The New Indian Express
ಬೆಂಗಳೂರು/ ಬೆಳಗಾವಿ: ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸರ್ಕಾರ 180 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಮಿಲಿಟರಿ ಶಾಲೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತತನಾಡಿದ ಸಿಎಂ ಬೊಮ್ಮಾಯಿ, ಸಂಗೊಳ್ಳಿ ರಾಯಣ್ಣನ ಗುಣಧರ್ಮಗಳಾದ ದೇಶಭಕ್ತಿ, ಸ್ವಾಮಿ ಭಕ್ತಿ, ನಿಷ್ಠೆ, ಧೈರ್ಯ ಶೌರ್ಯ, ಸಾಹಸ ಗುರಿಗಳನ್ನು ಪ್ರಚಲಿತ ಸಮಾಜದಲ್ಲಿ ಜೀವಂತವಾಗಿಡಲು ರಾಜ್ಯ ಸರ್ಕಾರ ಯೋಚಿಸಿದೆ. ಹೀಗಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಹಾಕಿಸಲು ಆದೇಶ ಹೊರಡಿಸಲಾಗುವುದು ಎಂದು ಪ್ರಕಟಿಸಿದರು.
ಈಗಾಗಲೇ ಸರ್ಕಾರ ಈ ಉದ್ದೇಶಕ್ಕಾಗಿ 55 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದೇ ವರ್ಷ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ರಕ್ಷಣಾ ಇಲಾಖೆ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಮಾತುಕತೆ ನಡೆದಿದೆ. ಪರಿಶೀಲನಾ ಕಾರ್ಯವೂ ನಡೆದಿದ್ದು, ರಕ್ಷಣಾ ಇಲಾಖೆ ಅದನ್ನು ಬಹುತೇಕವಾಗಿ ಮಿಲಿಟರಿ ಶಾಲೆಯಾಗಿ ಪರಿವರ್ತನೆ ಮಾಡಲಿದೆ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು 100 ಎಕರೆ ಪ್ರದೇಶದಲ್ಲಿ ಮಾಡಲಾಗುತ್ತಿದೆ ಎಂದರು.
ನವದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಯಿದೆ. ಚನ್ನಮ್ಮ ಇದ್ದ ಕಡೆ ರಾಯಣ್ಣ ಸಹ ಇರಬೇಕು. ನವದೆಹಲಿಯ ಸೂಕ್ತ ಸ್ಥಳದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಸಂಬಂಧ ಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದರು.
ಸುವರ್ಣ ಸೌಧದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ. ಮೂರ್ತಿ ಮಾಡುವವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಆದಷ್ಟು ಶೀಘ್ರದಲ್ಲಿ ಈ ಮೂರ್ತಿಗಳು ಸ್ಥಾಪನೆಯಾಗಲಿವೆ ಎಂದರು.
ಕಿತ್ತೂರು ರಾಜವಂಶದ ರಕ್ಷಣೆಗೆ ನಿಂತಿದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದ. ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಸೈನಿಕ ಶಾಲೆಯನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
Read more
[wpas_products keywords=”deal of the day”]