ಹೈಲೈಟ್ಸ್:
- ‘ಸಲಗ’, ‘ಟಗರು’ ಸಿನಿಮಾಗಳ ತಂತ್ರಜ್ಞರಿಂದ ಹೊಸ ಸಿನಿಮಾ
- ಹೊಸ ಸಿನಿಮಾದ ಟೈಟಲ್ ಘೋಷಣೆ ಮಾಡಿದ ಚಿತ್ರತಂಡ
- ನಿರ್ದೇಶಕ ಅಭಿ ಬಗ್ಗೆ ವಿಶೇಷ ಬರಹ ಬರೆದ ಮಾಸ್ತಿ
‘ಸಲಗ‘, ‘ಟಗರು‘ ಸಿನಿಮಾಗಳ ತಂತ್ರಜ್ಞರು ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ “ಸೋಮು ಸೌಂಡ್ ಇಂಜಿನಿಯರ್” ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಕುರಿತು ಸಂಭಾಷಣೆಕಾರ ಮಾಸ್ತಿ ಬರೆದ ವಿಶೇಷ ಬರಹ ಇಲ್ಲಿದೆ.
ಮಾಸ್ತಿ ಬರಹ
ಹೀಗೆ ಏಳೆಂಟು ವರುಷಗಳ ಹಿಂದೆ ಪರಿಚಿತನೊಬ್ಬನ ಮೂಲಕ ಭೇಟಿಯಾದವನೇ ಅಭಿ. ಸಿನಿಮಾದಲ್ಲಿ ಅದರಲ್ಲೂ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡ್ಬೇಕು ಅನ್ನೋ ಮಹದಾಸೆ ಇಟ್ಕೊಂಡು ಬೆಂಗಳೂರೆಂಬ ಬಾಡಿಗೆಯೂರಿಗೆ ಬಂದಂತಹ ಉತ್ತರ ಕರ್ನಾಟಕದ ಹುಡುಗ.
ಆಗ ನಮ್ಮದು ‘ಕಡ್ಡಿಪುಡಿ’ ಸಿನಿಮಾ ಶುರುವಾಗೋ ಹಂತದಲ್ಲಿತ್ತು, ಸರಿ ಬಾ ಅಂತ ಕರ್ಕೊಂಡು ಸೀದಾ ಸೂರಿಯವರ ಆಫೀಸಿಗೆ ಹೋದೆ. ಅವರಿಗೂ ಅಸಿಸ್ಟೆಂಟ್ ಡೈರೆಕ್ಟರ್‌ಗಳ ಜರೂರಿತ್ತು. ಮುಂದೆ ನಿಂತಿದ್ದವನನ್ನು…. ಸರಿ ಏನು ಓದಿದೀಯ ಅಂತ ಕೇಳಿದ್ರು , ಅಭಿ ವಿಶ್ವಾಸದಲ್ಲಿ ಡಿಎಡ್ ಅಂತ ಹೇಳಿದ, ‘ ಮೇಷ್ಟ್ರಂತೆ’ ಅಂತ ನಾನು ಉದ್ಘರಿಸಿದೆ! ಸೂರಿ ನನ್ನ ಕಡೆ ಒಂದು ವಿಲಕ್ಷಣ ನೋಟ ಬೀರಿದ್ರು. ಪಾಠ ಹೇಳ್ಕೊಡೋ ಗುರೂನೇ ಶಿಷ್ಯನಾಗಿ ಇಟ್ಕೋ ಅಂತಿದೀಯಲ್ಲ ಅನ್ನೋ ಭಾವಾರ್ಥ ಆ ಲುಕ್‌ನಲ್ಲಿತ್ತು.
ಟಗರು-ಸಲಗ ತಂಡದಿಂದ ಸಾಹಸ: ಹೊಸ ಚಿತ್ರಕ್ಕಾಗಿ ಜೊತೆಯಾದ ತಂತ್ರಜ್ಞರು
ಅಸಲಿಗೆ ಸೂರಿ ಜೊತೆ ಖುದ್ದು ಸೂರಿನೇ ಹತ್ತು ನಿಮಿಷ ಇರಲ್ಲ ಅಂತದ್ರಲ್ಲಿ ಅಭಿ ಬರೋಬ್ಬರೀ ಹತ್ತು ವರುಷಗಳ ಕಾಲ ಸೂರಿ ಜೊತೆಗಿದ್ದಿದ್ದು ನಿಜಕ್ಕೂ ಸೋಜಿಗವೇ ಸರಿ. ಸಿನಿಮಾ ಆಫೀಸಿನಲ್ಲಿ ಅಭಿ ಎಂದೂ ಕಾಲಕ್ಷೇಪ ಮಾಡಲಿಲ್ಲ ಬದಲಾಗಿ ಸಿನಿಮಾ ಎಂಬ ನಿಕ್ಷೇಪದ ಹುಡುಕಾಟದಲ್ಲಿದ್ದ. ತಾನು ಇಂದು ನಿಲ್ಲಬೇಕು ಎಂದರೆ ಓದನ್ನು ಎಂದಿಗೂ ನಿಲ್ಲಿಸಬಾರದು ಎಂದು ಮನಗಂಡಿದ್ದ ಹುಡುಗ. ಆಫೀಸಿನ ಅಲೆಮಾರಿನಲ್ಲಿದ್ದ ಪುಸ್ತಕಗಳನ್ನು ಜೊತೆಗೆ ಸೂರಿ ಬರೆದಿಡುತ್ತಿದ್ದ ಚಿತ್ರಕತೆಯನ್ನು ನನ್ನ ಸಂಭಾಷಣೆಯ ಪ್ರತಿಗಳನ್ನು ತಪ್ಪದೇ ಓದುತ್ತಿದ್ದ. ಬಿಸಿಲ ನಾಡಿನವನಾಗಿದ್ದರಿಂದ ಇವನೊಳಗೆ ಬೆಂದ ಅಕ್ಷರಗಳಿದ್ದವು ಬಿಡುವಿದ್ದಾಗಲೆಲ್ಲಾ ಪುಟಗಟ್ಟಲೇ ಬರೆಯುತ್ತಿದ್ದ. ನಾಳೆಗಳ ಕನಸುಗಳನ್ನು ಹಾಳೆಗಳಲ್ಲಿ ಬರೆದಿಡುತ್ತಿದ್ದಂತಹ ಹುಡುಗ. ಒಮ್ಮೊಮ್ಮೆ ನಮ್ಮ ಕಣ್ಣಿಗೆ ‘ಕಲಿಕೆ ಉದ್ದೇಶ ಗುರಿ’ ಯೆಂಬ ಮೂರು ವಿಕೆಟ್‌ಗಳ ಮುಂದೆ ನಿಂತ ಯುವ ಧಾಂಡಿಗನಂತೆ ಭಾಸವಾಗುತ್ತಿದ್ದ.
ತೆರೆಮೇಲೆ ಮತ್ತೆ ಒಟ್ಟಿಗೆ ಅಬ್ಬರಿಸಲಿದ್ದಾರೆ ‘ಸಲಗ’ ಖ್ಯಾತಿಯ ಸ್ಲಂ ಶೆಟ್ಟಿ & ಕೆಂಡ!
ಕಥೆ ಚರ್ಚೆ ಮಾಡ್ತಿದ್ದ ಸೂರಿಗೆ ಟೀ ತಂದು ಕೊಡೋದ್ರಿಂದ ಹಿಡಿದು ಮುಂದೊಂದು ದಿನ ಅದೇ ಸೂರಿ ಜೊತೆ ಕಥೆ ಚರ್ಚೆ ಮಾಡ್ಕೊಂಡು ಟೀ ಕುಡಿಯೋವರೆಗೂ ಬೆಳೆದಿದ್ದ. ‘ಕಡ್ಡಿಪುಡಿ’, ‘ಕೆಂಡಸಂಪಿಗೆ’, ‘ದೊಡ್ಮನೆ ಹುಡುಗ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ‘ಟಗರು’, ‘ಸಲಗ’ ಸಿನಿಮಾಗಳಿಗೆ ಸಹನಿರ್ದೇಶಕ ಆಗಿ ಕೆಲಸ ಮಾಡಿದ್ದಾನೆ. ಸಿನಿಮಾದ ಒಳ ಹೊರಗನ್ನು ಅರಿತಿದ್ದಾನೆ. ದುನಿಯಾ ವಿಜಯ್‌ಗಂತೂ ಇವನೆಂದರೆ ಪಂಚಪ್ರಾಣ ಬಾಯ್ತುಂಬ ಮೇಷ್ಟ್ರೇ ಅಂತ ಕರೆಯುತ್ತಾರೆ.
ಸಂಗೀತದಿಂದ ಯುವಹೃದಯಗಳಲ್ಲಿ ಸಂಚಲನ ಸೃಷ್ಟಿ ಮಾಡಿದ ಈ ಕಾಲದ ರಿ’ಧಮ್’ ಇರುವಂತಹ ಸಂಗೀತ ನಿರ್ದೇಶಕ ಚರಣ್ ರಾಜ್, ಮೊನಚು ಸಂಕಲನಕ್ಕೆ ಹೊಸ ವ್ಯಾಖ್ಯ ಬರೆದ ದೀಪು ಎಸ್ ಕುಮಾರ್, ಸಲಗದ ಕಣ್ಣು ಅಂತೆನಿಸಿಕೊಳ್ಳೋ ಶಿವಸೇನ, ದಣಿವರಿಯದ ನಟರಾಜ ಮೋಹನ್ ಮಾಸ್ಟರ್, ಸದ್ದು ಗುದ್ದುಗಳ ಸಾಹಸಿಗರಾದ ವಿನೋದ್, ಜಾಲಿಬಾಸ್ಟಿನ್ ಮತ್ತು ನನ್ನ ಸಂಭಾಷಣೆ ಅಭಿ ಚಿತ್ರಕ್ಕಿರುತ್ತದೆ.
ಈ ಗಟ್ಟಿ ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಹೊಸ ಕತೆಯನ್ನು ಪೆನ್ನಿಗೆ ಕಟ್ಟಿಕೊಂಡು ನಿರ್ದೇಶನಕ್ಕೆ ಚಿತ್ರಕತೆಯೊಂದಿಗೆ ಸಿದ್ದವಾಗಿದ್ದಾನೆ . “ಸೋಮು ಸೌಂಡ್ ಇಂಜಿನಿಯರ್ ” ಎಂಬ ಶೀರ್ಷಿಕೆಯನ್ನಿಟ್ಟಿದ್ದಾನೆ . ಸೂರಿ ಆ ಶೀರ್ಷಿಕೆ ಬರೆದು ಕೊಡುವುದರ ಮೂಲಕ ಶಿಷ್ಯನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ‘ಅಭಿ’ಮಾನ ಈ ಹುಡುಗನ ಮೇಲಿರಲಿ, ಅವನ ಸಿನಿಮಾ ಹೇಗಿರಬಹುದು ಎಂಬುದರ ಸಣ್ಣ ಊಹೆ ಇಲ್ಲಿದೆ.
Read more
[wpas_products keywords=”deal of the day party wear dress for women stylish indian”]