Karnataka news paper

ಟೆಸ್ಟ್‌ ತಂಡಕ್ಕೆ ಬುಮ್ರಾ ಕ್ಯಾಪ್ಟನ್‌ ಆದರೆ ಕಷ್ಟವೆಂದ ಮಾಜಿ ಕೋಚ್‌ ಶಾಸ್ತ್ರಿ!


ಹೈಲೈಟ್ಸ್‌:

  • ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ಯಾಪ್ಟನ್‌ ಆಗುವುದು ಸರಿಯಲ್ಲ ಎಂದ ಮಾಜಿ ಕೋಚ್‌.
  • ಫಾಸ್ಟ್‌ ಬೌಲರ್‌ಗೆ ಕ್ಯಾಪ್ಟನ್ಸಿ ನಿಭಾಯಿಸುವುದು ಬಲು ಕಷ್ಟವೆಂದ ರವಿ ಶಾಸ್ತ್ರಿ.
  • ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ನೂತನ ಕ್ಯಾಪ್ಟನ್‌ ಆಯ್ಕೆ ಆಗಲಿದೆ.

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ವಿರಾಟ್‌ ಕೊಹ್ಲಿ ಟೆಸ್ಟ್‌ ತಂಡದ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟು ಅಚ್ಚರಿ ಮೂಡಿಸಿದರು. ಈಗ ಭಾರತ ಟೆಸ್ಟ್‌ ತಂಡದ ಮುಂದಿನ ನಾಯಕನ ಆಯ್ಕೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಫೆಬ್ರವರಿ ಅಂತ್ಯಕ್ಕೆ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಭಾಗವಾಗಿ ಭಾರತ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಆಡುವುದಿದೆ. ಇದಕ್ಕೂ ಮುನ್ನ ಭಾರತ ಟೆಸ್ಟ್‌ ತಂಡಕ್ಕೆ ಹೊಸ ಕ್ಯಾಪ್ಟನ್‌ ಆಯ್ಕೆಯಾಗಬೇಕು.

ಅಂದಹಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿ ವೇಳೆ ಭಾರತ ಟೆಸ್ಟ್‌ ತಂಡದ ನಾಯಕನಾಗುವ ಬಗ್ಗೆ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಆಸಕ್ತಿ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕೆಎಲ್‌ ರಾಹುಲ್‌ ಕೂಡ ಟೆಸ್ಟ್‌ ತಂಡದ ನಾಯಕತ್ವ ನಿಭಾಯಿಸುವ ಸಾಮರ್ಥ್ಯ ಹೊಂದಿರುವುದಾಗಿ ಹೇಳಿಕೊಂಡಿದ್ದರು.

ಟೀಮ್ ಇಂಡಿಯಾದಿಂದ ಅಶ್ವಿನ್‌ ಹೊರ ಬೀಳಲು ಇದೇ ಕಾರಣ!

ಹಲವು ಮಾಜಿ ಕ್ರಿಕೆಟಿಗರು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಪರ ಬ್ಯಾಟ್‌ ಬೀಸಿದರೆ, ಬಹುತೇಕರು ಮುಂದಿನ 2 ವರ್ಷಗಳ ಕಾಲ ರೋಹಿತ್‌ ಶರ್ಮಾ ಅವರಲ್ಲಿ ತಂಡದ ನಾಯಕತ್ವ ನಿಭಾಯಿಸುವ ಸಾಮರ್ಥ್ಯವಿದೆ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಜಸ್‌ಪ್ರೀತ್ ಬುಮ್ರಾ ಅವರಿಗೆ ಟೆಸ್ಟ್‌ ಕ್ಯಾಪ್ಟನ್ಸಿ ಕೊಟ್ಟರೆ ಕಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಪಿಲ್‌ ದೇವ್‌ ಅವರಂತಹ ಆಲ್‌ರೌಂಡರ್‌ ಆಗಿದ್ದರೆ ಮಾತ್ರ ನಾಯಕತ್ವ ಕೊಡಬಹುದು ಎಂದಿದ್ದಾರೆ.

“ಖಂಡಿತಾ ಇಲ್ಲ. ಈ ಬಗ್ಗೆ ನಾನೆಂದಿಗೂ ಆಲೋಚಿಸಿಲ್ಲ. ಭಾರತ ತಂಡದ ನಾಯಕತ್ವವನ್ನು ಒಬ್ಬ ಫಾಸ್ಟ್‌ ಬೌಲರ್‌ನಿಂದ ನಿಭಾಯಿಸುವುದು ಕಷ್ಟವಾಗುತ್ತದೆ. ಆತ ಆಲ್‌ರೌಂಡರ್‌ ಆಗಿದ್ದರೆ ಈ ಕೆಲಸ ಸುಲಭ. ಬಾಬ್‌ ವಿಲೀಸ್‌ ಅವರಂತಹ ದಿಗ್ಗಜರಿಂದ ಈ ಕೆಲಸ ನಿಭಾಯಿಸಲು ಸಾಧ್ಯವಾಗಿದೆ. ಆದರೆ, ಒಬ್ಬ ವೇಗದ ಬೌಲರ್ ತಂಡದ ಪರ ಆಕ್ರಮಣಕಾರಿ ಆಟದ ಮೂಲಕ ಮಾತ್ರವೇ ಕೊಡುಗೆ ಸಲ್ಲಿಸಬಲ್ಲರು,” ಎಂದು ಶೊಯೇಬ್‌ ಅಖ್ತರ್‌ ಅವರ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಶಾಸ್ತ್ರಿ ಹೇಳಿದ್ದಾರೆ.

‘ನಿಮ್ಮ ಮೇಲೆ ನಂಬಿಕೆ ಇಟ್ಟು ಆಡಿ’ ಕುಂಬ್ಳೆ ಮಾರ್ಗದರ್ಶನ ನೆನೆದ ಬಿಷ್ಣೋಯ್‌!

“ವಿಕೆಟ್‌ ಪಡೆದು ಪಂದ್ಯಗಳನ್ನು ಗೆದ್ದು ಕೊಡುವ ಕಡೆಗಷ್ಟೇ ಗಮನ ಕೊಡಬೇಕು. ಫಾಸ್ಟ್‌ ಬೌಲರ್‌ಗಳು ತಂಡದಲ್ಲಿ ದೀರ್ಘಕಾಲದವರೆಗೆ ಉಳಿಯುವುದು ಬಹಳಾ ಅಪರೂಪದ ಸಂಗತಿ. ಕಪಿಲ್‌ ದೇವ್‌, ಇಮ್ರಾನ್‌ ಖಾನ್‌ ಅಥವಾ ಸರ್‌ ಗ್ರಾಪೀಲ್ಡ್‌ ಅವರಂತಹ ಅದ್ಭುತ ಆಲ್‌ರೌಂಡರ್‌ ಆಗಿದ್ದರೆ ನಾಯಕತ್ವ ಕೊಡಬಹುದು. ಬುಮ್ರಾ ಅವರಂತಹ ಫಾಸ್ಟ್‌ ಬೌಲರ್‌ನಿಂದ ಕ್ಯಾಪ್ಟನ್ಸಿ ನಿಭಾಯಿಸುವುದು ಕಷ್ಟವಾಗುತ್ತದೆ. ಇದು ಸೂಕ್ತ ನಿರ್ಧಾರವೂ ಅಲ್ಲ,” ಎಂದಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಫೆ.25ರಂದು ಆರಂಭವಾಗಲಿದೆ. ದ್ವಿತೀಯ ಟೆಸ್ಟ್‌ ಮಾರ್ಚ್‌ 5ರಂದು ಮೊಹಾಲಿಯಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಭಾರತ ತಂಡ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ತಲಾ ಮೂರು ಪಂದ್ಯಗಳ ಟಿ20 ಮತ್ತು ಒಡಿಐ ಸರಣಿಗಳನ್ನು ಆಡಲಿದೆ.



Read more

[wpas_products keywords=”deal of the day gym”]