Karnataka news paper

ರಾಷ್ಟ್ರೀಯ ಪಕ್ಷಗಳತ್ತ ಹೋಗಿಲ್ಲ, ಮುಂದೆಯೂ ಹೋಗಲ್ಲ: ಎಚ್‌.ಡಿ. ಕುಮಾರಸ್ವಾಮಿ


ಬೆಂಗಳೂರು: ‘ಅಧಿಕಾರಕ್ಕಾಗಿ ರಾಷ್ಟ್ರೀಯ ಪಕ್ಷಗಳ ಮನೆಬಾಗಿಲಿಗೆ ನಾನು ಈವರೆಗೆ ಹೋಗಿಲ್ಲ. ಮುಂದೆಯೂ ಹೋಗುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು, ‘ಬೇರೆ ಪಕ್ಷಗಳು ಅತಂತ್ರವಾದಾಗ ಜೆಡಿಎಸ್ ಸ್ವತಂತ್ರವಾಗುತ್ತದೆ. ಅದು ಕುಮಾರಸ್ವಾಮಿ ಸದಾಶಯ ಆಗಿರಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ಪಕ್ಷ ಅತಂತ್ರವಾಗಿಲ್ಲ. ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಾಷ್ಟ್ರೀಯ ಪಕ್ಷಗಳೇ ನಮ್ಮ ಮನೆ ಬಾಗಿಲಿಗೆ ಬಂದಿವೆ’ ಎಂದು ಹೇಳಿದರು. 

ಸಿ.ಎಂ ಪ್ರತಿನಿಧಿಸುವ ಪಕ್ಷದ ಶಾಸಕರು, ಸಚಿವರು ಸಿದ್ದರಾಮಯ್ಯ ಸಂಪರ್ಕದಲ್ಲಿದ್ದಾರೆ ಎಂದರೆ, ಅವರನ್ನು ಹದ್ದುಬಸ್ತಿನಲ್ಲಿಡಲು ಬಿಜೆಪಿ ನಾಯಕರಿಗೆ ಆಗಿಲ್ಲ ಎಂದು ಕುಟುಕಿದ ಅವರು, ‘ಬಿಜೆಪಿ ಉಳಿವಿಗೆ ಅಲ್ಲಿನ ನಾಯಕರು ಏನು ಮಾಡುತ್ತಿದ್ದಾರೋ ಅದನ್ನೇ ನಾವು ಮಾಡುತ್ತಿದ್ದೇವೆ’ ಎಂದರು. 

‘ನಮಗೂ ಸವಾಲಿದೆ. ಗುರಿ ಬಗ್ಗೆ ಸ್ಪಷ್ಟತೆ ಇದೆ. ಪ್ರತ್ಯುತ್ತರ ಕೊಡಲು ಸಿದ್ಧರಿದ್ದೇವೆ. 2023ರ ಚುನಾವಣೆಯಲ್ಲಿ 123 ಕ್ಷೇತ್ರ ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇವೆ. ಅದಕ್ಕೆ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದೇವೆ’ ಎಂದರು.

‘2023ರಲ್ಲಿ ಜೆಡಿಎಸ್ ಶಕ್ತಿ ಏನು ಎಂದು ತೋರಿಸುತ್ತೇವೆ. ನಮ್ಮನ್ನು ಬಿಟ್ಟು ಏನು ಮಾಡಲು ಆಗುವುದಿಲ್ಲ ಎಂದಷ್ಟೇ ಹೇಳಿದ್ದೆ. ಬೇರೆ ಪಕ್ಷಗಳು ಕಡಿಮೆ ಸ್ಥಾನ ಗೆದ್ದರೆ ಅವರ ಜತೆ ಸೇರಿ ಅಧಿಕಾರ ಮಾಡುತ್ತೇವೆ ಎಂದಲ್ಲ. ನನ್ನ ಹೇಳಿಕೆಯ ಬಗ್ಗೆ ಅನ್ಯ ಅರ್ಥ ಬೇಡ. ಜನರಿಗೆ ತಪ್ಪು ಸಂದೇಶ ಹೋಗುವುದು ಬೇಡ’ ಎಂದು ಸ್ಪಷ್ಟಪಡಿಸಿದರು. 

ಜೆಡಿಎಸ್ ಪ್ರಮುಖರ ಸಮಿತಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ, ಶಾಸಕರಾದ ಮಂಜುನಾಥ್, ಕೃಷ್ಣಾರೆಡ್ಡಿ, ಮುಖಂಡ ಟಿ.ಎ.ಶರವಣ ಇದ್ದರು.

ಜೆಡಿಎಸ್‌ಗೆ ನಾಲ್ವರು ಕಾರ್ಯಾಧ್ಯಕ್ಷರು?

‘ಪಕ್ಷದ ಸಂಘಟನೆ ಬಲಪಡಿಸಲು ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಪಕ್ಷದ ಪ್ರಮುಖರ ಸಮಿತಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ ಹೇಳಿದರು. ಗುರುವಾರ ಸಮಿತಿಯ ಮೊದಲ ಸಭೆ ಬಳಿಕ ಅವರು, ‘ನಾಲ್ಕೂ ದಿಕ್ಕುಗಳಲ್ಲಿ ತಳಮಟ್ಟದಿಂದ ಪಕ್ಷ ಗಟ್ಟಿಗೊಳಿಸಲು ಕಾರ್ಯಾಧ್ಯಕ್ಷರ ನೇಮಿಸಲು ಸಮಾಲೋಚನೆ ನಡೆಸಲಾಯಿತು’ ಎಂದರು.

ಮಹಿಳೆ, ಕೈಗಾರಿಕಾ ವಿಭಾಗದ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಹಾಗೂ ಬಿಬಿಎಂಪಿ ಚುನಾವಣೆಗೆ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.



Read more from source

[wpas_products keywords=”deal of the day sale today kitchen”]