಕೆಯಾಗಿ ನಾವು ಈ ವಾರದ ಚಿತ್ರೀಕರಣ ಮುಂದೂಡಿದ್ದೇವೆ. ಮುಂದಿನ ವಾರದ ಹೊತ್ತಿಗೆ ಎಲ್ಲರೂ ಚೇತರಿಸಿಕೊಳ್ಳುತ್ತಾರೆ. ಆಗ ಶೂಟಿಂಗ್ ಆರಂಭಿಸುತ್ತೇವೆ. ಸುಮ್ಮನೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಬೇಡ ಎಂದು ಈ ತೀರ್ಮಾನ ಮಾಡಿದೆವು’ ಎನ್ನುತ್ತಾರೆ ‘ಮಾಫಿಯಾ’ ನಿರ್ದೇಶಕ ಲೋಹಿತ್.
ಮುಂದಿನ ವಾರಕ್ಕೆ ‘ಬ್ಯಾಡ್ ಮ್ಯಾನರ್ಸ್’
ಸೂರಿ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಕೊನೆ ಹಂತದ ಶೂಟಿಂಗ್ ಕಳೆದ ವಾರವೇ ಆರಂಭವಾಗಬೇಕಿತ್ತು. ಅವರ ತಂಡದಲ್ಲಿಯೂ ಕೆಲ ನಟರು, ತಂತ್ರಜ್ಞರಿಗೆ ಕೆಮ್ಮು, ನೆಗಡಿ ಬಂದಿತ್ತು. ಇದರಿಂದಾಗಿ ತಕ್ಷಣವೇ ಚಿತ್ರೀಕರಣ ಆರಂಭಿಸುವ ಬದಲು ಮುಂದಿನ ತಿಂಗಳು ಚಿತ್ರೀಕರಣ ಮಾಡೋಣ ಎಂದು ಚಿತ್ರತಂಡ ನಿರ್ಧರಿಸಿ ಮುಂದೂಡಿದೆ. ‘ವರದಿಗಳ ಪ್ರಕಾರ ಫೆಬ್ರವರಿ ಮೊದಲ ವಾರದಲ್ಲಿ ಕೋವಿಡ್ ಕೇಸುಗಳ ಸಂಖ್ಯೆ ಕೂಡ ಇಳಿಮುಖವಾಗುತ್ತದೆ. ಆಗ ‘ಬ್ಯಾಡ್ ಮ್ಯಾನರ್ಸ್’ ಶೂಟಿಂಗ್ ಆರಂಭಿಸುತ್ತೇವೆ. ನನಗೂ ಕಳೆದ ವಾರ ನೆಗಡಿಯಾಗಿತ್ತು. ಮೂರು ದಿನ ಇತ್ತು, ಹೋಯಿತು. ಆದರೆ ಚಿತ್ರೀಕರಣದ ಸ್ಥಳದಲ್ಲಿ ಒಬ್ಬರಿಗೆ ಶೀತವಿದ್ದರೆ ಬೇರೆಯವರಿಗೂ ಬರುತ್ತದೆ. ಹಾಗಾಗಿ ಈ ತಿಂಗಳು ಬೇಡ ಎಂದು ನಿರ್ಧರಿಸಿದೆವು’ ಎಂದಿದ್ದಾರೆ ನಿರ್ಮಾಪಕ ಕೆ. ಎಂ. ಸುಧೀರ್.
ಮುಹೂರ್ತ ಮುಂದೂಡಿಕೆ
ಮಯೂರ ರಾಘವೇಂದ್ರ ನಿರ್ದೇಶನದ ಎರಡನೇ ಸಿನಿಮಾ ‘ಅಬಜದಬ’ದ ಮುಹೂರ್ತ 24ರಂದು ನಡೆಯಬೇಕಿತ್ತು. ಮಯೂರ ಅವರಿಗೆ ಕೋವಿಡ್ ಪಾಸಿಟಿವ್ ಬಂದು ಸೌಮ್ಯ ಲಕ್ಷಣಗಳು ಕಂಡ ಪರಿಣಾಮ ಅವರು ಐಸೊಲೇಟ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದರು. ಹಾಗಾಗಿ ಅವರ ಸಿನಿಮಾದ ಮುಹೂರ್ತ ಮುಂದಕ್ಕೆ ಹೋಗಿದೆ. ಅವರ ಸಿನಿಮಾದ ನಾಯಕ ನಟ ಪೃಥ್ವಿ ಅಂಬಾರ್ ಕೂಡ ಶೀತದಿಂದ ಅನಾರೋಗ್ಯಕ್ಕೀಡಾಗಿದ್ದರು. ಮುಂದಿನ ತಿಂಗಳು ಒಳ್ಳೆ ದಿನ ನೋಡಿ ಮುಹೂರ್ತ ಮಾಡಲಿದ್ದಾರಂತೆ ನಿರ್ದೇಶಕ ಮಯೂರ್.
‘ನಮ್ಮ ‘ಅಬಜದಬ’ 24ಕ್ಕೆ ಮುಹೂರ್ತ ಆಗಬೇಕಿತ್ತು. ನಾನು ಅನಾರೋಗ್ಯಕ್ಕೊಳಗಾದೆ. ಪೃಥ್ವಿಯವರಿಗೂ ಹುಷಾರಿರಲಿಲ್ಲ. ಹಾಗಾಗಿ ಮುಂದೂಡಿದ್ದೇವೆ. ಶೀತ ಈಗ ಸಾಮಾನ್ಯವಾಗಿದೆ. ಬಹುಶಃ ಮುಂದಿನ ತಿಂಗಳ ಹೊತ್ತಿಗೆ ಸರಿ ಹೋಗಬಹುದು’ ಎಂದಿದ್ದಾರೆ ನಿರ್ದೇಶಕ ಮಯೂರ ರಾಘವೇಂದ್ರ
ವೇದ ಅಬಾಧಿತ
ಶಿವರಾಜ್‌ಕುಮಾರ್ ನಾಯಕರಾಗಿರುವ ‘ವೇದ’ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ತಂಡ ಸುರಕ್ಷಿತವಾಗಿ ಕೋವಿಡ್ ನಿಯಮಗಳ ಜತೆ ಚಿತ್ರೀಕರಣ ಮಾಡುತ್ತಿದೆ. ಮತ್ತು ಅಲ್ಲಿರುವ ಎಲ್ಲರೂ ಸುರಕ್ಷಿತವಾಗಿರುವ ಕಾರಣ ನಿರಾತಂಕವಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಜತೆಗೆ ಶೂಟಿಂಗ್ ತಾಣ ಮತ್ತು ಚಿತ್ರತಂಡ ಉಳಿದುಕೊಂಡಿರುವ ರೂಂ ಬಿಟ್ಟರೆ ಬೇರೆ ಎಲ್ಲೂ ಹೋಗದಂತೆ ಇಡೀ ಚಿತ್ರತಂಡಕ್ಕೆ ನಿರ್ದೇಶಕರು ಕಟ್ಟಾಜ್ಞೆ ಹೊರಡಿಸಿರುವ ಪರಿಣಾಮ ತಂಡದ ಯಾರನ್ನೂ ಶೀತಭಾಧೆ ತಟ್ಟಿಲ್ಲ.
Read more
[wpas_products keywords=”deal of the day party wear dress for women stylish indian”]