37 ವರ್ಷಗಳ ಹಿಂದೆ ನಟ ದಿವಂಗತ ಸಾಹಸಸಿಂಹ ವಿಷ್ಣುವರ್ಧನ್ ಅವರ ನಟನೆಯ ‘ಬಂಧನ’ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಕನ್ನಡ ಚಿತ್ರರಂಗದಲ್ಲಿ ಇನ್ನೂ ಹಚ್ಚಹಸಿರಾಗಿರುವ ಸಿನಿಮಾಗಳಲ್ಲಿ ಒಂದಾದ ಈ ಸಿನಿಮಾದ ಎರಡನೇ ಭಾಗದ ಮುಖಾಂತರವೇ ವಿಷ್ಣುವರ್ಧನ್ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಿರುವ ಸಿದ್ಧತೆಯನ್ನು ಆರಂಭಿಸಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ‘ಬಂಧನ–2’ರ ಮೊದಲ ಹೆಜ್ಜೆ ಇಟ್ಟಿದ್ದಾರೆ.
ವಿಷ್ಣುವರ್ಧನ್, ಸುಹಾಸಿನಿ, ಜೈಜಗದೀಶ್, ಅಶ್ವಥ್ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಮೊದಲ ಭಾಗವನ್ನು ಸಿನಿಪ್ರಿಯರು ಇನ್ನೂ ಮೆಲುಕು ಹಾಕುತ್ತಿರುತ್ತಾರೆ. ‘ಬಂಧನ’ ಮುಹೂರ್ತ ನಡೆದಿದ್ದ ಲಲಿತ್ ಅಶೋಕ್ ಹೋಟೆಲ್‌ನಲ್ಲೇ ಎರಡನೇ ಭಾಗದ ಮುಹೂರ್ತ ನಡೆದಿದೆ.
‘ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದ ಸಿನಿಮಾ ಬಂಧನ. ಪ್ರಸ್ತುತ ವಿಷ್ಣುವರ್ಧನ್ ದೈಹಿಕವಾಗಿ ಇರದೇ ಇರಬಹುದು. ಆದರೆ ಅವರು ನಮ್ಮ ಜೊತೆಗೇ ಇದ್ದಾರೆ. ಬಂಧನ–2ರಲ್ಲೂ ವಿಷ್ಣುವರ್ಧನ್ ಅವರನ್ನು ಅಲ್ಲಲ್ಲಿ ಜ್ಞಾಪಿಸುತ್ತೇವೆ. ಇದೂ ಪ್ರೇಮಕಥೆಯೇ. ಆವತ್ತು ವಿಷ್ಣುವರ್ಧನ್ ಇಲ್ಲದೇ ಬಂಧನ ಆಗುತ್ತಿರಲಿಲ್ಲ. ಎರಡನೇ ಭಾಗದಲ್ಲಿ ಆದಿತ್ಯ ಅವರು ಸುಹಾಸಿನಿ ಅವರ ಮಗನ ಪಾತ್ರವನ್ನು ಮಾಡುತ್ತಾರೆ. ಮಗುವನ್ನು ತೆಗೆದುಕೊಂಡು ಹೋಗುವಲ್ಲಿಂದ ಕಥೆ ಆರಂಭವಾಗುತ್ತದೆ’ ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.
‘ಆ್ಯಕ್ಷನ್ ಹೀರೊ ಆಗಿದ್ದ ವಿಷ್ಣುವರ್ಧನ್ ಅವರನ್ನು ಹಾಕಿಕೊಂಡು ಪ್ರೇಮಕಥೆ ಮಾಡುತ್ತಿದ್ದಾರೆ ಎಂದು ಎಲ್ಲರೂ ಆಡಿಕೊಂಡಿದ್ದ ಸಂದರ್ಭದಲ್ಲಿ ವಿಷ್ಣುವರ್ಧನ್ ನನ್ನ ಬೆನ್ನಿಗೆ ನಿಂತಿದ್ದರು. 25 ಕೇಂದ್ರಗಳಲ್ಲಿ 25 ವಾರ ಸಿನಿಮಾ ಓಡಿತು. ವಿಷ್ಣುವರ್ಧನ್ ಅವರ ಕಟೌಟ್ ಅನ್ನು ಸುಟ್ಟರು, ಚಿತ್ರಮಂದಿರಗಳಲ್ಲಿ ಸಿನಿಮಾ ಓಡಬಾರದು ಎಂದು ಮೆಣಸಿನಪುಡಿ ಎರಚಿದರು, ಹೆಂಗಸರಿಗೆ ಬ್ಲೇಡ್‌ನಿಂದ ಕೊಯ್ದರು ಅಂಥ ಸಂದರ್ಭದಲ್ಲಿ ವಿಷ್ಣು ಅವರ ಅಭಿಮಾನಿಗಳು ನನ್ನ ಜೊತೆ ನಿಂತರು. ಅವರಿಗೆ ನಾನು ಚಿರಋಣಿ. ಸುಹಾಸಿನಿ ಅವರು ಮೊದಲ ದಿನವೇ ನನ್ನ ಬಳಿ ಜಗಳ ಮಾಡಿದ್ದರು. ಮೊದಲ ದೃಶ್ಯದಲ್ಲೇ ವಿಷ್ಣುವರ್ಧನ್ ಅವರಿಗೆ ಕಪಾಳಕ್ಕೆ ಹೊಡೆಯುವ ಶಾಟ್ ತೆಗೆಯುತ್ತಿದ್ದೀರಲ್ಲಾ ಎಂದು ಕೇಳಿದ್ದರು. ಎರಡನೇ ಭಾಗಕ್ಕೆ ಪ್ರೇಕ್ಷಕರ ಸಲಹೆ, ಸೂಚನೆಗಳನ್ನು ಕೇಳಿದ್ದೇನೆ. ಇದರಲ್ಲಿ ಸೂಕ್ತವೆನಿಸಿದ್ದನ್ನು ಆಯ್ದುಕೊಳ್ಳುತ್ತೇವೆ’ ಎಂದರು.
‘ಕನ್ನಡ ಸಿನಿಮಾದಲ್ಲಿ ನಟಿಸಿ ಬಹಳ ವರ್ಷಗಳಾಯಿತು. ಬಂಧನ–2 ಮೂಲಕ ಮತ್ತೆ ಇತ್ತ ಬರುತ್ತಿರುವುದು ಸಂತೋಷದ ವಿಷಯ’ ಎನ್ನುತ್ತಾರೆ ಸುಹಾಸಿನಿ.
‘1984ರಲ್ಲಿ ನಾನು ಆರು ವರ್ಷದ ಹುಡುಗ. ಬಂಧನ ಚಿತ್ರೀಕರಣವನ್ನು ಒಂದು ಮೂಲೆಯಲ್ಲಿ ನಿಂತು ನೋಡುತ್ತಿದ್ದೆ. ಪ್ರತಿಯೊಬ್ಬರು ನಟನೆ ಮಾಡುವುದನ್ನು ನೋಡಿಕೊಂಡೇ ನಾನು ಬೆಳೆದಿದ್ದೇನೆ. ವಿಷ್ಣು ಅವರ ನಟನೆ ನೋಡಿ ಅವರ ಹಾಗೆ ನಾನು ನಟಿಸುತ್ತಿದ್ದೆ. ಇಂಥ ಮೈಲಿಗಲ್ಲಾದ ಸಿನಿಮಾದ ಮುಂದುವರಿದ ಭಾಗದಲ್ಲಿ ನಾನು ನಟಿಸುತ್ತಿದ್ದೇನೆ ಎನ್ನುವುದು ಹೆಮ್ಮೆ’ ಎಂದರು ಆದಿತ್ಯ.